ನಮಗೂ, ಅವರಿಗೂ ವ್ಯತ್ಯಾಸವೇನು?
ವಿವಾಹ ಪೂರ್ವ ಲೈಂಗಿಕತೆಯಿಂದ ನಮ್ಮ ದೇಶಕ್ಕೂ ಮತ್ತು 'ಮುಂದುವರಿದಿರುವ' ಪಾಶ್ಚಾತ್ಯ ದೇಶಗಳಿಗೂ ವ್ಯತ್ಯಾಸವೇ ಇಲ್ಲದಂತಾಗುತ್ತದೆ. ಋಷಿಮುನಿಗಳು, ಆಚಾರ್ಯರು, ಧರ್ಮ ಗುರುಗಳು ಹುಟ್ಟಿದಂಥ ಈ ನಮ್ಮ ನಾಡಿನಲ್ಲಿ ರಕ್ತ ಸಂಬಂಧಗಳು, ಸಂಪ್ರದಾಯಗಳು, ಧರ್ಮಗಳು ಮತ್ತು ಆಚಾರ-ವಿಚಾರಗಳು ಇನ್ನೂ ಉಳಿದುಕೊಂಡಿವೆ. ಮೌಲ್ಯಗಳ ಬಗ್ಗೆ ಪ್ರಪಂಚಕ್ಕೆ ತಿಳಿಸಿದ ರಾಷ್ಟ್ರದಲ್ಲಿ ವಿವಾಹ ಪೂರ್ವ ಲೈಂಗಿಕತೆ ದೊಡ್ಡ ಅಪರಾಧವಾಗುತ್ತದೆ. ಇನ್ನೂ ಸರಿಯಾಗಿ ಪದವಿ ಪಡೆಯದ ಮತ್ತು ಜೀವನದ ಅನುಭವವೂ ಆಗದ ಯುವಕ - ಯುವತಿಯರಿಗೆ, ಬದುಕನ್ನ ಕಟ್ಟಿಕೊಳ್ಳುವ ಸಾಮರ್ಥ್ಯವಿಲ್ಲದ ವಯಸ್ಸಿನಲ್ಲಿ ತಮ್ಮ ದೇಹ ಸುಖಕ್ಕಾಗಿ, ವಿವಾಹಪೂರ್ವ ಸೆಕ್ಸ್ನಲ್ಲಿ ಭಾಗಿಯಾಗುವುದು ಖಂಡಿತಾ ಒಳ್ಳೆಯದಲ್ಲ.
- ಆರ್. ತಿಪ್ಪೇರುದ್ರಪ್ಪ, ಬೆಳಗೆರೆ
ಸಾಸಿವೆ ಸುಖಕ್ಕೆ ಬೆಟ್ಟದ ದುಃಖ
ಜೀವನವೆಂಬುದು ಮೂರು ಗಂಟೆ ನೋಡಿ ಆನಂದಿಸುವ ಸಿನಿಮಾ ಅಲ್ಲ್ಲ. ಇಲ್ಲಿ ಭಾವನೆ ಹಾಗೂ ಸಂಬಂಧಗಳ ಬೆಸುಗೆ ಇದೆ. 'ಮಂಗನ ಕೈಯಲ್ಲಿ ಮಾಣಿಕ್ಯ' ಎನ್ನುವುದು ವಿವಾಹಪೂರ್ವ ಲೈಂಗಿಕತೆ ವಿಚಾರದಲ್ಲಿ ಯುವಜನತೆಗೆ ಚೆನ್ನಾಗಿ ಅನ್ವಯವಾಗುತ್ತದೆ. ಆಧುನಿಕತೆಯ ಹೆಸರಿನಲ್ಲಿ ಪಾಶ್ಚಿಮಾತ್ಯರ ಅನುಕರಣೆ ಸಂಪ್ರದಾಯಸ್ಥ ದೇಶವಾದ ಭಾರತಕ್ಕೆ ಸಾಧುವಲ್ಲ. ವಿಚ್ಛೇದನಗಳಲ್ಲಿ ಮಾನಸಿಕವಾಗಿ ಬಳಲುವರು ಮಕ್ಕಳೇ. ಅಂತಹದ್ದರಲ್ಲಿ ವಿವಾಹ ಪೂರ್ವ ಲೈಂಗಿಕತೆಯಿಂದ ಮಕ್ಕಳು ಹುಟ್ಟಿ, ನಂತರ ಯುವಕ/ಯುವತಿ ಬೇರೆ ಬೇರೆಯಾದರೆ ಈ ಸಂಬಂಧದಿಂದ ಜನಿಸಿದ ಮಕ್ಕಳ ಭವಿಷ್ಯವೇನು? ಮತ್ತಷ್ಟು ಅನಾಥಾಶ್ರಮಗಳನ್ನು ಹೆಚ್ಚಿಸಬೇಕಾದಿತು.'ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡ' ಎನ್ನುವ ಉಕ್ತಿಯಂತೆ ವಿವಾಹಪೂರ್ವ ಲೈಂಗಿಕತೆ ಸಾಗರದಷ್ಟು ಸಮಸ್ಯೆಗಳ ಹುಟ್ಟಿಗೆ ಕಾರಣವಾಗುತ್ತದೆ.
- ಮಹಾಂತೇಶ ಅ. ಗುಡೋಡಗಿ, ಬೆಳಗಾವಿ
ನಮ್ಮ ಸಂಸ್ಕೃತಿಯೇ ಇರಲಿ
ವಿವಾಹದಂಥ ಬಹುಮುಖ್ಯ ಕಾರ್ಯಕ್ಕೆ ನಮ್ಮ ಸಂಸ್ಕೃತಿಯಲ್ಲಿ ಪ್ರಮುಖ ಸ್ಥಾನವಿದೆ. ನಮ್ಮ ಸಮಾಜದಲ್ಲಿ ಹೆಣ್ಣಿಗೆ ಪೂಜನೀಯ ಸ್ಥಾನವಿದೆ. ಹೆಣ್ಣು ಮಗಳಾಗಿ, ಸೊಸೆಯಾಗಿ, ಹೆಂಡತಿಯಾಗಿ, ತಾಯಿಯಾಗಿ ವಿಭಿನ್ನ ಸ್ಥಾನದಲ್ಲಿ ಗೌರವ ಪಡೆಯುತ್ತಾಳೆ. ಗೃಹಿಣಿಯಾಗಿ ತಾಯ್ತನ ಪಡೆದಾಗ ಅವಳ ಗೌರವ ಇಮ್ಮಡಿಸುತ್ತದೆ. ಅವಳ ಮಗುವಿಗೂ ಸಮಾಜದಲ್ಲಿ ಒಳ್ಳೆ ಸ್ಥಾನ ಸಿಗುತ್ತದೆ. ಹೆತ್ತವರು, ಬಂಧು-ಬಳಗದ ಸಮ್ಮುಖದಲ್ಲಿ ಸಪ್ತಪದಿ ತುಳಿದು, ಅಗ್ನಿಸಾಕ್ಷಿಯಾಗಿ ಆಗುವ ವಿವಾಹಕ್ಕೆ ಸಮಾಜದಲ್ಲಿ ಭದ್ರತೆ ಇರುತ್ತದೆ. ಹೀಗಿರುವಾಗ ವಿವಾಹ ಪೂರ್ವ ಲೈಂಗಿಕ ಕ್ರಿಯೆಗೆ ಒಪ್ಪಿಗೆ ಕೊಡುವುದರಿಂದ ಸಮಾಜವೇ ಇಂದಿನ ಪೀಳಿಗೆಯ ಅವನತಿಗೆ ದಾರಿ ಮಾಡಿ ಕೊಟ್ಟಂತಾಗುತ್ತದೆ. ನಮ್ಮ ಸಮಾಜದ ಕಟ್ಟುಪಾಡುಗಳಿಗೆ ನಾವು ಗೌರವ ಕೊಡಬೇಕೇ ವಿನಾ ಪಾಶ್ಚಾತ್ಯರ ಅನುಕರಣೆ ನಮಗೆ ಬೇಡ. ವಿನಾಶದ ಅಂಚಿಗೆ ಹೋಗುತ್ತಿರುವ ಯುವ ಪೀಳಿಗೆಯನ್ನು ಮಹಾತ್ಮರ ಹಾದಿಯಲ್ಲಿ ಅವರ ಆದರ್ಶಗಳನ್ನು ಪಾಲಿಸುವತ್ತ ಕೊಂಡೊಯ್ಯೋಣ.
- ಎಸ್.ವೈ. ಜಲಜಾಕ್ಷಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

