ನಾರಿನಿಂದ ನಿಶ್ಚಿಂತೆ

ತೀರಾ ಈಚೆನವರೆಗೆ ಅಂದರೆ ಸುಮಾರು ಒಂದು ದಶಕದವರೆಗೂ ಐಬಿಎಸ್ನಿಂದ ಬಳಲುವವರಿಗೆ 'ನಾರಿನ ಅಂಶ ಕಡಿಮೆ ಇರುವ ಆಹಾರ ತಿನ್ನಿ' ಎಂದು ವೈದ್ಯರು ಸಲಹೆ ಮಾಡುತ್ತಿದ್ದರು. ಈಗ ವೈದ್ಯಲೋಕ ಅದಕ್ಕೆ ತದ್ವಿರುದ್ಧವಾದ ನಿಲುವಿಗೆ ಬಂದಿದೆ. 'ಅಧಿಕ ನಾರಿನ ಅಂಶ ಇರುವ ಆಹಾರದಿಂದ ಬಹಳಷ್ಟು ಕರುಳು ವ್ಯಾಧಿಗಳು ನಿವಾರಣೆಯಾಗುತ್ತವೆ' ಎನ್ನುವುದು ಈಗಿನ ಸಿದ್ಧಾಂತ. ಹೀಗಾಗಿ ನೀವು ನಾರಿನ ಅಂಶವುಳ್ಳ ಆಹಾರವನ್ನು ಹೆಚ್ಚೆಚ್ಚು ಸೇವಿಸಿದಷ್ಟೂ ಐಬಿಎಸ್ ತೊಂದರೆಗಳಿಂದ ದೂರ ಇರಲು ಸಾಧ್ಯ. ತಮಾಷೆ ಅನ್ನಿಸಬಹುದು, ಅತಿಸಾರ ಮತ್ತು ಮಲಬದ್ಧತೆಯಂಥ ವಿರುದ್ಧ ಸಮಸ್ಯೆಗಳಿಗೂ ನಾರು ಪರಿಹಾರ ಒದಗಿಸಬಲ್ಲದು! ಇದು ಆಧುನಿಕ ಕಾಲದ ಸಂಶೋಧನೆಗಳು ಕಂಡುಕೊಂಡಿರುವ ಸತ್ಯ.
ಪದೇಪದೇ ಅತಿಸಾರಕ್ಕೆ ತುತ್ತಾಗುತ್ತಿದ್ದರೆ ಗೋಧಿ ಹಿಟ್ಟಿನಂಥ ಹಿಟ್ಟುಗಳನ್ನು ನಿಯಮಿತವಾಗಿ ಬಳಸುವುದು ಉತ್ತಮ ಎನ್ನುತ್ತಾರೆ ತಜ್ಞರು. 'ಇದು ಅತಿ ಸುರಕ್ಷಿತ ಮತ್ತು ಕಡಿಮೆ ಖರ್ಚಿನ ಔಷಧ' ಎಂದು ಅಭಿಪ್ರಾಯಪಡುತ್ತಾರೆ ಅಮೆರಿಕದ ಗ್ಯಾಸ್ಟ್ರೊಎಂಟೆರೊಲಾಜಿಸ್ಟ್ ಡಾ.ಗ್ರಾಂಟ್ ಥಾಮ್ಸನ್. ಆಹಾರದಲ್ಲಿ ಹಿಟ್ಟುಗಳ ಬಳಕೆಯಿಂದ ದ್ರವರೂಪದ ಮಲ ಗಟ್ಟಿಯಾಗುವುದರಿಂದ ಅತಿಸಾರ ನಿಲ್ಲುತ್ತದೆ; ಹೆಚ್ಚೆಚ್ಚು ಸೊಪ್ಪು, ಹಸಿರು ತರಕಾರಿಗಳನ್ನು ಸೇವಿಸಿದರೆ ಮಲಬದ್ಧತೆಯಂಥ ತೊಂದರೆಗಳು ನಿವಾರಣೆಯಾಗುತ್ತವೆ. ಹೀಗೆ ನಾರು ಅತಿಸಾರ, ಮಲಬದ್ಧತೆಯಂತಹ ಕಿರಿಕಿರಿಗಳನ್ನು ಹೋಗಲಾಡಿಸುತ್ತದೆ. ನಿಮ್ಮ ಆಹಾರದಲ್ಲಿ ಗೋಧಿ ಹಿಟ್ಟು, ಜೋಳದ ಹಿಟ್ಟು ಮೊದಲಾದ ಹಿಟ್ಟುಗಳು, ಸೊಪ್ಪು ಮತ್ತು ಹಸಿರು ತರಕಾರಿಗಳಿಗೆ ಸಮಾನ ಪಾಲು ಇದ್ದರೆ ಕರುಳು ಸೇರಿದಂತೆ ಜೀರ್ಣಾಂಗಗಳ ಕಾರ್ಯಕ್ಷಮತೆ ಬಹಳಷ್ಟು ಸುಧಾರಿಸುತ್ತದೆ. ಜತೆಗೆ, ಜೀರ್ಣಾಂಗಗಳಲ್ಲಿ ಆಗಾಗ ಕಿರಿಕಿರಿ ಉಂಟಾಗುವುದೂ ನಿಲ್ಲುತ್ತದೆ. ಅದೇ ವಿಚಿತ್ರ ನೋಡಿ, ಗೋಧಿ, ಜೋಳ ಮೊದಲಾದ ಧಾನ್ಯಗಳನ್ನು ಇಡಿಯಾಗಿ ಸೇವಿಸಿದರೆ ಜೀರ್ಣಾಂಗಗಳಲ್ಲಿ ತೊಂದರೆ ಶುರುವಾಗುತ್ತದೆ!
ಐಬಿಎಸ್ ಉಂಟುಮಾಡುವ ಪ್ರಮುಖ ಆಹಾರ ಪದಾರ್ಥಗಳು ಯಾವವು ಎನ್ನುವ ಬಗ್ಗೆ ಪಾಶ್ಚಾತ್ಯ ವಿಶ್ವವಿದ್ಯಾಲಯವೊಂದು ಕೆಲವು ವರ್ಷಗಳ ಹಿಂದೆ ಅಧ್ಯಯನ ಕೈಗೊಂಡಿತು. ಮೊದಲ ಸ್ಥಾನದಲ್ಲಿರುವುದು ಏಕದಳ ಧಾನ್ಯಗಳು (ಅವನ್ನೇ ಹಿಟ್ಟು ಮಾಡಿಕೊಂಡು ಬಳಸಿದರೆ ಔಷಧ!). ಹಾಲಿನ ಉತ್ಪನ್ನಗಳು, ಚಾಕೊಲೆಟ್, ಈರುಳ್ಳಿ, ಆಲೂಗಡ್ಡೆ, ಹುಳಿ ಅಂಶ ಇರುವ ಅಥವಾ ಸಿಟ್ರಸ್ ಜಾತಿಗೆ ಹಣ್ಣುಗಳು ನಂತರದ ಸ್ಥಾನದಲ್ಲಿವೆ. ಕೆಲವರಲ್ಲಿ ಚಹಾ ಮತ್ತು ಕಾಫಿ ಕೂಡ ತೊಂದರೆ ಉಂಟುಮಾಡಿವೆ. ಐಬಿಎಸ್ಗೆ ತುತ್ತಾಗುವ ಶೇ 20ರಷ್ಟು ಮಂದಿಯಲ್ಲಿ ಸಮಸ್ಯೆಯ ಮೂಲವಾಗಿರುವುದು ಈ ಆಹಾರ ಪದಾರ್ಥಗಳು. ಆದ್ದರಿಂದ ನೀವು ಆಗಾಗ ಜೀರ್ಣಾಂಗ ಸಂಬಂಧಿ ತೊಂದರೆಗಳಿಗೆ ತುತ್ತಾಗುತ್ತಿದ್ದರೆ ಇವುಗಳನ್ನು ವರ್ಜಿಸಿ ನೋಡುವುದು ಉತ್ತಮ.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


