ಬೈಟುಕಾಫಿ

ಮನುಕುಲದ ತಂದೆತಾಯಿ

Published On :

ದೇಹಗಳ ಮಿಲನವನ್ನು ಹಾಗೆ ಹಾಗೇ ಬರೆಯುವವರಿದ್ದಾರೆ; ಅದನ್ನು ಹಾಗೇ ಓದಿ ಚಪ್ಪರಿಸುವವರೂ ಇದ್ದಾರೆ; ಅದರಲ್ಲಷ್ಟೇ ಸುಖ ಕಾಣುವವರು, ಅದರಿಂದಾಚೆಗೆ ಹೊಳೆಯುವ ಅರ್ಥಗಳನ್ನು ಕಾಣದೆ ಹೋಗುತ್ತಾರೆ. ಎಲ್ಲೋ ಕೆಲವರಷ್ಟೇ 'ಪಾರ್ವತಿ ಪರಶಿವರ ಪ್ರಣಯ ಪ್ರಸಂಗ'ವನ್ನು ಕಾಣಬಲ್ಲವರಾಗುತ್ತಾರೆ.

ಬರಿಗೈಲೆ ಬಂದು ಪರೆಕಳಚಿ ನಿಂದು
ಬೇಕಾದ್ದ ತಿನಿಸಿ ಬೇಕಾದ್ದ ತಿಂದು
...ಯಾವ ಹಿಗ್ಗಿನ ಸೆಲೆಯೋ ನಮಗೆ ಸಿಲುಕಿ
ಇಳೆಯ ಮೂಲಕು ನಮ್ಮ ಬೇರು ನಿಲುಕಿ
...ಭೂಗರ್ಭ ಸುರಿದಿತ್ತು ಜೊಲ್ಲುಬಾಯಿ
ನಾವಂದು ಮನುಕುಲದ ತಂದೆತಾಯಿ

ಇವು ಕನ್ನಡದ ಹಿರಿಯ ಕವಿ ಗಂಗಾಧರ ಚಿತ್ತಾಲರ 'ಕಾಮಸೂತ್ರ' ಕವನದಿಂದ ಆಯ್ದ ಸಾಲುಗಳು. ಇದೊಂದು ವಿಚಿತ್ರ- ಬರಿಗೈಯಲ್ಲಿ, ಬರಿಮೈಯಲ್ಲಿ ಬಂದರೂ ನಾವು ಇಲ್ಲಿ ಎಷ್ಟೊಂದು ಪಡೆಯಬಲ್ಲೆವು, ಕೊಡಬಲ್ಲೆವು! ಅದು ಕೈಯೆತ್ತಿ ಕೊಡುವುದಲ್ಲ, ಮೈಯೆತ್ತಿ ಕೊಡುವುದು. ತನ್ನನ್ನೇ ಸಮರ್ಪಿಸಿಕೊಳ್ಳುವುದು. ಹೀಗೆ ಸಂಪೂರ್ಣ ಅರ್ಪಿಸಿಕೊಳ್ಳದ ಮಿಲನ, ಬರಿಯ ವ್ಯವಹಾರ ಮಾತ್ರ.

'ಅರಿವೆ ಇರಲಿಲ್ಲ, ಪರಿವೆ ಇರಲಿಲ್ಲ' ಎನ್ನುತ್ತದೆ ಕವನ. ಪಡೆದುಕೊಳ್ಳುವ ಸ್ತ್ರೀ ದೇಹವು ಭೂಗರ್ಭವಾಗಿ ಕಾಣುತ್ತಿದೆ. ಮಿಲನದ ಉತ್ಕರ್ಷದ ಘಳಿಗೆಯ ಬಳಿಕ ನೋಡಿದರೆ, ಆ ಕ್ರಿಯೆ ಆದಿಕ್ರಿಯೆಯಾಗಿಯೂ, ನಾವೇ ಮನುಕುಲದ ತಂದೆತಾಯಿಗಳಾಗಿಯೂ ಕಾಣಿಸುತ್ತದೆ. ಇದು ಕವಿಮನಸ್ಸಿಗೆ ಮಾತ್ರ ಕಾಣಿಸಬಲ್ಲ ಅಲೌಕಿಕ ಹೊಳಹು. ಎರಡು ದೇಹಗಳ ಸೇರುವಿಕೆಯನ್ನು ಹಂತಹಂತವಾಗಿ ವಿವರಿಸುತ್ತ ಅವರು ಅದನ್ನು ಅಲೌಕಿಕತೆಯತ್ತ ಒಯ್ಯುವ ಪರಿಯನ್ನು ಹೇಳಿತೀರದು; ಕವನವನ್ನು ಸಂಪೂರ್ಣ ಓದಿಯೇ ಅನುಭವಿಸಬೇಕು.

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.