ಬೈಟುಕಾಫಿ

ಕುಂಭವನ್ನು ಹೊತ್ತವಳು

ಕುಂಭವನ್ನು ಹೊತ್ತವಳು
Published On :

ಜಗನ್ನಾಥ ಪಂಡಿತ ಎಂಬ ಕವಿ, ಸಂಸ್ಕೃತದ ಶ್ರೇಷ್ಠ ಕವಿಗಳಲ್ಲೊಬ್ಬ. 'ಗಂಗಾಲಹರಿ' ಈತನ ಅಮರಕಾವ್ಯ. ಆದರೆ ಈತ ಇದ್ದುದು ಮೊಗಲ್ ದೊರೆ ಶಹಜಹಾನನ ಆಸ್ಥಾನದಲ್ಲಿ. ಮದುವೆಯಾದದ್ದೂ ಶಹಜಹಾನನ ದಾಸಿಯ ಮಗಳೊಬ್ಬಳನ್ನು. ಆ ಕಾಲದಲ್ಲೇ ಇಸ್ಲಾಂ ಮತೀಯ ಹೆಣ್ಣನ್ನು ಮದುವೆಯಾದ ಈತ ಕ್ರಾಂತಿಕಾರಿ ಎನಿಸಿಕೊಳ್ಳಬೇಕಿತ್ತು. ಆದರೆ ಹಿಂದೂ ಪಂಡಿತರಿಂದ ಈತ ಬಹಿಷ್ಕಾರಕ್ಕೆ ಒಳಗಾದ.
ಅದಿರಲಿ, ಈತ ಶಹಜಹಾನನ ಅಳಿಯನಾದ ಕತೆ ಸ್ವಾರಸ್ಯಕರವಾಗಿದೆ. ಶಹಜಹಾನನ ಆಸ್ಥಾನಕವಿಯೂ ಆಪ್ತನೂ ಆಗಿದ್ದ ಈತ, ದೊರೆಗೆ ಹೋದಲ್ಲೆಲ್ಲ ಕಂಪನಿ ಕೊಡುತ್ತಿದ್ದ. ಹೀಗೇ ಒಮ್ಮೆ ಅರಮನೆಯಲ್ಲಿ ಇಬ್ಬರೂ ಪಗಡೆ ಆಡುತ್ತ ಕುಳಿತಿದ್ದರು. ದೊರೆಗೆ ಬಾಯಾರಿಕೆಯಾಯಿತು. ನೀರು ತರಲು ಹೇಳಿದ. ಒಬ್ಬಳು ನವಯುವತಿ ನೀರು ತಂದಳು. ಜಗನ್ನಾಥ ಬಿಟ್ಟ ಕಣ್ಣು ಬಿಟ್ಟುಕೊಂಡು ಆಕೆಯನ್ನೇ ನೋಡುತ್ತಿದ್ದ. ಅದನ್ನು ನೋಡಿ, ಶಹಜಹಾನನಿಗೆ ಕುಚೋದ್ಯ ಮಾಡುವ ಮನಸ್ಸಾಯಿತು. 'ಆಕೆಯನ್ನು ವರ್ಣಿಸು' ಎಂಬ ಸವಾಲನ್ನು ಕವಿಯ ಮುಂದಿಟ್ಟ. ಅದಕ್ಕೆ ಜಗನ್ನಾಥ ತಟ್ಟನೆ ಉತ್ತರಿಸಿದ್ದು ಹೀಗೆ:

ಇಯಂ ಸುಸ್ತನೀ ಮಸ್ತಕನ್ಯಸ್ತಕುಂಭಾ
ಕುಸುಂಭಾರುಣಂ ಚಾರು ಚೇಲಂ ವಸಾನಾ
ಸಮಸ್ತಸ್ಯ ಲೋಕಸ್ಯ ಚೇತಃಪ್ರವೃತ್ತೀಮ್
ಗೃಹೀತ್ವಾ ಘುಟೇ ವಿನ್ಯಸ್ಯ ಯಾತೀವ ಭಾತಿ


ಈ ಚೆಲುವೆ ಉದಯಕಾಲದ ಅರುಣಾಗಸದ ಬಣ್ಣದ ವಸನವನ್ನುಟ್ಟಿದ್ದಾಳೆ. ತಲೆ ಮೇಲೆ ಚಿನ್ನದ ಕುಂಭದಲ್ಲಿ ನೀರನ್ನು ಹೊತ್ತು ತರುತ್ತಿದ್ದಾಳೆ. ಇನ್ನೆರಡು ಕುಂಭಗಳಲ್ಲಿ ಅಮೃತವಿದೆಯೋ ಏನೋ! ಅಂತೂ ಸಮಸ್ತ ಲೋಕದ ಚೇತನವನ್ನೇ ಹೊತ್ತು ತರುತ್ತಿರುವಂತೆ ಮಿಂಚುತ್ತಿದ್ದಾಳೆ.
ಇದನ್ನು ಕೇಳಿ ಸಂತೋಷಗೊಂಡ ದೊರೆ, ಕವಿಗೆ ಆಕೆಯ ಮೇಲೆ ಮನಸ್ಸಿದ್ದುದನ್ನು ಅರಿತು, ಆಕೆಯನ್ನು ಧಾರೆಯೆರೆದುಕೊಟ್ಟನಂತೆ.

- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.