ಬೈಟುಕಾಫಿ

ಬೆಲೆ ಬರುವುದು ಹೋಲಿಕೆಯಿಂದ

Published On :

ಇತ್ತೀಚಿನ ದಿನಗಳಲ್ಲಿ ಮೂಲಭೂತವಾದದ್ದನ್ನೋ, ಅನಿವಾರ್ಯ ಅನಿಸಿದ್ದನ್ನೋ ಹೊಂದಿದ ಮೇಲೆಯೂ, ಆಸ್ತಿ ಗಳಿಸುವುದಕ್ಕೋಸ್ಕರವೋ ಅಥವಾ ಗಳಿಸಿದ ಆಸ್ತಿಯ ಮೌಲ್ಯವರ್ಧನೆಗೋ ಗುದ್ದಾಟ ನಡೆದೇ ಇರುತ್ತದೆ. ನಾವು ಏನನ್ನು ಒಟ್ಟುಗೂಡಿಸುತ್ತಿದ್ದೇವೆ, ಅವುಗಳೆಲ್ಲ ಅನಿವಾರ್ಯವೋ, ಅವಶ್ಯಕವೋ, ಪ್ರಯೋಜಕವೋ-ಅಪ್ರಯೋಜಕವೋ ಎಂದು ವಿಚಾರ ಮಾಡದೆಯೇ ಆಸ್ತಿಯ ಹೆಸರಿನಲ್ಲಿ ಏನೇನೆಲ್ಲ ಕಲೆಹಾಕುತ್ತೇವೆ. ಈ ಲೋಕದಲ್ಲಿ ಯಾವುದೇ ವಸ್ತುವಿಗೆ ಅದರದ್ದೇ ಆದ ಬೆಲೆ ಇಲ್ಲ. ಪ್ರತಿಯೊಂದು ವಸ್ತುವಿಗೂ ಬೆಲೆ ಬರುವುದು ಹೋಲಿಕೆಯಿಂದ ಮಾತ್ರ. ಅಥವಾ ನಾವಾಗಿಯೇ ಅದಕ್ಕೊಂದು ಬೆಲೆ ಕಟ್ಟುವುದರಿಂದಾಗಿ ಮಾತ್ರ. ಸೌಂದರ್ಯವಾಗಲಿ, ಆರೋಗ್ಯವಾಗಲಿ, ಪ್ರತಿಭೆಯಾಗಲಿ, ಬುದ್ಧಿವಂತಿಕೆಯಾಗಲಿ, ಹಣವಾಗಲಿ ಅಥವಾ ಆಸ್ತಿಯಾಗಲಿ ಬೆಲೆ ಬರುವುದು ಹೋಲಿಕೆಯಿಂದ ಅಥವಾ ತುಲನೆಯಿಂದ. ಮೌಲ್ಯದ ವಿಚಾರ ಯಾವತ್ತಿದ್ದರೂ ಸಂದರ್ಭ ಮತ್ತು ಸಮಯದ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಸಂದರ್ಭ ಮತ್ತು ಸಮಯದ ವ್ಯಾಪ್ತಿಗೆ ಒಳಪಟ್ಟರೆ ಏನೇ ಆದರೂ ಅದು ನಿಜವಾಗಿ ಸತ್ಯವಲ್ಲ. ಅದು ಕೇವಲ ಸಾಂದರ್ಭಿಕವಾದಂತಹ ಸತ್ಯ.
ಬಂಗಾರವೂ ಇತರೆ ಲೋಹದಂತೆಯಾದರೂ ಅದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇರುವುದು ನಮ್ಮಿಂದಾಗಿ. ಸಾಮಾನ್ಯ ಲೋಹಕ್ಕೆ ಬೆಲೆ ಕಟ್ಟಿ ನಾವು ಅದನ್ನು ಬಂಗಾರವನ್ನಾಗಿಸಿದ್ದೇವೆ. ಲೋಕದಲ್ಲಿ ಬಹುತೇಕ ವಸ್ತುಗಳು ಹಾಗೆಯೇ. ಅದಕ್ಕೆ ವಿಶೇಷತೆ ಏನೂ ಇಲ್ಲದಿದ್ದರೂ ಜನರು ಅದಕ್ಕೊಂದು ಬೆಲೆ ಕಟ್ಟಿ ಅದನ್ನು ಬೆಲೆಬಾಳುವ ವಸ್ತುವನ್ನಾಗಿಸುತ್ತಾರೆ. ಒಂದು ಹೊಲದಲ್ಲಿ ಏನೂ ಬೆಳೆಯದಿದ್ದರೆ ಆ ಹೊಲಕ್ಕೆ ಬೆಲೆ ಇಲ್ಲ. ಹಾಗೆಯೇ ಪಟ್ಟಣದಲ್ಲಿ ವ್ಯಾಪಾರಕ್ಕೆ ಅನುಕೂಲವಾಗುವ ಭೂಮಿ ಇದ್ದರೆ ಅದಕ್ಕೆ ಬೆಲೆ ಹೆಚ್ಚು. ಅದೇ ವಿಸ್ತೀರ್ಣದ ಭೂಮಿ ಊರಿನಿಂದ ಸ್ವಲ್ಪ ದೂರವಿದ್ದರೆ ಬೆಲೆ ಕಡಿಮೆ. ಅದು ಇರುವ ಸ್ಥಳಕ್ಕೆ ಹೊಂದಿಕೊಂಡು ಆ ಭೂಮಿಯ ಬೆಲೆ ನಿರ್ಣಯವಾಗುತ್ತದೆ. ಯಾವುದಾದರೂ ಒಂದು ಯುಕ್ತಿಯೇ ಆದರೂ ಅದು ಕೊಡುವ ಅಥವಾ ಕೊಡಬಹುದಾದ ಲಾಭ-ನಷ್ಟಕ್ಕೆ ಹೊಂದಿಕೊಂಡು ಅದರ ಬೆಲೆ ನಿರ್ಣಯಿಸಲಾಗುತ್ತದೆ. ಕೆಲಸಕ್ಕೆ ಬಾರದ ಆಸ್ತಿಯಾದರೂ ಅದಕ್ಕಿರುವ ಬೆಲೆಯಿಂದಾಗಿ ಅದನ್ನು ಹೊಂದಿದವ ಸಂತೋಷಪಡುತ್ತಾನೆ.
ಯಾವುದೇ ವಸ್ತುವಿಗೆ, ವಿಷಯಕ್ಕೆ ಬೆಲೆ ಬರುವುದು ಬೇಡಿಕೆ-ಪೂರೈಕೆಯನ್ನು ಅವಲಂಬಿಸಿ ಅಥವಾ ಇನ್ಯಾವುದೋ ಸಂಗತಿಯಿಂದಾಗಿ. ಇಂದು ಎಷ್ಟೇ ಬೆಲೆ ಬಾಳುವ ವಸ್ತು ಎಂದೆನಿಸಿದರೂ ಅದನ್ನು ಕೊಳ್ಳುವವರು ಯಾರೂ ಇಲ್ಲದಿದ್ದರೆ ಕ್ರಮೇಣ ಅದರ ಮೌಲ್ಯ ಕಡಿಮೆಯಾಗುತ್ತದೆ. ಇದರ ಅರ್ಥ, ನಾವು ಕೂಡಿ ಹಾಕಿದ ಆಸ್ತಿಯಾಗಲಿ, ಕಲೆಹಾಕಿದ ಸಂಪತ್ತಾಗಲೀ ಅಥವಾ ಇನ್ನೇನೇ ಆದರೂ ಆಗಾಗ ಬದಲಾಗುವ ಮಾರುಕಟ್ಟೆಗೆ ಅಥವಾ ಸಂದರ್ಭಕ್ಕೆ ಹೊಂದಿಕೊಂಡಿರುತ್ತದೆ.
ವಿಶಾಲವಾದ ನಮ್ಮ ಜೀವನವನ್ನು ಕೂಲಂಕಷವಾಗಿ ಪರಿಶೀಲಿಸಿದರೆ, ಯಾವುದೇ ಪ್ರಯತ್ನವಿಲ್ಲದೇ ನಮ್ಮ ಆಸ್ತಿಯ ಮೌಲ್ಯ ಬದಲಾಗುವುದನ್ನು ಗಮನಿಸಬಹುದು. ಉದ್ಯಮ ಚೆನ್ನಾಗಿ ನಡೆಯದಿದ್ದರೆ, ನಾವು ಹೊಂದಿದ ಭೂಮಿಯ ಮೌಲ್ಯ ಕುಸಿದರೆ, ಆಸ್ತಿಯ ಸಂಖ್ಯಾಬಲ ಅಷ್ಟೇ ಇದ್ದರೂ ಬೆಲೆ ಕಡಿಮೆಯಾದುದಕ್ಕೆ ನಾವು ಖಿನ್ನರಾಗುತ್ತೇವೆ. ಅದೇ ಆಸ್ತಿಯ ಮೌಲ್ಯ ವೃದ್ಧಿಸಿದರೆ ನಾವು ಹರ್ಷಿತರಾಗುತ್ತೇವೆ. ಈ ಎಲ್ಲಾ ಮೌಲ್ಯಗಳೂ ಕ್ಷಣಿಕ. ಆದರೆ ಆ ಕ್ಷಣಿಕವಾದ ಮೌಲ್ಯಕ್ಕೆ ಹೊಂದಿಕೊಂಡು ನಾವು ಸಂತೋಷಪಡುತ್ತೇವೆ.
(ಮುಂದುವರಿಯುವುದು)


-ಕಿರಣ್ ಉಪಾಧ್ಯಾಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.