ಕೊಟ್ಟಿದ್ದೇ ಉಳಿಯುವುದು!
ಸ್ವಾಮಿ ವಿವೇಕಾನಂದರು ಬೋಧಿಸಿದ ಎರಡು ಆದರ್ಶಗಳೆಂದರೆ ತ್ಯಾಗ ಮತ್ತು ಸೇವೆ. ಇವುಗಳನ್ನು ಅವರು ಕೇವಲ ಬೋಧಿಸಲಿಲ್ಲ, ಸ್ವತಃ ತಮ್ಮ ಜೀವನದಲ್ಲಿ ನಡೆದು ತೋರಿದರು. ತ್ಯಾಗ ಅವರ ಉಸಿರಾಗಿತ್ತು. ಇದನ್ನು ಮನಗಾಣಿಸುವ ಅನೇಕ ಜೀವನ ಘಟನೆಗಳು ಅವರ ಪರಿವ್ರಜನ ಕಾಲದಲ್ಲಿ ಕಂಡು ಬರುತ್ತವೆ.
ಒಂದು ದಿನ ಹಿಮಾಲಯ ಪ್ರದೇಶದಲ್ಲಿ ಸ್ವಾಮೀಜಿ ವೃದ್ಧ ಸನ್ಯಾಸಿಯೊಬ್ಬರನ್ನು ಕಂಡರು. ವಿಪರೀತ ಚಳಿಯಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ವೃದ್ಧ ಸನ್ಯಾಸಿಯನ್ನು ಕಂಡು ಸ್ವಾಮೀಜಿ ತಮ್ಮ ಬಳಿಯಿದ್ದ ಒಂದೇ ಒಂದು ಕಂಬಳಿಯನ್ನು ತೆಗೆದು ಹೊದಿಸಿದರು. ಆಗ ಆ ವೃದ್ಧ ಸನ್ಯಾಸಿ ತಲೆಯೆತ್ತಿ ನೋಡಿ ಕೃತಜ್ಞತೆಯ ಮಂದಹಾಸ ಸೂಸುತ್ತ ಉದ್ಗರಿಸಿದರು, 'ಮಗು, ನಿನಗೆ ನಾರಾಯಣ ಒಳ್ಳೆಯದು ಮಾಡಲಿ!'
ಇನ್ನೊಮ್ಮೆ ಸ್ವಾಮೀಜಿ ಮದ್ರಾಸಿನಲ್ಲಿ ಮನ್ಮಥನಾಥನ ಮನೆಯಲ್ಲಿದ್ದಾಗ ಅಡಿಗೆಯವನು ಅವರ ಹುಕ್ಕಾವನ್ನು ಆಸೆಗಣ್ಣಿನಿಂದ ನೋಡುತ್ತಿರುವುದನ್ನು ಸ್ವಾಮೀಜಿ ಗಮನಿಸಿದರು. ಅದು ಮೈಸೂರು ಮಹಾರಾಜರು ಪ್ರೀತಿಪೂರ್ವಕವಾಗಿ ಒತ್ತಾಯದಿಂದ ಕೊಟ್ಟಿದ್ದ ಸುಂದರವಾದ ಬೀಟೆ ಮರದ ಹುಕ್ಕಾ. ಸ್ವಾಮೀಜಿ ಅಡಿಗೆಯವನಿಗೆ, 'ಏನು, ನಿನಗಿದು ಬೇಕೇನು?' ಎಂದು ಕೇಳಿದರು. ಅವನಿಗೆ ಬೇಕು ಎನ್ನಲು ಧೈರ್ಯ ಬರಲಿಲ್ಲ. ಆದರೆ ಅವನ ಕಣ್ಣುಗಳು ಮಾತ್ರ ಹುಕ್ಕಾದಿಂದ ಕದಲುತ್ತಿಲ್ಲ! ತಕ್ಷಣ ಸ್ವಾಮೀಜಿ ಅದನ್ನು ಅವನ ಕೈಯಲ್ಲಿ ಇಟ್ಟು, 'ತೆಗೆದುಕೋ, ಇದು ನಿನಗೆ!' ಎಂದರು. ಆಗ ಅಡಿಗೆಯವನಿಗೆ ಆದ ಆನಂದಾಶ್ಚರ್ಯಗಳಿಗೆ ಪಾರವೇ ಇಲ್ಲ.
ಹೀಗೆ ಬ್ರಹ್ಮಜ್ಞಾನಿಗಳಾದ ಸ್ವಾಮಿ ವಿವೇಕಾನಂದರಿಂದ ಮುಮುಕ್ಷುಗಳು ಜ್ಞಾನವನ್ನು ಪಡೆದುಕೊಂಡರು; ವಿವೇಕಿಗಳು ಸದ್ಗುಣಗಳನ್ನು ಪಡೆದುಕೊಂಡರು; ನೊಂದವರು ಶಾಂತಿಯನ್ನು ಪಡೆದುಕೊಂಡರು; ಯಾರ್ಯಾರಿಗೆ ಏನೇನು ಬೇಕೋ ಅದನ್ನು ಪಡೆದುಕೊಂಡರು!
- ಆನಂದ ಎಸ್.ಎನ್.
anandsn193@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

