ಅಪಘಾತಗಳು ಅಪಘಾತಗಳಷ್ಟೆ
ಖಾಸಗಿ ಬಸ್ ಪ್ರಯಾಣ ಸುರಕ್ಷಿತವಲ್ಲ, ಸರ್ಕಾರಿ ಬಸ್ಸು ಸುರಕ್ಷಿತ ಎನ್ನುವ ಎರಡೂ ವಾದವೂ ಸರಿಯಲ್ಲ. ಎಲ್ಲ ವಿಭಾಗಗಳಲ್ಲೂ ಖಾಸಗಿಯವರು ಬೇಕೇ ಬೇಕು. ಅದು ಅಂಚೆ ಇರಲಿ, ಪ್ರಯಾಣ ಇರಲಿ, ವಿಮೆ ಇರಲಿ, ದೂರವಾಣಿ ಇರಲಿ, ಅಥವಾ ಇನ್ನಾವುದೇ ಇರಲಿ. ಇಲ್ಲಿ ಖಾಸಗಿ ಮತ್ತು ಸರ್ಕಾರಿ ಎರಡೂ ಇರಬೇಕು. ಇಬ್ಬರೂ ಇದ್ದರಷ್ಟೇ ಪೈಪೋಟಿ ಬರುವುದು. ಪೈಪೋಟಿ ಇಲ್ಲದಿದ್ದರೆ ಹೇಳಿದ್ದೇ ವೇದವಾಕ್ಯ ಎಂಬಂತಾಗುತ್ತದೆ. ಎಲ್ಲ ರಂಗಗಳಲ್ಲಿಯೂ ಸರ್ಕಾರವೇ ಇರಲು ಸಾಧ್ಯವಿಲ್ಲ. ಆದರೆ, ಖಾಸಗಿಯವರು ಎಲ್ಲ ವ್ಯವಸ್ಥೆಗಳನ್ನು ಸರಿಯಾಗಿ ನಿಭಾಯಿಸುತ್ತಿದ್ದಾರೆಯೇ ಎಂಬುದನ್ನು ಆಗಾಗ್ಗೆ ಪರಿಶೀಲಿಸುತ್ತಿರಬೇಕು. ಸಾರ್ವಜನಿಕರಿಗೆ ಯಾವುದೇ ಅನಾನುಕೂಲಗಳಾಗದಂತೆ ಸರ್ಕಾರಿ ಅಧಿಕಾರಿಗಳು ನೋಡಿಕೊಳ್ಳಬೇಕಷ್ಟೆ. ಅಪಘಾತಗಳು ಅಪಘಾತಗಳಷ್ಟೆ. ಯಾವುದೂ ಉದ್ದೇಶ ಪೂರ್ವಕವಲ್ಲ ಎಂಬುದನ್ನು ಮನಗಾಣಬೇಕು. ಬೇಜವಾಬ್ದಾರಿ ವರ್ತನೆಗೆ ಕಡಿವಾಣ ಹಾಕಬೇಕು. ಸರ್ಕಾರಿ ಬಸ್‌ಗಳ ಚಾಲಕರೇ ಹೆಚ್ಚು ಬೇಜವಾಬ್ದಾರಿ ವರ್ತನೆ ತೋರುವುದು, ಪ್ರಯಾಣಿಕರನ್ನು ನಿರ್ಲಕ್ಷಿಸುವುದು.
-ಪಿ. ಎಮ್. ಕೀರ್ತಿ, ಬೆಂಗಳೂರು
ರಸ್ತೆಗಳಲ್ಲಿನ ಹೊಂಡಗಳನ್ನು ಮುಚ್ಚಲಿ
ನಾವು ತಲುಪಬೇಕಾದ ಎಲ್ಲ ಸ್ಥಳಗಳಿಗೂ ಸರ್ಕಾರಿ ಬಸ್‌ಗಳ ಸೌಲಭ್ಯ ಇದೆಯೇ ಎಂಬುದು ಮುಖ್ಯ. ಉದಾಹರಣೆಗೆ ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ ಇಂತಹ ಪ್ರದೇಶಗಳಲ್ಲಿ ಜನರು ಖಾಸಗಿ ಬಸ್ ಸಂಚಾರದ ಮೇಲೆ ಅವಲಂಬಿತರಾಗಿದ್ದಾರೆ. ಎಲ್ಲಾ ಖಾಸಗಿ ಬಸ್‌ಗಳಲ್ಲೂ ಲೋಪವಿದೆ ಎಂಬುದು ಅರ್ಥಹೀನ. ಖಾಸಗಿ ಬಸ್‌ಗಳ ಮೇಲೆ ಸರ್ಕಾರದ ಗಮನ ಇರಬೇಕು ಅಷ್ಟೆ. ಸಂಚಾರ, ಸಮಯ ಪಾಲನೆ, ಚಾಲಕ, ನಿರ್ವಾಹಕರ ನಡತೆ ಪ್ರಯಾಣಿಕರೊಂದಿಗಿನ ಸೌಜನ್ಯಯುತ ನಡವಳಿಕೆಗಳು ಖಾಸಗಿ ಬಸ್ಸುಗಳಲ್ಲಿ ಉತ್ತಮ ವಾಗಿದೆ ಎಂಬುದನ್ನು ಅಲ್ಲಗೆಳೆಯುವಂತಿಲ್ಲ. ಬಸ್ಸು ಯಾವುದಾದರೇನು ಅದರ ವೇಗಕ್ಕೆ ನಿಯಂತ್ರಣವಿರಬೇಕು. ಮುಖ್ಯವಾಗಿ ಸರ್ಕಾರವು ರಸ್ತೆಗಳಲ್ಲಿ ಹೊಂಡಗಳು ಇಲ್ಲದಂತೆ ಸರಿ ಮಾಡಿದಲ್ಲಿ ಶೇ.99 ರಷ್ಟು ಅಪಘಾತಗಳು ಕಡಿಮೆಯಾಗುತ್ತದೆ.
-ಪತ್ತಂಗಿ ಹೇಮಲತ ಮುರಳಿ, ಬೆಂಗಳೂರು
ಏಕರೂಪ ನಿಯಮ ಅನ್ವಯಿಸಲಿ
ಯಾವುದೇ ಬಸ್ ಆಗಲಿ ಸುರಕ್ಷತೆಯ ದೃಷ್ಟಿಯಿಂದ ಏಕರೂಪದ ನಿಯಮ ಅನ್ವಯವಾಗಬೇಕು. ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರಿಂದ ದುಬಾರಿ ಪ್ರಯಾಣ ದರ ವಸೂಲಿ ಮಾಡುತ್ತಿದ್ದು, ಪ್ರಯಾಣಿಕರ ಸುರಕ್ಷತೆಯೂ ತಮ್ಮ ಜವಬ್ದಾರಿ ಎಂಬುದನ್ನು ಬಸ್ ಮಾಲಿಕರು ಅರಿಯಬೇಕು. ಹವಾನಿಯಂತ್ರಿತ ವೋಲ್ವೊ ಸೇರಿದಂತೆ ಬಹುತೇಕ ಬಸ್‌ಗಳು ಸಂಪೂರ್ಣವಾಗಿ ಗಾಜಿನ ಕವಚದಿಂದ ನಿರ್ಮಿತಗೊಂಡಿದ್ದು ಆಕಸ್ಮಿಕ ಅವಘಡಗಳು ಸಂಭವಿಸಿದಾಗ ಪ್ರಯಾಣಿಕರು ಪ್ರಾಣಾಪಾಯದಿಂದ ಸುರಕ್ಷಿತವಾಗಿ ಇಳಿದು ಪಾರಾಗಲು ತುರ್ತುನಿರ್ಗಮನದ ಬಾಗಿಲು ನಿರ್ಮಿಸುವುದು ಅತ್ಯವಶ್ಯಕ. ಬಸ್ ಚಾಲಕರನ್ನು ದಿನಕ್ಕೆ 8 ರಿಂದ 10 ಗಂಟೆಗಿಂತ ಹೆಚ್ಚು ದುಡಿಸಬಾರದು. ಹೀಗಾದಲ್ಲಿ ಅಪಘಾತಗಳು ಕಡಿಮೆ.
-ಆರ್.ಸಿ. ಪರಶುರಾಮ್, ಶಿಕಾರಿಪುರ
'ಜಗುಲಿ'ಯಲ್ಲಿ ಈ ಸಲದ ವಿಷಯ 'ಖಾಸಗಿ ಬಸ್ ಪ್ರಯಾಣ ಎಷ್ಟು ಸುರಕ್ಷಿತ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

