ಆಯುರ್ Way

ಅದೊಂದು ಅಗಲ ಬಾಯಿಯ ದೊಡ್ಡ ಪಾತ್ರೆ. ಅದರೊಳಗೆ ಕೊತಕೊತನೆ ಕುದಿಯುತ್ತಿರುವ ವಿವಿಧ ಮೂಲಿಕೆಗಳು. ಕುದಿಯುತ್ತಿರುವ ಆ ಪಾತ್ರೆಯ ಮೆಗೊರಗಿ ನೀವು ಹರಟಬಹುದು. ಹೌದು! ಒಳಗೆ ಔಷಧಿ ಕುದಿಯುತ್ತಿದ್ದರೂ, ಹೊರಗೆ ಪಾತ್ರೆಯ ಮೇಲ್ಮೈ ಮಾತ್ರ ತಣ್ಣಗಿರುತ್ತದೆ!
ಕುತ್ಪಾಡಿ 'ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಫಾರ್ಮಸಿ'ಯಲ್ಲಿ ಔಷಧಗಳು ಹೀಗೆ ಸಿದ್ಧಗೊಳ್ಳುತ್ತವೆ. ಅನಾದಿಯ ಆಯುರ್ವೇದಶಾಸ್ತ್ರದ ಮೂಲ ಸಿದ್ಧಾಂತಗಳನ್ನು ಅನುಸರಿಸುತ್ತಾ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ಕಡಿಮೆ ಶ್ರಮ- ವೆಚ್ಚದಲ್ಲಿ ಆಯುರ್ವೇದ ಉತ್ಪನ್ನಗಳನ್ನು ತಯಾರಿಸುವುದು ಇಲ್ಲಿನ ವೈಶಿಷ್ಟ್ಯ. ಶಾಸ್ತ್ರ- ತಂತ್ರಜ್ಞಾನ ಸಮಾನ ಮೇಳೈಕೆ ಇಲ್ಲಿದೆ.
ಇಲ್ಲಿನ ಔಷಧ ತಯಾರಿಕೆಯ ಎಲ್ಲ ಪಾತ್ರೆಗಳೂ ಫುಡ್ ಗ್ರೇಡ್ ಸ್ಟ್ರಾಂಗ್ ಸ್ಟೀಲ್ನಿಂದ ಮಾಡಿದ್ದು. ಥರ್ಮಿಕ್ ಫ್ಲೂಯಿಡ್ ಹೀಟರ್ ವ್ಯವಸ್ಥೆಯ ಮೂಲಕ ಕಚ್ಚಾವಸ್ತುಗಳನ್ನು ಕುದಿಸಲಾಗುತ್ತದೆ. ಹೀಗಾಗಿ ಯಾವುದೇ ತಾಪ, ಹೊಗೆ, ಕಲುಷಿತ ಉತ್ಪನ್ನಗಳು ವಾತಾವರಣವನ್ನು ಸೇರವು. ಟ್ಯಾಬ್ಲೆಟ್, ಲಿಕ್ವಿಡ್ ಫಿಲ್ಲಿಂಗ್ನಲ್ಲೂ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಾಗುತ್ತಿದೆ. ಏಕಕಾಲದಲ್ಲಿ ಸುಮಾರು 680 ಲೀ. ಮಹಾನಾರಾಯಣ ತೈಲ ತಯಾರಿಸಿ, ಕೆಲವೇ ಗಂಟೆಗಳಲ್ಲಿ ಸಂಪೂರ್ಣವಾಗಿ ಪ್ಯಾಕ್ ಮಾಡಲಾಗುತ್ತದೆ.
ಚೂರ್ಣ, ಕಷಾಯ, ಆಸಾವಾರಿಷ್ಟ ಅವಲೇಹ್ಯ, ತೈಲ/ ಘೃತ, ವಟಿ/ ಮಾತ್ರೆ, ಪಿಷ್ಠಿ/ ಭಸ್ಮ ಮುಂತಾದ 7 ಮಾದರಿಯ 300 ಔಷಧಗಳು ಇಲ್ಲಿ ರೆಡಿಯಾಗುತ್ತವೆ. ಐಎಸ್ಓ ಜಿಎಂಪಿ ಪ್ರಮಾಣಿತವಾದ ಈ ಉತ್ಪನ್ನಗಳು ಎಸ್ಡಿಎಂ ಬ್ರ್ಯಾಂಡ್ ನೇಮಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿವೆ. ಅಮೃತ ಬಳ್ಳಿ, ನೆಲ್ಲಿಕಾಯಿ, ತಗರ, ಮೇಥಿಕಾ, ಚವ್ಯ, ಪರ್ಪಟ, ಏಲಕ್ಕಿ, ಲಾವಂಚ ಮೊದಲಾದ 440 ಕಚ್ಚಾವಸ್ತುಗಳನ್ನು ಬಳಸಲಾಗುತ್ತದೆ. ಗುಣಮಟ್ಟದ ವಸ್ತುಗಳಿಗಾಗಿ ಕೆಲವನ್ನು ವಿದೇಶಗಳಿಂದಲೂ ತರಿಸಿಕೊಳ್ಳಲಾಗುವುದು. ಕ್ವಾಲಿಟಿ ಕಂಟ್ರೋಲ್ ಲ್ಯಾಬ್ನಿಂದ ಪದಾರ್ಥಗಳ ಪರೀಕ್ಷೆ. ಸಂಸ್ಥೆ ನಿಗದಿಗೊಳಿಸಿದ ಗುಣಮಟ್ಟವು ವಸ್ತುವಿನಲ್ಲಿ ಇಲ್ಲದಿದ್ದರೆ ಅದನ್ನು ಬಳಸುವುದಿಲ್ಲ.
1959ರಲ್ಲಿ ಈ ಘಟಕ ಆರಂಭವಾಯಿತು. ಸದ್ಯ ರಾಜ್ಯದಲ್ಲಿ ನಂ.1 ಕಂಪನಿ ಇದು. ಈಗಾಗಲೇ ಕರ್ನಾಟಕ, ಕೇರಳ, ಗೋವಾ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲಿ ಕಂಪನಿಯ ಉತ್ಪನ್ನಗಳು ಹೆಚ್ಚಿನ ಬೇಡಿಕೆ ಹೊಂದಿವೆ. ವಿದೇಶಿ ಮಾರುಕಟ್ಟೆಗೂ ಲಗ್ಗೆಯಿಡುವ ಕನಸು ಕಂಪನಿಯದ್ದು. 'ಅಗತ್ಯವುಳ್ಳವರಿಗೆ ಹತ್ತಿರದಲ್ಲೇ ಎಲ್ಲವೂ ದೊರೆಯುವಂತೆ ಮಾಡುವ ಉದ್ದೇಶವಿದೆ' ಎನ್ನುತ್ತಾರೆ ಫಾರ್ಮಸಿಯ ಹಿರಿಯ ಪ್ರಬಂಧಕ ಡಾ. ಮುರಲೀಧರ ಬಲ್ಲಾಳ್.
ಜನಪ್ರಿಯ ಔಷಧಗಳು
ವಾಯುಮಾತ್ರೆ (ಜೀರ್ಣ ಸಂಬಂಧಿ ತೊಂದರೆಗೆ), ಸಂಧಿಲಿನ್ (ವಿವಿಧ ನೋವುಗಳಿಗೆ), ಭೃಂಗಾಮಲಕಾದಿ ತೈಲ (ಕೇಶ ಪೋಷಣೆಗೆ), ಚ್ಯವನಪ್ರಾಶ (ಶ್ವಾಸ ಸಂಬಂಧಿ ತೊಂದರೆಗೆ), ಗಂಧಕರ್ಪೂರ (ತುರಿಕೆಗಳಿಗೆ), ಅಭಯ ಕಷಾಯ ಚೂರ್ಣ (ಆರೋಗ್ಯಕರ ಪೇಯ), ಸಂಧಿ ಅಭಯ (ಗಂಟುಗಳ ನೋವಿಗೆ), ಮೇಹ ಅಭಯ (ಮಧುಮೇಹಕ್ಕೆ), ಪೂಗಟ್ರಿಮ್ (ಸ್ಥೌಲ್ಯ ಹಾಗೂ ಮಧುಮೇಹ ನಿಯಂತ್ರಣಕ್ಕೆ), ಗುರುರಸಾಯನ (ಗಂಟುಗಳ ಪುನರುಜ್ಜೀವನಕ್ಕೆ), ಲಶುನರಸಾಯನ (ನರಗಳ ಪುನರುಜ್ಜೀವನಕ್ಕೆ), ಮಹಾನಾರಾಯಣ ತೈಲ (ನರಮಾಂಸಗಳಿಗೆ ಬಲ್ಯ), ಶಿವಾ ಗುಟಿಕ (ವ್ಯಾಧಿಕ್ಷಮತ್ವ ಪುನಶ್ಚೇತನಗೊಳಿಸಲು), ಗೋಕ್ಷುರಾದಿ ಮೋದಕ (ವಾಜೀಕರಣಾರ್ಥ), ಭಾರ್ಗವಪ್ರೋಕ್ತ ರಸಾಯನ (ಯೌವನತೆಯನ್ನು ಪುನಸ್ಥಾಪಿಸಲು- ರಸಾಯನಾರ್ಥ).
- ಧನುರಾಜ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


