ಸ್ವಾಧೀನದಲ್ಲಿದ್ದರೆ ಸಂತಸವೇ?
ಒಮ್ಮೆ ಸಣ್ಣ ಗ್ರಾಮದಲ್ಲಿರುವ ನನ್ನ ಮಿತ್ರರೊಬ್ಬರಿಗೆ ಚಿನ್ನದಲ್ಲಿ ಹಣ ವಿನಿಯೋಗಿಸಬೇಕೆಂಬ ಮನಸ್ಸಾಯಿತು. ಅವರ ಊರಿನಲ್ಲಿ ಚಿನ್ನ ಕೊಂಡುಕೊಳ್ಳುವ ವ್ಯವಸ್ಥೆ ಇಲ್ಲವಾದ ಕಾರಣ, ನನ್ನಲ್ಲಿ ಕೇಳಿಕೊಂಡು ಅದಕ್ಕೆಂದು ನನ್ನ ಖಾತೆಗೆ ಹಣ ವರ್ಗಾಯಿಸಿದರು. ಆ ಹಣ ನನ್ನದಾಗಿರದೇ ಬೇರೆಯವರದ್ದಾದ್ದರಿಂದ ನನ್ನ ಖಾತೆಗೆ ಹಣ ಜಮಾ ಆದಾಗ ನನಗೆ ಯಾವುದೇ ರೀತಿಯ ಸಂತೋಷ ಉಂಟಾಗಲಿಲ್ಲ. ಆ ಸಮಯದಲ್ಲಿ ಚಿನ್ನದ ದರದಲ್ಲಿ ಏರಿಳಿತಗಳು ಇದ್ದುದರಿಂದ ಕೆಲಕಾಲ ಕಾದು ನೋಡಲು ನಾವಿಬ್ಬರೂ ನಿರ್ಧರಿಸಿದೆವು. ಸುಮಾರು ಒಂದು ತಿಂಗಳವರೆಗೂ ಆ ಹಣ ನನ್ನ ಖಾತೆಯಲ್ಲಿಯೇ ಇತ್ತು. ಅಷ್ಟು ದಿನಗಳವರೆಗೆ ಆ ಹಣ ನನ್ನ ಬಳಿ ಇದ್ದರೂ ಅದು ನನಗೆ ಖುಷಿಕೊಡಲಿಲ್ಲ. ಕಾರಣ ಅದು 'ನನ್ನದು' ಅಲ್ಲವಾದ್ದರಿಂದ. ನನ್ನಲ್ಲಿ ಹಣವಿತ್ತು, ಆದರೆ ಅದು 'ನನ್ನದು' ಎಂಬ ಭಾವನೆ ಇರಲಿಲ್ಲ. ಯಾವುದಾದರೊಂದು ವಸ್ತುವನ್ನು ಹೊಂದಿರುವುದರಿಂದ ನಮಗೆ ಸಂತೋಷ ಸಿಗುವುದಿಲ್ಲ. ಆ ಹೊಂದಿರುವ ವಸ್ತು 'ನನ್ನದು' ಎಂಬ ಭಾವನೆ ನಮಗೆ ಸಂತೋಷವನ್ನು ನೀಡುತ್ತದೆ.
ಚಲನಚಿತ್ರದಲ್ಲಿ ಬಂದು ಹೋಗುವ ಒಬ್ಬ ಶ್ರೀಮಂತ ನಾಯಕ ನಟನನ್ನು ಊಹಿಸಿ. ದೃಶ್ಯಕ್ಕೆ ಬೇಕಾಗಿ ಆ ನಾಯಕನ ಬಳಿ ಅರಮನೆಯಂತಹ ಮನೆ, ಐಷಾರಾಮಿ ಕಾರುಗಳು. ಮನೆಯನ್ನು, ಆತನನ್ನು ನೋಡಿಕೊಳ್ಳಲು ಆಳುಗಳು ಇತ್ಯಾದಿ. ಇವನ್ನೆಲ್ಲ ದೃಶ್ಯಕ್ಕಾಗಿ ಉಪಯೋಗಿಸುವ ನಟ ಎಂದೂ ಇದನ್ನೆಲ್ಲ 'ನನ್ನದು' ಎಂದು ಎಣಿಸುವುದಿಲ್ಲ. ತನ್ನ ಪಾತ್ರಕ್ಕೆ ಜೀವ ತುಂಬಲು ಆ ದೃಶ್ಯಕ್ಕೆ ಇವನ್ನೆಲ್ಲ ಉಪಯೋಗಿಸಿಕೊಂಡು ಅಭಿನಯಿಸುತ್ತಾನೆ. ಇವೆಲ್ಲವನ್ನು ಉಪಯೋಗಿಸಿಕೊಂಡರೂ ತಾನು ಇದರ ಒಡೆಯ ಅಥವಾ ಇವೆಲ್ಲ 'ನನ್ನದು' ಎನ್ನುವ ಭಾವನೆ ಅವನಲ್ಲಿ ಮೂಡುವುದಿಲ್ಲ. ಹಾಗೆಯೇ ನಾವೂ ಕೂಡ ಹಲವು ಬಗೆಯ ವಸ್ತುಗಳನ್ನು ಉಪಯೋಗಿಸುತ್ತೇವೆ. ಬಾಡಿಗೆಯ ಮನೆ, ಬಾಡಿಗೆಯ ವಾಹನ ಇತ್ಯಾದಿ. ಅದ್ಯಾವುದೂ ನಮ್ಮದಲ್ಲವಾದರೂ ಅದರ ಪ್ರಯೋಜನ ಪಡೆಯುವುದನ್ನು ಪರಿಗಣಿಸಿದರೆ, ಕೆಲವು ಕ್ಷಣವಾದರೂ ನಾವು ಅದರ ಒಡೆಯರಾಗಿರುತ್ತೇವೆ. ಆದರೆ ಅವೆಲ್ಲ 'ನನ್ನದು' ಎನ್ನುವ ಭಾವನೆ ಸದಾ ನಮ್ಮಲ್ಲಿ ಇಲ್ಲದಿರುವುದರಿಂದ ನಮ್ಮಲ್ಲಿ ಸಂತಸವಿರುವುದಿಲ್ಲ. 'ನನ್ನದು' ಎಂಬ ಭಾವನೆ ನಮ್ಮ ಮನದ ಮೂಲೆಯಲ್ಲಿ ಮೂಡಿದಾಗ ಮಾತ್ರ ನಾವು ಸಂತೋಷಪಡುತ್ತೇವೆ.
ಒಬ್ಬ ವೃದ್ಧ ತಂದೆಯ ಬಳಿ ಇರುವ ಒಂದೇ ಒಂದು ಆಸ್ತಿಯೆಂದರೆ ಅವನ ಮನೆ. ಅವನಿಗೆ ಇಬ್ಬರು ಮಕ್ಕಳು. ಹಿರಿಯ ಮಗ ವಂಚಕನೂ, ಕುತಂತ್ರಿಯೂ ಆದ್ದರಿಂದ ತಂದೆಗೆ ಕಿರಿಯ ಮಗನೆಂದರೆ ವಿಶೇಷ ಪ್ರೀತಿ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಮನೆಯೊಡೆಯ ತಂದೆಯಾಗಿ, ಮನೆ ಅವನ ಸ್ವಾಧೀನದಲ್ಲಿರುವುದರಿಂದ ಈ ಮನೆ 'ನನ್ನದು' ಎಂದು ಅವನ ನಂಬಿಕೆ. ತಂದೆ ತನ್ನನ್ನೇ ಹೆಚ್ಚು ಪ್ರೀತಿಸುವುದರಿಂದ ಕೊನೆಯಲ್ಲಿ ತಂದೆ ಈ ಮನೆಯನ್ನು ನನಗೇ ಕೊಡುತ್ತಾನೆ, ಮುಂದೆ ಎಂದಾದರೂ ಇದು 'ನನ್ನದು' ಎನ್ನುವುದು ಕಿರಿಯ ಮಗನ ನಂಬಿಕೆ. ಆದರೆ ಹಿರಿಯ ಮಗ ಮೋಸದಿಂದ ಕೆಲ ವರ್ಷದ ಹಿಂದೆಯೇ ತಂದೆಯನ್ನು ವಂಚಿಸಿ, ಯಾರಿಗೂ ಅರಿವಿಲ್ಲದಂತೆ ಮನೆಯ ಕಾಗದಪತ್ರಗಳನ್ನು ಬದಲಿಸಿ, ಮನೆಯ ಒಡೆತನವನ್ನು ತನ್ನ ಹೆಸರಿಗೆ ಮಾಡಿಸಿಕೊಂಡದ್ದು ಇತರರಿಗೆ ತಿಳಿಯದ ವಿಷಯ. ಮನೆ ಈಗಾಗಲೇ ತನ್ನ ಹೆಸರಿನಲ್ಲಿ ಇರುವುದರಿಂದ ಮನೆ 'ನನ್ನದು' ಎಂಬುದು ಹಿರಿಯ ಮಗನ ನಂಬಿಕೆ. ಈ ಮನೆ 'ನನ್ನದು' ಎಂದು ಯೋಚಿಸುತ್ತಿರುವ ತಂದೆ, 'ನನ್ನದಾಗುತ್ತದೆ' ಎಂದು ನಂಬಿರುವ ಕಿರಿಯ ಮಗ ಮತ್ತು 'ನನ್ನದಾಗಿದೆ' ಎಂದು ತಿಳಿದಿರುವ ಹಿರಿಯ ಮಗ-ಹೀಗೆ ಬೇರೆ ಬೇರೆ ವಿಧದಿಂದ ಯೋಚಿಸಿ ಪ್ರತಿಯೊಬ್ಬರೂ 'ನನ್ನದು' ಎಂಬ ಭಾವನೆಯನ್ನು ತಳೆದು ಸಂತೋಷಪಡುತ್ತಿದ್ದಾರೆ. ಸತ್ಯದ ಅರಿವು ಆಗುವವರೆಗೂ ಈ ಭಾವ ಮುಂದುವರಿಯುತ್ತಲೇ ಇರುತ್ತದೆ. ಇದರ ಅರ್ಥವೇನೆಂದರೆ, ಅವರೆಲ್ಲ ಸಂತೋಷದಿಂದ ಇರಲು ಕಾರಣ ನಿಜವಾಗಿಯೂ ಅವರು ಹೊಂದಿದ್ದು, ಅನುಭವಿಸುತ್ತಿರುವುದಕ್ಕಿಂತ 'ನನ್ನದು' ಎಂಬ ಭಾವನೆಯಿಂದ.
(ಮುಂದುವರಿಯುವುದು)
-ಕಿರಣ್ ಉಪಾಧ್ಯಾಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

