ಬೈಟುಕಾಫಿ

ವೈಜ್ಞಾನಿಕ ವಾಸ್ತು ಬೇಕು

Published On :

ವಾಸ್ತುವಿನ ಬಗ್ಗೆ ಗ್ರಾಮೀಣ ವಾಸಿಗಳಿಗಿಂತ ನಗರವಾಸಿಗಳಲ್ಲೇ ಹೆಚ್ಚು ಆಸಕ್ತಿ ಮತ್ತು ಆತಂಕ. ನಿರ್ಮಿಸಿರುವ ಮನೆಯಲ್ಲಿ ವಾಸ್ತು ದೋಷಗಳು ಕಂಡುಬಂದರೆ ಅವರಿವರ ಮಾತು ಕೇಳಿ ಪೂರ್ವಗ್ರಹಪೀಡಿತರಾಗಿ ಆತಂಕ ಪಡುತ್ತಾರೆ. ಇದಕ್ಕೆ ಇನ್ನೂ ಪುಷ್ಠಿ ನೀಡಲು ಮನೆಯ ಯಜಮಾನನೇದರೂ ಅನಾರೋಗ್ಯಪೀಡಿತನಾದರೆ ಉತ್ತಮ ವೈದ್ಯರ ಸಲಹೆಯನ್ನು ಪಾಲಿಸದೇ ಜ್ಯೋತಿಷ್ಯರು ಹೇಳುವ ಮನೆಯ ವಾಸ್ತು ದೋಷ, ಪ್ರಮುಖ ಕಾರಣವೆಂದು ನಂಬುವುದು ಅಥವಾ ಅವರ ವ್ಯವಹಾರದಲ್ಲೇನಾದರೂ ನಷ್ಟವುಂಟಾದರೆ ಆರ್ಥಿಕ ತಜ್ಞರ ಸಲಹೆಯನ್ನು ಕೇಳದೇ ಅದಕ್ಕೂ ವಾಸ್ತುದೋಷವೇ ಕಾರಣವೆಂದು ನಿರ್ಧರಿಸಿ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಆದರೆ ವಾಸ್ತವವಾಗಿ ವಾಸ್ತು ಎಂದರೆ ಭೂಮಿಯ ಮೇಲೆ ಸೂರ್ಯನ ಉದಯಾಸ್ತಮಾನಗಳ ದಿಕ್ಕು ಮತ್ತು ಅಷ್ಟ ದಿಕ್ಕುಗಳಿಂದಾಗುವ ಗಾಳಿಯ ವಿವಿಧ ಬಗೆಯ ಏರಿಳಿತಗಳನ್ನೊಳಗೊಂಡ ಭೂಮಿಯ ವಾತಾವರಣಕ್ಕೆ ವೈಜ್ಞಾನಿಕ ದೃಷ್ಟಿಕೋನದ ಮೂಲಕ ಹೊಂದಿಕೊಳ್ಳುವಂತಹ ನಮ್ಮ ಆವಾಸ ಸ್ಥಾನಗಳನ್ನು ನಿರ್ಮಿಸಿಕೊಳ್ಳುವ ಸರಳ ವ್ಯವಸ್ಥೆ. ಆದರೆ ಇಂದು ವಾಸ್ತುವೆಂಬುದು ಹಣ ದೋಚುವ ದಂಧೆಯಾಗಿದೆ. ಪ್ರಜ್ಞಾವಂತ ನಾಗರಿಕರು ವಿಜ್ಞಾನ ದೀವಿಗೆಯ ಬೆಳಕಿನ ಮೂಲಕ ವೈಜ್ಞಾನಿಕ ವಾಸ್ತುವನ್ನು ಕಾಣಬೇಕಾದ ಅವಶ್ಯಕತೆ ಇದೆ.
- ಆರ್.ಸಿ. ಪರಶುರಾಮ್, ಶಿಕಾರಿಪುರ

ಪ್ರಯೋಜನಗಳು ಹಲವು
ಮನೆಯಲ್ಲಿ ನಿರುದ್ಯೋಗಿ ಯುವಕ ಇರುತ್ತಾನೆ, ಮಗಳಿಗೆ ಮದುವೆ ವಯಸ್ಸು ಆಗಿದ್ದರೂ ವರ ಸಿಕ್ಕಿರುವುದಿಲ್ಲ. ಮನೆಯ ಆರ್ಥಿಕ ಮುಗ್ಗಟ್ಟು ಕಾಡುತ್ತಿರುತ್ತದೆ. ಇದರಿಂದ ಮನಸ್ತಾಪಗಳು, ಪರಸ್ಪರ ನಿಂದನೆ, ಕೋಪ - ತಾಪ ಉತ್ಪತ್ತಿಯಾಗಿ ಮನೆಯ ವಾತಾವರಣ ಸರಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ವಾಸ್ತು ದೋಷ ಸರಿಪಡಿಸಿದರೆ ಮನೆ ಎಂದಿನಂತೆ ಆಗುತ್ತದೆ ಎಂದು ಬಲ್ಲವರು ತಿಳಿವಳಿಕೆ ಕೊಡುತ್ತಾರೆ. ಆದುದರಿಂದ ಮನೆಗೆ ಸಮೃದ್ಧ ವಾಸ್ತು ಬೇಕೇ ಬೇಕು! ವಾಸ್ತುವನ್ನು ಚೆನ್ನಾಗಿ ಅರಿತವರ ಮೂಲಕ ಅದನ್ನು ಶಾಸ್ತ್ರೋಕ್ತವಾಗಿ  ಅಳವಡಿಸಿ ಸಮೃದ್ಧ ವಾಸ್ತುವಿನ ಇಷ್ಟ ಸಿದ್ಧಿಯನ್ನು ಪಡೆಯಬಹುದು. ಈ ವಿಚಾರದಲ್ಲಿ ನನ್ನ ಬೆಂಬಲ ಇದೆ.
- ರಮೇಶ್ ಅರವಿಂದ್, ಗುಬ್ಬಿ

ಸಾಮರಸ್ಯದ ಕಲೆ
ವಾಸ್ತು ಶಾಸ್ತ್ರವೆಂಬ ಅದ್ಭುತ ವಿಜ್ಞಾನ ಉಗಮವಾದದ್ದು ಸುಮಾರು 5 ಸಾವಿರ ವರ್ಷಗಳ ಹಿಂದೆ. ಶಿಲ್ಪ ಹಾಗೂ ಕಟ್ಟಡ ನಿರ್ಮಾಣದ ವಿಜ್ಞಾನವೇ ವಾಸ್ತುಶಾಸ್ತ್ರದ ತಳಹದಿ. ಮನುಷ್ಯ ಪ್ರಕೃತಿಯ ಶಿಶು ಎಂಬ ಕಠೋರ ಸತ್ಯವನ್ನು ವಾಸ್ತುಶಾಸ್ತ್ರದಲ್ಲಿ ಪ್ರತಿಪಾದಿಸಿದಷ್ಟು ಇನ್ನಾವ ಶಾಸ್ತ್ರದಲ್ಲೂ ಪ್ರತಿಪಾದಿಸಿಲ್ಲ. ಪಂಚಭೂತಗಳ ಶಕ್ತಿಗಳ ಮುಖೇನ ಪ್ರಕೃತಿ ಪುರುಷನ ಬಂಧ ದೃಢಗೊಳಿಸುವ ಕಾರ್ಯದಲ್ಲಿ ವಾಸ್ತು ಸೂಕ್ತಲಾಗಿದೆ. ನಿಜವಾಗಿ ಹೇಳಬೇಕಂದ್ರೆ, ವಾಸ್ತು ಎಂದ್ರೆ 'ಮನುಷ್ಯನು ವಾತಾವರಣದ ಜೊತೆಯಲ್ಲಿ ಸಾಮರಸ್ಯವಾಗಿ ಬದುಕುವ ಕಲೆ' ಭಾರತೀಯ ಸಂಪ್ರದಾಯಕ್ಕೆ ವಾಸ್ತುಶಾಸ್ತ್ರ ಹೊಸ ವಿಚಾರವೇನಲ್ಲ, ಇಂದಿನ ಯಾಂತ್ರಿಕ ಜೀವನ ಶೈಲಿಯಲ್ಲಿ ಜನತೆಯ ಮಾನಸಿಕ ನೆಮ್ಮದಿ ಮೂಲವನ್ನು ವಾಸ್ತು ಶಾಸ್ತ್ರದ ಮುಖಾಂತರ ಹುಡುಕ ಹೊರಟಿದ್ದಾರೆ. ವಾಸ್ತು ಎಂದರೆ ಬರೀ ಮೂಢನಂಬಿಕೆಯಲ್ಲ, ಇದೊಂದು ವೈಜ್ಞಾನಿಕ ತಳಹದಿಯ ಮೇಲೆ ನಿಂತಿರುವ ಒಂದು ಕಲೆ. ವಾಸ್ತು ನಿಯಮ ಪ್ರಕಾರ ನಿಂತಿರುವ ಮನೆ, ಮನ, ಕುಟುಂಬ ನೆಮ್ಮದಿ ತಾಣವಾಗುತ್ತದೆ. ವಾಸ್ತು ಮನುಜನಿಗೆ ಅನಿವಾರ್ಯ, ವಾಸ್ತು ಬೇಕೇಬೇಕು. ಆದರೆ ವಾಸ್ತುವಿನ ಕುರಿತು ಅತಿ ನಂಬಿಕೆ, ಭ್ರಮೆ ಒಳ್ಳೆಯದಲ್ಲ.
- ಎಂ.ಜಿ. ಸುರೇಶ್, ಭದ್ರಾವತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.