ಸ್ವಾಮೀಜಿಯ ಧೈರ್ಯ ದರ್ಶನ!
ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ಆಗತಾನೇ ಅಂಕುರಿಸುತ್ತಿದ್ದ ಕಾಲ. ಬ್ರಿಟಿಷರು ಭಾರತೀಯ ಪೊಲೀಸ್ ಅಧಿಕಾರಿಗಳ ಮೂಲಕ ಚಳವಳಿಯನ್ನು ನಿಯಂತ್ರಿಸುತ್ತಿದ್ದರು. ಈ ಪೊಲೀಸರು ಕಾಷಾಯ ವಸ್ತ್ರ ಧರಿಸಿ ಚಳವಳಿಯ ಸಂದೇಶಗಳನ್ನು ರವಾನಿಸುವ ಕೃತ್ರಿಮ ಸಾಧುಗಳ ಮೇಲೆ ಒಂದು ಕಣ್ಣಿಟ್ಟಿದ್ದರು.
ಒಮ್ಮೆ ವಿವೇಕಾನಂದರು ತಮ್ಮ ಗುರುಭಾಯಿಗಳೊಡನೆ ಇದ್ದಾಗ ಅಪರಾಧ ತನಿಖಾ ವಿಭಾಗದ ಉನ್ನತ ಅಧಿಕಾರಿಯೊಬ್ಬ ಬಂದ. ಸ್ವಾಮೀಜಿಯೊಡನೆ ತುಂಬಾ ವಿಶ್ವಾಸದಿಂದ ಮಾತನಾಡಿ, ಅವರ ವಿಚಾರಧಾರೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ರಾತ್ರಿ ತಮ್ಮ ಮನೆಗೆ ಊಟಕ್ಕೆ ಬರಬೇಕೆಂದು ಆಹ್ವಾನಿಸಿದ. ಆತನ ಮನೆಗೆ ಹೋದಾಗ ಆ ಅಧಿಕಾರಿ ಮುಖಭಾವ ಇದ್ದಕ್ಕಿದ್ದಂತೆ ಬದಲಾಯಿತು. 'ನಿಜವನ್ನು ಒಪ್ಪಿಕೊಂಡುಬಿಡು, ಸುಮ್ಮನೆ ಕಥೆಕಟ್ಟಲು ನೋಡಬೇಡ. ನನಗೆ ನಿನ್ನ ವಿಷಯವೆಲ್ಲ ಗೊತ್ತಿದೆ. ನೀನು ಮತ್ತು ನಿನ್ನ ತಂಡ ಸರ್ಕಾರದ ವಿರುದ್ಧ ಪಿತೂರಿ ಮಾಡುತ್ತಿರುವುದು ನನಗೆ ಗೊತ್ತು' ಎಂದೆಲ್ಲ ಆಪಾದಿಸಿದ.
ಸ್ವಾಮೀಜಿಗೆ ಅಪಮಾನ ಸಹಿಸಿಕೊಳ್ಳಲಾಗಲಿಲ್ಲ. 'ನಿನಗೆ ಅಷ್ಟೊಂದು ವಿಷಯ ತಿಳಿದಿದ್ದರೆ ನಮ್ಮ ವಿರುದ್ಧ ಮೊಕದ್ದಮೆ ಹೂಡುವುದಿಲ್ಲವೇಕೆ?' ಎನ್ನುತ್ತಾ ಬಾಗಿಲನ್ನು ಹಾಕಿ ಮೊಣಕೈಯಿಂದ ಅಧಿಕಾರಿಯ ಕುತ್ತಿಗೆಯನ್ನು ಹಿಡಿದು 'ನೀನು ನನ್ನ ಹಾಗೂ ನಮ್ಮವರ ಮೇಲೆ ಸುಳ್ಳು ಆಪಾದನೆ ಮಾಡಿದೆ. ಆದರೆ ನಾನು ಅನ್ಯಾಯಕ್ಕೆ ಪ್ರತಿ ಅನ್ಯಾಯ ಮಾಡುವುದಿಲ್ಲ. ನಾನು ನಿಜಕ್ಕೂ ಕುತಂತ್ರಿಯೇ ಆಗಿದ್ದರೆ ಕ್ಷಣಮಾತ್ರದಲ್ಲಿ ನಿನ್ನ ಕತ್ತನ್ನು ಹಿಸುಕಿಹಾಕಬಹುದು. ಹಾಗೆ ಮಾಡಿದರೆ ನನ್ನನ್ನು ತಡೆಯುವವರಾರಿದ್ದಾರೆ? ಬಿಟ್ಟಿದ್ದೇನೆ, ಬದುಕಿಕೊ!' ಎಂದು ಬಾಗಿಲನ್ನು ತೆರೆದು ಗಂಭೀರವಾಗಿ ಹೊರನಡೆದರು. ಸ್ವಾಮೀಜಿ ಧೈರ್ಯವನ್ನು ಕಂಡು ಅಧಿಕಾರಿ ಬೆರಗಾಗಿ ಹೋದ.
-ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

