ಅವರು ನಿಜವಾಗಿಯೂ ಶ್ರೀಮಂತರೆ?
ಯಾವುದೇ ಒಂದು ವಸ್ತು ನಮ್ಮ ಸ್ವಾಧೀನದಲ್ಲಿದ್ದರೆ ಶ್ರೀಮಂತಿಕೆ ಎಂದು ಪರಿಗಣಿಸಲಾಗದು. ಶ್ರೀಮಂತಿಕೆಯ ಭಾವನೆ ಇರುವುದು ಮುಖ್ಯವಾಗುತ್ತದೆ. ಉದಾಹರಣೆಗೆ ಕಾರನ್ನು ನಡೆಸುವುದು ಶ್ರೀಮಂತಿಕೆ ಎಂದಾದರೆ, ಬಾಡಿಗೆಗೆ ವಾಹನ ನಡೆಸುವವರು, ಟ್ಯಾಕ್ಸಿ ಡ್ರೈವರುಗಳೆಲ್ಲ ಶ್ರೀಮಂತರು. ವಿಮಾನ ನಡೆಸುವುದು ಶ್ರೀಮಂತಿಕೆ ಎಂದಾದರೆ ವಿಮಾನ ನಡೆಸುವ ಪೈಲಟ್ಗಳು, ವಿಮಾನದೊಳಗೆ ಕೆಲಸ ಮಾಡುವವರೂ ಶ್ರೀಮಂತರು. ದೊಡ್ಡ ಮೊತ್ತದ ವಹಿವಾಟು, ವ್ಯವಹಾರ ನಡೆಸುವವರು, ದೊಡ್ಡ ಬಟವಾಡೆಗೆ ಸಹಿ ಹಾಕುವುದೇ ಶ್ರೀಮಂತಿಕೆಎಂದಾದರೆ ಬ್ಯಾಂಕ್ ಮ್ಯಾನೇಜರ್ಗಳು; ಹೆಚ್ಚು ಹಣವನ್ನು ಎಣಿಸುವುದು, ಪಡೆಯುವುದು, ಕೊಡುವುದು ಶ್ರೀಮಂತಿಕೆಯಾದರೆ ಬ್ಯಾಂಕ್ನ ಕ್ಯಾಶಿಯರ್ಗಳು; ಹೆಚ್ಚು ಹಣ ಸಂಗ್ರಹಿಸಿ ಒಂದು ಕಡೆ ಇಡುವುದಾದರೆ ಬ್ಯಾಂಕಿನ ಸ್ಟ್ರಾಂಗ್ರೂಮ್ನ ವಾಚ್ಮನ್ಗಳು ಶ್ರೀಮಂತರು. ಕೈಕೆಳಗೆ ಕೆಲಸ ಮಾಡಲು ಸಾಕಷ್ಟು ನೌಕರರಿದ್ದರೆ ಶ್ರೀಮಂತಿಕೆ ಎಂದಾದರೆ ಖಾಸಗಿ ಕಂಪನಿಯ ಮ್ಯಾನೇಜರ್ಗಳು ಶ್ರೀಮಂತರು. ಏನೂ ಮಾಡದೆ ಸುಮ್ಮನೇ ಕುಳಿತಿರುವುದು ಶ್ರೀಮಂತಿಕೆ ಎಂದಾದರೆ ನಿರುದ್ಯೋಗಿಗಳು ಶ್ರೀಮಂತರು. ತುಂಬಾ ಕೆಲಸ ಮಾಡುವುದು ಶ್ರೀಮಂತಿಕೆ ಎಂದಾದರೆ ಕೂಲಿಯವರು, ಜ್ಞಾನವೇ ಶ್ರೀಮಂತಿಕೆ ಎಂದಾದರೆ ವಿಜ್ಞಾನಿಗಳು, ಪ್ರಾಧ್ಯಾಪಕರು, ಗುರುಗಳು ಶ್ರೀಮಂತರು. ಒಂದು ವೇಳೆ ಮನಃಶಾಂತಿ ಅಥವಾ ಸುಖವೇ ಶ್ರೀಮಂತಿಕೆ ಎಂದಾದರೆ, ಘನ ನಿದ್ರೆಯಲ್ಲಿ ಎಲ್ಲರೂ ಸರಿಸಮಾನ ಶ್ರೀಮಂತರು. ಶ್ರೀಮಂತಿಕೆ ಎಂಬುದು ಅಂತಿಮವಾಗಿ ಕಲ್ಪನೆಗೆ, ವಿಚಾರಕ್ಕೆ ಅಥವಾ ಭಾವನೆಗೆ ಸಂಬಂಧಪಟ್ಟ ವಿಷಯ. ಯೋಚಿಸಿ, ಒಂದೊಮ್ಮೆ ಎಲ್ಲ ಜನರು ಅಥವಾ ನೌಕರರು ಒಡೆತನದ ಬಗ್ಗೆ ಅಥವಾ ಒಡೆಯನ ವಿಚಾರ ಮರೆತು, ಎಲ್ಲವೂ ತಮ್ಮದೇ ಎಂಬ ಭಾವನೆಯಿಂದ ಸುಖದ ಅನುಭವ ಪಡೆಯಲು ಆರಂಭಿಸಿದರೆ ಒಡೆಯರು ಎನ್ನಿಸಿಕೊಂಡವರು ಏನು ಮಾಡಲು ಸಾಧ್ಯ? ಯಾರೇ ಆದರೂ ಯಾವುದೇ ವ್ಯಕ್ತಿಯ ಭಾವನೆಯನ್ನೋ ಅಥವಾ ಸಮಾಧಾನವನ್ನೋ ಆಕ್ಷೇಪಿಸುವಂತಿಲ್ಲವಲ್ಲ! ಅವರೆಲ್ಲರೂ ಶ್ರೀಮಂತರೇ ಆದರೆ, ಅವರಿಗೆಲ್ಲ ಶ್ರೀಮಂತಿಕೆಯ ಬಗ್ಗೆ ಬೇರೆಯದೇ ಆದ ಪರಿಕಲ್ಪನೆಯಿದೆ. ಆದ್ದರಿಂದ ಅದರ ಸ್ವಾಧೀನತೆ ಮತ್ತು ಬಳಕೆಯ ಅರಿವು ಅವರಿಗೆ ಇರುವುದಿಲ್ಲ. ಇನ್ನೊಂದು ಉದಾಹರಣೆ ಎಂದರೆ, ಉತ್ತಮ ಸಂಪಾದನೆ ಇರುವ ಗಂಡಸಿನ ಮನೆಯಲ್ಲಿರುವ ಹೆಂಡತಿ. ಅವಳ ಹೆಸರಿನಲ್ಲಿ ಯಾವುದೇ ಆಸ್ತಿಯಿಲ್ಲ. ಮನೆ, ಕಾರು, ಜಮೀನು, ವ್ಯವಹಾರ, ಹಣ, ಬ್ಯಾಂಕ್ ಬ್ಯಾಲೆನ್ಸ್ ಯಾವುದೂ ಅವಳ ಹೆಸರಿನಲ್ಲಿಲ್ಲ. ನೌಕರರ ಸಂಬಳ, ಮನೆಯ ಖರ್ಚು, ಆಸ್ಪತ್ರೆಯ ಖರ್ಚು, ತೆರಿಗೆ, ವಿದ್ಯುತ್, ಟೆಲಿಫೋನ್ ಬಿಲ್ ಮೊದಲಾದ ಯಾವುದೇ ಖರ್ಚನ್ನು ಆಕೆ ಭರಿಸುವುದಿಲ್ಲ.
ಆಕೆಗೆ ಯಾವುದೇ ಸಂಪಾದನೆ ಇಲ್ಲದಿದ್ದರೂ ಆಕೆಯ ಬಳಿ ಕ್ರೆಡಿಟ್ ಕಾರ್ಡ್ ಇರುತ್ತದೆ. ಅದರ ಬಿಲ್ ಕೂಡ ಆಕೆ ಭರಿಸುವುದಿಲ್ಲ. ಆದರೆ ಗಂಡನೆಂಬ ವ್ಯವಸ್ಥಾಪಕನನ್ನು ಪ್ರೀತಿಯಿಂದಲೋ, ಅಧೀನದಲ್ಲಿಟ್ಟುಕೊಂಡೋ ಅಥವಾ ಅಧಿಕಾರ ನಡೆಸಿಯೋ ಸಂಪಾದಿಸುವಂತೆ, ಕಾರ್ಯನಿರ್ವಹಿಸುವಂತೆ ಜವಾಬ್ದಾರಿಯನ್ನು ವಹಿಸಿಕೊಡುತ್ತಾಳೆ. ಮಾಲೀಕತ್ವದ ಗೋಜಿಗೂ ಹೋಗದೆ ಎಲ್ಲ ರೀತಿಯ ಸಂಪತ್ತನ್ನೂ, ಸುಖವನ್ನೂ ಅನುಭವಿಸುತ್ತಾಳೆ ಎಂದಾದರೆ ಅವಳು ಶ್ರೀಮಂತಳೇ ಅಲ್ಲವೇ?
ಸಮಾಜದ ದೃಷ್ಟಿಯಲ್ಲಿ ಅಥವಾ ಜನರ ನೋಟದಲ್ಲಿ ಅವಳು ಶ್ರೀಮಂತಳೆಂದು ಹೇಳಿಕೊಳ್ಳುವ ಅಥವಾ ದರ್ಜೆಯನ್ನು ತೋರಿಸುವ ಯಾವುದೇ ದಾಖಲೆ, ದಸ್ತಾವೇಜು, ಪುರಾವೆ ಇಲ್ಲ. ಅಲ್ಲದೇ ಅವಳೂ ಕೂಡ ಈ ಎಲ್ಲ ಗಿಮಿಕ್ಕುಗಳಿಗೆ ತಲೆ ಕೆಡಿಸಿಕೊಂಡಿಲ್ಲ. ಆದರೆ ಅವಳ ಮನಸ್ಸಿನಲ್ಲಿ ಗಂಡನೆಂಬ ವ್ಯವಸ್ಥಾಪಕನನ್ನು ಒಳಗೊಂಡು ಈ ಎಲ್ಲ ಆಸ್ತಿಯೂ 'ನನ್ನದು'ಎಂಬ ಬಲವಾದ ಭಾವನೆ ಮೂಡಿರುತ್ತದೆ. ತನ್ನ ಹಕ್ಕನ್ನು ಪ್ರೀತಿಯಿಂದ, ವಿನಂತಿಯಿಂದ ಅಥವಾ ಪ್ರಾರ್ಥನೆಯಿಂದ ಪಡೆದುಕೊಳ್ಳುವ ಕಲೆ ಸ್ತ್ರೀಯರಲ್ಲಿ ಸ್ವಾಭಾವಿಕವಾಗಿಯೇ ಇರುವುದರಿಂದ ಪತಿಯೆಂಬ ವ್ಯವಸ್ಥಾಪಕನನ್ನು ವಿನಯದಿಂದ, ಸಭ್ಯಳಾಗಿಯೇ ತನ್ನ ಒಳಿತಿಗಾಗಿ ಬಳಸಿಕೊಳ್ಳುತ್ತಾಳೆ ಎಂದಾದರೆ ಅವಳು ಶ್ರೀಮಂತಳು ಎಂದು ಅನಿಸುವುದಿಲ್ಲವೇ? ನಿಜವಾಗಿಯೂ ಸ್ತ್ರೀಯರು ತುಂಬಾ ಬುದ್ಧಿವಂತರು. ಪುರುಷರನ್ನು ಅವಿರತ ಹೋರಾಟಕ್ಕೆ ಅವಿಶ್ರಾಂತ ಓಟಕ್ಕೆ ಪ್ರೇರೇಪಿಸಿ, ಪ್ರೋತ್ಸಾಹಿಸಿ, ಫಲಾನುಭವದಲ್ಲಿ ಸಮಭಾಗಿಗಳಾಗಿರುತ್ತಾರೆ.
(ಮುಂದುವರಿಯುವುದು)
-ಕಿರಣ್ ಉಪಾಧ್ಯಾಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

