ಒಂದು ಕೃತಕ ಕಿವುಡುತನ
ತಣ್ಣನೆ ಹಾಗೆ ಆಲೋಚಿಸಿ ನೋಡಿ. ಹೊಗಳಿಕೆ ಬಯಸದ ಮನುಷ್ಯನು ಯಾರಿಲ್ಲಿ? ಯಾರೊಬ್ಬನೂ ಕಾಣಸಿಗನು. ಅವನ ಮುಂದಿನ ನಡೆಗೆ ಒಂದು ಪುಟ್ಟ ಪ್ರಶಂಸೆಯ ಪಕಳೆ ಉದುರಬೇಕು. ಪಕ್ಕದಲ್ಲಿದ್ದವ ಒಮ್ಮೆ ನನ್ನ ಕೆಲಸ ಕಂಡು, ನಾ ನಡೆದ ಹೆಜ್ಜೆಗಳನ್ನು ಕಂಡು ಶ್ಲಾಘಿಸಲಿ ಎಂಬ ಆಸೆ ಎಲ್ಲರೆದೆಯಲ್ಲೂ ಇದ್ದಿದ್ದೇ. ಪುಟ್ಟ ಪುಟ್ಟ ಪ್ರಶಂಸೆಗಳನ್ನು ಬಯಸಿಯೇ ದೊಡ್ಡದೇನನ್ನೋ ಸಾಧಿಸುವ ಹಂಬಲ. ಆದರೆ, ದೊಡ್ಡ ಸಾಧನೆ ಎನ್ನುವುದು ಹೊಗಳಿಕೆಗಳ ಹಾದಿಯಲ್ಲಿ ಅರಳಿ ಪುಷ್ಪವಾಗುವಂಥದ್ದಲ್ಲ.
ಮೊನ್ನೆ ನೀವು ತೆಂಡೂಲ್ಕರ್ ನಿವೃತ್ತಿ ಆದದ್ದನ್ನು ಕಂಡಿರಿ. ಕಡೆಯ ಭಾಷಣದಲ್ಲಿ ಆತ ಗುರುಗಳ ಬಗ್ಗೆ ಮಾತಾಡಿದ. ಕೋಚ್ ರಮಾಕಾಂತ್ ಅಚ್ರೇಕರ್ ಯಾವತ್ತೂ ತೆಂಡೂಲ್ಕರ್ಗೆ 'ನೀನು ಇವತ್ತು ಚೆನ್ನಾಗಿ ಆಡಿದ್ದೀ' ಅಂತ ಹೇಳೇ ಇರಲಿಲ್ಲ. ಸಚಿನ್ ಆಟವನ್ನು ಲೋಕ ಮೆಚ್ಚಿದರೂ, ಗುರು ಯಾವತ್ತೂ ಮೆಚ್ಚಿಕೊಳ್ಳಲಿಲ್ಲ. ಅದರರ್ಥ ಅಚ್ರೇಕರ್ಗೆ ತೆಂಡುಲ್ಕರ್ ಮೇಲೆ ಹೊಟ್ಟೆಕಿಚ್ಚು ಅಂತಲ್ಲ. 'ನನ್ನ ಶಿಷ್ಯ ಇನ್ನೂ ಸಾಧಿಸಲಿ' ಎಂಬ ಒಳ ಬಯಕೆ. 'ನಾನು ಇವತ್ತು ನಿವೃತ್ತಿಯಾಗುತ್ತಿದ್ದೀನಿ. ಇವತ್ತಾದರೂ ಹೇಳಿ ಗುರುಗಳೇ, ನಾನು ಚೆನ್ನಾಗಿ ಆಡೇ ಇಲ್ವೇ?' ಎಂದು ಸಚಿನ್ ಭಾವುಕನಾದಾಗಲೂ ಗುರುಗಳ ಬಾಯಿಯಿಂದ ಶಹಬ್ಬಾಸ್ ಮಾತು ಹೊರಡಲೇ ಇಲ್ಲ. ಈಗ ಹೇಳಿ, ಸಚಿನ್ ಸಾಧಕನಾಗಲಿಲ್ಲವೇ? ಚೆನ್ನಾಗಿ ಆಡ್ತೀಯಲ್ಲಪ್ಪ ಅಂತ ಗುರು ಹೇಳಿದರೆ, ಆತನ ಆಟದ ಆರ್ಭಟವೇ ನಿಧಾನವಾಗುತ್ತಿತ್ತೇನೋ? ನಾವೂ ಅಷ್ಟೇ. ಯಾರಿಂದಲೂ ಪ್ರಶಂಸೆ ನಿರೀಕ್ಷಿಸಬಾರದು. ಹೊಗಳಿಕೆ ಕಟ್ಟಿಕೊಂಡು ನಮಗೆ ಏನೂ ಆಗಬೇಕಾದ್ದಿಲ್ಲ. ನಮ್ಮೊಳಗೊಬ್ಬ ವಿಮರ್ಶಕನಿದ್ದರೆ ಸಾಕು. ಅವನಿಗೆ ನಮ್ಮ ಕಾರ್ಯಗಳನ್ನು ಒಪ್ಪಿಸಬೇಕು. ಅವನ ಹೊಗಳಿಕೆ, ನಿಂದನೆಗಳನ್ನಷ್ಟೇ ಆಲಿಸಿಕೊಂಡು ಹೊರಜಗತ್ತಿನ ಪಾಲಿಗೆ ಕಿವುಡರಾಗಿ ಹೊಸತು ಕೊಡಬೇಕು.
- ಸಹನೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

