ಬೈಟುಕಾಫಿ

ಶಂಕೆಗಳಿಗೆ ಕೊನೆ ಇಲ್ಲ!

ಶಂಕೆಗಳಿಗೆ ಕೊನೆ ಇಲ್ಲ!
Published On :

ಇವತ್ತೂ ಅಷ್ಟೆ. ಪೆಪ್ಟಿಕ್ ಅಲ್ಸರ್ ಬಗ್ಗೆ ನಮ್ಮಲ್ಲೊಂದು ತಪ್ಪು ಕಲ್ಪನೆ ಇದೆ. ಆಧುನಿಕ ಜೀವನಶೈಲಿ, ಅತಿಯಾದ ಡಯಟ್ ಮತ್ತು ಒತ್ತಡಗಳಿಂದಾಗಿ ಅಲ್ಸರ್ ಉಂಟಾಗುತ್ತದೆ ಎಂಬುದಾಗಿ. ಆದರೆ ಅದನ್ನು ನಿರೂಪಿಸುವ ಯಾವುದೇ ಆಧಾರಗಳಿಲ್ಲ. ಇವು ಈಗಿನ ದಿನಮಾನದಲ್ಲಿ ಕಾಮನ್ ಆಗಿರುವುದರಿಂದ ಬಹುತೇಕ ಎಲ್ಲ ಕಾಯಿಲೆಗಳೊಂದಿಗೂ ಇವುಗಳನ್ನು ತಳಕು ಹಾಕುವ ಪ್ರಯತ್ನ ನಡೆಯುತ್ತಿರುವುದು ಸುಳ್ಳಲ್ಲ. ಇವತ್ತಿನ ಜೀವನಶೈಲಿ ಅಥವಾ ಮಿತಿಮೀರಿದ ಡಯಟ್ ಕಾನ್ಶಿಯಸ್ ಎನ್ನುವುದಕ್ಕಿಂತ ಆಹಾರ ಪದ್ಧತಿ ಹೊಟ್ಟೆ ಕೆಡಿಸುತ್ತದೆ, ಜೀರ್ಣಾಂಗ ವೃಣದಂಥ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎನ್ನುವುದನ್ನು ಒಪ್ಪಿಕೊಳ್ಳಬಹುದು.
ಅಷ್ಟಕ್ಕೂ 'ಪೆಪ್ಟಿಕ್ ಅಲ್ಸರ್' ಎಂದರೆ ಏನು? ಜೀರ್ಣಾಂಗದಲ್ಲಿನ ಹುಣ್ಣು ಎನ್ನುವುದಂತೂ ನಿಮಗೆ ಗೊತ್ತಾಗಿದೆ. ಇದು ಹೇಗೆ ಉಂಟಾಗುತ್ತದೆ? ತಿಳಿದುಕೊಳ್ಳುವ ಕುತೂಹಲ ನಿಮಗೂ ಇದ್ದಿರಲಿಕ್ಕೆ ಸಾಕು. ಕೆಲವು ಸಲ ಹೊಟ್ಟೆಯು ಉದರದ ಕೊನೆ ಮತ್ತು ಸಣ್ಣಕರುಳು ಶುರುವಾಗುವ ಪ್ರದೇಶದಲ್ಲಿ ವಿಚ್ಛಿದ್ರಕಾರಿ ಆಮ್ಲಗಳನ್ನು ಸ್ರವಿಸುತ್ತದೆ, ಜತೆಯಲ್ಲೇ ಜೀರ್ಣಾಂಗ ವ್ಯವಸ್ಥೆಗೆ ಬೇಕಾದ ಕಿಣ್ವಗಳನ್ನೂ ಅತಿಯಾಗಿ ಸ್ರವಿಸುತ್ತದೆ. ಆ ಆ್ಯಸಿಡ್ ಮತ್ತು ಕಿಣ್ವಗಳು ಜತೆಗೂಡಿ, ಜೀರ್ಣಾಂಗಗಳನ್ನೇ ಛಿದ್ರಗೊಳಿಸುತ್ತವೆ. ಅವು ಎಷ್ಟು ತೀವ್ರವಾಗಿರುತ್ತವೆ ಎಂದರೆ ಅವುಗಳ ದಾಳಿ ತಡೆಯಲು ಜೀರ್ಣಾಂಗಳಿಗೆ ಸಾಧ್ಯವಾಗುವುದೇ ಇಲ್ಲ! ಪರಿಣಾಮವಾಗಿ ಗಾಯ, ಹುಣ್ಣು, ಸಣ್ಣ ತೂತು, ಕೊರೆತಗಳು ಉಂಟಾಗುತ್ತವೆ. ಕೆಲವು ಸಲ ರಕ್ತಸ್ರಾವ ಕೂಡ ಆಗಬಹುದು. ಉರಿ, ಕಿಬ್ಬೊಟ್ಟೆ ನೋವು ಅಂತೂ ಸಾಮಾನ್ಯ. ಹೀಗಾಗಿ ಪೆಪ್ಟಿಕ್ ಅಲ್ಸರ್ ಅನ್ನು ಜೀರ್ಣಾಂಗದ ಮೇಲೆ ಅಪಾಯಕಾರಿ ಆ್ಯಸಿಡ್- ಕಿಣ್ವಗಳ ದಾಳಿ ಎಂದು ಹೇಳಬಹುದು.
ವಿಚಾರವಾದಿ, ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ವಿದ್ಯಾರ್ಥಿಗಳಿಗೆ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು, 'ಪ್ರಶ್ನಿಸದೇ ಯಾವುದನ್ನೂ ಒಪ್ಪಿಕೊಳ್ಳಬೇಡಿ!' ವೈದ್ಯಕೀಯ ಲೋಕ ಮತ್ತು ವಿಜ್ಞಾನ ಪ್ರಪಂಚ ಹೇಳುವುದೂ ಇದನ್ನೇ. ಅವು ಇನ್ನೂ ಮುಂದಕ್ಕೆ ಹೋಗಿ ಪ್ರತಿಯೊಂದಕ್ಕೂ ಆಧಾರ ಕೇಳುತ್ತವೆ! ಪೆಪ್ಟಿಕ್ ಅಲ್ಸರ್ ವಿಚಾರದಲ್ಲಿಯೂ ಹಾಗೆಯೇ. ಅಲ್ಸರ್ ಹೇಗೆ ಉಂಟಾಗುತ್ತದೆ ಎನ್ನುವುದರ ಬಗ್ಗೆ ಯಾರ ಆಕ್ಷೇಪವೂ ಇಲ್ಲ. ಪ್ರಶ್ನೆ ಇರುವುದು, ಹೊಟ್ಟೆ ಅಪಾಯಕಾರಿ ಅಥವಾ ವಿಚ್ಛಿದ್ರಕಾರಿ ಆ್ಯಸಿಡ್ಗಳನ್ನು ಸ್ರವಿಸಲು, ಜೀರ್ಣಾಂಗಗಳಿಗೆ ಬೇಕಾಗಿರುವ ಕಿಣ್ವಗಳನ್ನು ಅತಿಯಾಗಿ ಸ್ರವಿಸಲು ಕಾರಣವೇನು ಎನ್ನುವುದು. ಇದರ ಬಗ್ಗೆ ಸಾಕಷ್ಟು ಜಿಜ್ಞಾಸೆಗಳೇನೋ ನಡೆದಿವೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ, ಹೆಲಿಕೊಬ್ಯಾಕ್ಟರ್ ಪೈಲೊರಿ ಎನ್ನುವ ಸೂಕ್ಷ್ಮಾಣುವಿನಿಂದ ಹರಡುವ ಬ್ಯಾಕ್ಟೀರಿಯಾಗಳು ಕಾರಣ ಎನ್ನುವುದು. ಈ ಬ್ಯಾಕ್ಟೀರಿಯಾಗಳು ಹೊಟ್ಟೆಯಲ್ಲಿ ಸೋಂಕು ಹರಡುವ ಆಮ್ಲಗಳನ್ನು ಬಿಡುಗಡೆ ಮಾಡುತ್ತವೆ. ಅದರಿಂದ ಅಲ್ಸರ್ ಉಂಟಾಗುತ್ತದೆ ಎನ್ನುವುದು. ಅದನ್ನು ಒಪ್ಪಿಕೊಂಡಿರುವ ಬಹುತೇಕ ವೈದ್ಯರು ಈಗೀಗ ಜೀರ್ಣಾಂಗ ವೃಣಕ್ಕೆ ಚಿಕಿತ್ಸೆ ನೀಡುವಾಗ ಆ್ಯಂಟಿಬಯೊಟಿಕ್ಗಳನ್ನು ಬಳಸುತ್ತಿದ್ದಾರೆ.

(ಮುಂದುವರಿಯುವುದು)

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

ಮೊ.9900113699 (ಎಸ್ಎಂಎಸ್ ಗೆ ಮಾತ್ರ)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.