ಲಂಕಾಪುರ
ಲಂಕೇಶರನ್ನು ಕಂಕುಳಲ್ಲಿ ಹೊತ್ತು ಹಾರ್ನಹಳ್ಳಿ ಸಂತೆಗೆ ಕರೆದೊಯ್ಯುತ್ತಿದ್ದ ಅವ್ವನ ಛಾಪು ಇನ್ನೂ ಈ ಮನೆಗಿದೆ.

ನನ್ನವ್ವ ಬದುಕಿದ್ದು ಕಾಳು ಕಡ್ಡಿಗೆ,
ದುಡಿತಕ್ಕೆ, ಮಕ್ಕಳಿಗೆ
ಮೇಲೊಂದು ಸೂರು. ಅನ್ನ,
ರೊಟ್ಟಿ, ಹಚಡಕ್ಕೆ
ಸರೀಕರ ಎದುರು
ತಲೆಯೆತ್ತಿ ನಡಿಯಲಿಕ್ಕೆ
ಪಿ. ಲಂಕೇಶರ ಬರೆದ 'ಅವ್ವ' ಕವನದ ಈ ಸಾಲುಗಳು ಸ್ವಾಭಿಮಾನದ ಲಾಲಿ ಹಾಡುವಂಥವು. ಅಂಥ ಅವ್ವನನ್ನು ಲಂಕೇಶರು ಕಂಡ ಮನೆ ಶಿವಮೊಗ್ಗ ಜಿಲ್ಲೆಯ ಕೊನಗವಳ್ಳಿ ಎಂಬ ಕುಗ್ರಾಮದಲ್ಲಿದೆ. ಇದೇ ಇವರು ಜನಿಸಿದ ಮನೆ. ಲಂಕೇಶರ ಅವ್ವ ದೇವೀರವ್ವ. ತಂದೆ ನಂದಿಬಸಪ್ಪ ಅವರ ತಾತಾ ಕಟ್ಟಿಸಿದ ಮನೆ ಇದು.
ಲಂಕೇಶರನ್ನು ಕಂಕುಳಲ್ಲಿ ಹೊತ್ತು ಹಾರ್ನಹಳ್ಳಿ ಸಂತೆಗೆ ಕರೆದೊಯ್ಯುತ್ತಿದ್ದ ಅವ್ವನ ಛಾಪು ಇನ್ನೂ ಈ ಮನೆಗಿದೆ. ಬಹುವರ್ಷಗಳಿಂದ ಯಾವುದೇ ಬದಲಾವಣೆ ಆಗಿಲ್ಲ. ದೊಡ್ಡ ತೊಲೆಗಳನ್ನು ಹೊಂದಿದ ಅಟ್ಟ, ಕೆಂಪು ಹೆಂಚಿನ ಹೊದಿಕೆ, ಕಟಾಂಜನ, ನಡುಮನೆ, ದೇವರ ಮನೆ ಇತ್ಯಾದಿಗಳನ್ನು ಹೊಂದಿದ ಥೇಟ್ ಹಳ್ಳಿ ಮನೆ. ಎದುರಿನ ಮನೆಯ ಹಿತ್ತಲಿನಲ್ಲೇ 'ದಾಳಿ' ಕತೆಯ ಪ್ರೇರಣೆಯಾಗಿರಬಹುದಾದ ದೊಡ್ಡ ಹುಡೇವು ಇದೆ. ಎದುರು ಭಾಗದ ದನದ ಕೊಟ್ಟಿಗೆಯ ಅರ್ಧಭಾಗ ಅದೇ ಸ್ವರೂಪದಲ್ಲೇ ಉಳಿದಿದೆ. ಈ ಕೊಟ್ಟಿಗೆಯ ಅಟ್ಟದ ಮೇಲೆಯೇ ಲಂಕೇಶ 'ಯಾವಾಗ್ಲೂ ಓತ್ತಾ ಕುತ್ಕಂತಿದ್ದ, ಬರ್ರೀ ನೋಡಬರ್ರಿ...' ಎಂದು ಅವರ ಅಣ್ಣನ ಮಕ್ಕಳು ಹೆಮ್ಮೆಯಿಂದ ತೋರಿಸುತ್ತಾರೆ. ಲಂಕೇಶ್ ಹುಟ್ಟಿದ ಈ ಮನೆ 3 ಬೀದಿಗಳ ಕೊನಗವಳ್ಳಿ ಎಂಬ ಹಳ್ಳಿಯಲ್ಲಿ ಸ್ವಲ್ಪ ಗಟ್ಟಿಮುಟ್ಟಾದ ಮನೆ. ಅಕ್ಕಪಕ್ಕದಲ್ಲೇ ಇವರ ಕಳ್ಳುಬಳ್ಳಿಯವರ ಮನೆಗಳಿವೆ. ಲಂಕೇಶರ ಅಣ್ಣ ಕೆ.ಪಿ. ಶಿವರುದ್ರಪ್ಪ ಅವರ ಬಹುವರ್ಷಗಳ ಕಾಲ ಪಂಚಾಯ್ತಿ ಚೇರ್ಮನ್ ಆಗಿದ್ರಿಂದ ಇವರ ಮನೆ ಇರುವ ರಸ್ತೆಯು ಜನರ ಬಾಯಲ್ಲಿ ಚೇರ್ಮನ್ರ ಬೀದಿ ಎಂದೇ ಆಗಿಹೋಗಿದೆ.
'ಲಂಕೇಶಪ್ಪ ಊರಾಗಿರೋ ಒಂಚೂರು ಆಸ್ತಿನೂ ಇಸ್ಕಳ್ಳಿಲ್ಲ. ಯಾವ್ದೂ ಬ್ಯಾಡ ಅಂತ ಹೇಳ್ದ. ಆದ್ರೆ ಕಷ್ಟಕ್ಕೆ ಬಂದಾಗ ಇಲ್ಲಿರೋರಿಗೆಲ್ಲಾ ದುಡ್ಡು ಕಳಿಸ್ತಿದ್ದ' ಎಂದು ನೆನಪಿಸಿಕೊಳ್ಳುತ್ತಾರೆ ಶಿವರುದ್ರಪ್ಪ ಅವರ ಮಕ್ಕಳಾದ ನಾಗರಾಜ ಹಾಗೂ ಶೇಖರಪ್ಪ.
ಲಂಕೇಶರು ಹುಟ್ಟಿದ ಮನೆ ಈಗ ಶೇಖರಪ್ಪ ಅವರ ಹಿಸ್ಸೆಗೆ ಬಂದಿದ್ದು, ಬಹುವರ್ಷಗಳ ಕಾಲ ಬೆಂಗಳೂರಿನಲ್ಲಿ ಲಂಕೇಶ್ ಪತ್ರಿಕೆ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಅವರು ಈಗ ಇಲ್ಲಿಗೇ ಬಂದು ನೆಲೆಸಿದ್ದಾರೆ. ಲಂಕೇಶರ ನೆನಪಿಗೆ ಊರಿನಲ್ಲೊಂದು ಸಭಾಭವನ ಇದೆ. ಗ್ರಂಥಾಲಯ ಶುರುವಾಗಿದೆ.
'ಕರಿಯವ್ನ ಗುಡಿತಾವ ಅರಳ್ಯಾವೆ ಬಿಳಿ ಹೂವು...' ಎಂದು ಲಂಕೇಶ್ ಮೇಷ್ಟ್ರ ಕವನದಲ್ಲಿ ಕಾಣುವ ಕರಿಯವ್ವನ ಗುಡಿ ಈ ಮನೆಯಿರುವ ಬೀದಿಯ ಅಂಚಿನಲ್ಲೇ ಇದೆ. ಆದರೆ ಬಿಳಿ ಹೂವು ಅರಳಿಸುವ ಮರ ಎಂದೋ ಬಿದ್ದುಹೋಗಿದೆ.
- ಹೊನ್ನಾಳಿ ಚಂದ್ರಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


