ಪೊಟ್ಯಾಷಿಯಂ ಎಂಬ ರಹಸ್ಯ ಶಕ್ತಿ!
'ನಿತ್ಯದ ಆಹಾರದ ಜತೆಗೆ ಸ್ವಲ್ಪ ಪೊಟ್ಯಾಷಿಯಂ ಸೇವಿಸಿ, ಪಾರ್ಶ್ವವಾಯುವಿನ ಭೀತಿಯಿಂದ ಮುಕ್ತರಾಗಿ'- ಹೀಗೆಂದು ಹೇಳಿರುವುದು ಕ್ಯಾಲಿಫೋರ್ನಿಯಾದ ತಜ್ಞರು. ದಿನಕ್ಕೆ ಸ್ವಲ್ಪವೇ ಸ್ವಲ್ಪ ಪೊಟ್ಯಾಷಿಯಂ ನಿಮ್ಮ ಶರೀರದ ಒಳ ಹೊಕ್ಕರೂ ಪಾರ್ಶ್ವವಾಯುವಿನ ಸಾಧ್ಯತೆ ಶೇ 40ರಷ್ಟು ಕಡಿಮೆ ಆಗುವುದಂತೆ. ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿನ 50 ವರ್ಷ ದಾಟಿದ 859 ಪುರುಷರು, ಮಹಿಳೆಯರ ಆಹಾರ ಕ್ರಮವನ್ನು ಅಭ್ಯಸಿಸಿದ ಬಳಿಕ ಸಂಶೋಧಕರು ಇಂಥ ಹೇಳಿಕೆ ನೀಡಿದ್ದಾರೆ. ಕಡಿಮೆ ಮತ್ತು ಅಧಿಕ ಪೊಟ್ಯಾಷಿಯಂನಿಂದ ಕೂಡಿದ ಆಹಾರ ಸೇವಿಸುವವರ ಆರೋಗ್ಯ ದಾಖಲೆಗಳನ್ನು ಅವರು ಪ್ರತ್ಯೇಕವಾಗಿ ದಾಖಲಿಸಿದ್ದರು. ಆ ನಂತರ ವಿಸ್ತ್ರತ ವಿಶ್ಲೇಷಣೆ ನಡೆಸಿ ಪೊಟ್ಯಾಷಿಯಂನಲ್ಲಿ ಪಾರ್ಶ್ವವಾಯುವನ್ನು ತಡೆಯುವ ಗುಣವಿದೆ ಎನ್ನುವುದನ್ನು ಕಂಡುಕೊಂಡಿದ್ದಾರೆ. ಅಧ್ಯಯನದಲ್ಲಿ ಕಂಡುಬಂದ ಇನ್ನೊಂದು ಅಂಶ ಎಂದರೆ ಹೆಚ್ಚು ಪೊಟ್ಯಾಷಿಯಂ ಸೇವಿಸಿದವರಲ್ಲಿ ಪಾರ್ಶ್ವವಾಯುವಿಗೆ ತುತ್ತಾದವರ ಸಂಖ್ಯೆಯೂ ಕಡಿಮೆ ಇತ್ತು; ಅಂಥಹವರಲ್ಲಿ ಪಾರ್ಶ್ವವಾಯುವಿನಿಂದ ಆದ ಹಾನಿಯೂ ಕಡಿಮೆಯಾಗಿತ್ತು. ಕಡಿಮೆ ಪೊಟ್ಯಾಷಿಯಂ ಸೇವಿಸಿದವರಲ್ಲಿ ಪಾರ್ಶ್ವವಾಯುವಿಗೆ ತುತ್ತಾದವರು ಜಾಸ್ತಿ ಇದ್ದರು ಮತ್ತು ತೀವ್ರ ಥರದ ತೊಂದರೆಗಳಿಗೆ ಗುರಿಯಾಗಿದ್ದರು. ನಾವು ದಿನವೂ ಎಷ್ಟು ಪೊಟ್ಯಾಷಿಯಂ ಸೇವಿಸಬೇಕು ಎನ್ನುವ ಪ್ರಶ್ನೆ ಕಾಡಬಹುದು. ಕೇವಲ 400 ಮಿಲಿಗ್ರಾಂನಷ್ಟು ಸೇವಿಸಿದರೆ ಸಾಕು. ನಿತ್ಯವೂ ಇಷ್ಟು ಪೊಟ್ಯಾಷಿಯಂ ಸೇವನೆ ಮಾಡಿದರೆ ಪಾರ್ಶ್ವವಾಯುವಿನ ಸಾಧ್ಯತೆಯನ್ನು ಅರ್ಧದಷ್ಟು ಕಡಿಮೆ ಮಾಡಿಕೊಂಡಿದ್ದೀರಿ ಎಂದೇ ಅರ್ಥ.
ನಿಖರವಾದ ಲೆಕ್ಕಕ್ಕೇನೂ ತಲೆ ಕೆಡಿಸಿಕೊಳ್ಳಬೇಕಿಲ್ಲ. ಸಾಮಾನ್ಯವಾಗಿ ಎಲ್ಲ ಹಣ್ಣುಗಳು, ತರಕಾರಿಗಳಲ್ಲೂ ಪೊಟ್ಯಾಷಿಯಂ ಇದ್ದೇ ಇರುತ್ತದೆ. ಮಧ್ಯಮ ಗಾತ್ರದ ಒಂದು ಹೋಳು ತಿಂದರೂ ಸಾಕು. ದಿನಕ್ಕೊಂದು ಕಪ್ ಹಾಲು ಕುಡಿಯುವ ಅಭ್ಯಾಸ ಇದೆ ಎಂದಾದರೆ ಅಗತ್ಯ ಪ್ರಮಾಣದ ಪೊಟ್ಯಾಷಿಯಂ ನಿಮ್ಮ ಶರೀರಕ್ಕೆ ಸಿಗುತ್ತಿದೆ ಎಂದು ಧಾರಾಳವಾಗಿ ಹೇಳಬಹುದು. ಬೇಯಿಸಿದ ಸಣ್ಣ ಬಟಾಟೆ, ಬೇಯಿಸಿದ ಅರ್ಧ ಕಪ್ ಬೀನ್ಸ್ಗಳಲ್ಲಿಯೂ ಹೇರಳವಾದ ಪೊಟ್ಯಾಷಿಯಂ ಇರುತ್ತದೆ.
ಪೊಟ್ಯಾಷಿಯಂ ಮಾಡುವ ಜಾದೂ ಆದರೂ ಏನು? ಬಹಳ ಸರಳ ಕೆಲಸವನ್ನು ಇದು ಮಾಡುತ್ತದೆ. ಆದರೆ ಆ ಸಣ್ಣ ಕಾರ್ಯವೇ ನಿಮ್ಮ ಪ್ರಾಣ ಉಳಿಸುತ್ತದೆ. ಪೊಟ್ಯಾಷಿಯಂ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಅದರ ಪರಿಣಾಮವಾಗಿ ಮೆದುಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳಗಳಿಗೆ ಯಾವುದೇ ವಿಧದ ಹಾನಿ ಉಂಟಾಗುವುದಿಲ್ಲ, ಮೆದುಳಿಗೆ ಆಮ್ಲಜನಕದ ಕೊರತೆ ಉಂಟಾಗುವುದಿಲ್ಲ. ರಕ್ತನಾಳ ಸುಸ್ಥಿತಿಯಲ್ಲಿದೆ ಎಂದರೆ ಪಾರ್ಶ್ವವಾಯು ನಿಮ್ಮ ಬಳಿ ಸುಳಿಯದು ಎಂದೇ ಲೆಕ್ಕವಲ್ಲವೆ?
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

