ಬೈಟುಕಾಫಿ

ಮನಸ್ಸು ರಿಫ್ರೆಶ್ ಮಾಡಿ

ಮನಸ್ಸು ರಿಫ್ರೆಶ್ ಮಾಡಿ
Published On :

ಮನಸ್ಸು ಇದ್ದಕ್ಕಿದ್ದಂತೆ ಖಾಲಿಯಾಗಿಬಿಡುತ್ತದೆ. ಯಾವುದೇ ಭಾವವೂ ಅಲ್ಲಿದೆ ಅನಿಸುವುದಿಲ್ಲ. ಯಾವುದೇ ಕೆಲಸ ಮಾಡಲೂ ಮುಂದಾಗುವುದು ಬೇಡ ಅನಿಸುತ್ತದೆ. ಮೈಗೂ ಜಡತೆಯ ಅನಿಸಿಕೆ. ಯಾರ ಜತೆಯೂ ಮಾತಾಡಬೇಕೆನಿಸುವುದಿಲ್ಲ. ಯಾಕೆ ಹೀಗಾಗುತ್ತದೆ? ಜಗಳ, ವಿರಸ, ಒಡಕು, ಅಪಮಾನ, ಸೋಲು... ಹೀಗೆ ಅದಕ್ಕೆ ಕಾರಣಗಳು ಏನೇ ಇರಬಹುದು, ಮನಸ್ಸು ಹಾಳಾಗಿರುವುದಂತೂ ಸತ್ಯ.
ಇದು ಕಂಪ್ಯೂಟರ್ ಇದ್ದಕ್ಕಿದ್ದಂತೆ ಕೆಲಸ ಮಾಡದೆ ಮಂಕಾಗಿಬಿಡುತ್ತದಲ್ಲಾ ಅಂಥದೇ ಗುಣ. ಆಗೇನು ಮಾಡುತ್ತೀರಿ? ಅದರಲ್ಲಿರುವ ವೈರಸ್‌ಗಳನ್ನು ತೆಗೆದು, ಮೆಮೊರಿ ಕ್ಲಿಯರ್ ಮಾಡಿ, ರಿಫ್ರೆಶ್ ಮಾಡಿ, ರಿಸ್ಟಾರ್ಟ್ ಮಾಡುತ್ತೀರಿ ಅಲ್ಲವೆ? ಈಗಲೂ ಹಾಗೇ ಮಾಡಬೇಕು. ಕೋಪ, ತಾಪ, ಸೋತ ಭಾವನೆ, ಕೀಳರಿಮೆ, ತನ್ನಿಂದ ಯಾವುದೂ ಸಾಧ್ಯವಾಗದು ಎಂಬ ನಿಷ್ಕ್ರಿಯತೆ ಇವೆಲ್ಲ ಮನಸ್ಸಿನೊಳಗಿರುವ ವೈರಸ್‌ಗಳು. ಇವನ್ನು ಮೊದಲು ಡಿಲೀಟ್ ಮಾಡಬೇಕು. ಅಂದರೆ ಇವೆಲ್ಲವೂ ತಕ್ಷಣ ಸಮೂಲ ನಾಶವಾಗುತ್ತವೆ ಎಂದಲ್ಲ. ಇದ್ದರೆ ಮನದ ಮೂಲೆಯಲ್ಲಿ, ರಿಸೈಕಲ್ ಬಿನ್‌ನಲ್ಲಿ ಇದ್ದುಕೊಳ್ಳಲಿ. ಆದರೆ ದೈನಂದಿನ ಸುಗಮ ಕಾರ್ಯಾಚರಣೆಗೆ ಅವು ಭಂಗ ತರುವುದು ಬೇಡ. ಬಳಿಕ, ನಿಮ್ಮ ಮಿತಿಗಿಂತ ಹೆಚ್ಚಿನ ಹೊರೆಗಳನ್ನು ನೀವು ಹೊತ್ತುಕೊಂಡಿದ್ದೀರಾ ಪರಿಶೀಲಿಸಿ. ಅದು ಕೆಲಸದ ಹೊರೆ ಇರಬಹುದು, ಸಂಬಂಧಗಳ ಹೊರೆ ಇರಬಹುದು, ಹವ್ಯಾಸಗಳ, ಚಟಗಳ ಹೊರೆ ಇರಬಹುದು. ಇವುಗಳಲ್ಲಿ ಬೇಕಾದದ್ದೆಷ್ಟು, ಬೇಡವಾದದ್ದೆಷ್ಟು ನೋಡಿ. ಉಪಯೋಗಕಾರಿಯಾದುದಷ್ಟನ್ನೇ ಉಳಿಸಿಕೊಂಡು, ಉಳಿದವುಗಳನ್ನು ನಿರ್ದಾಕ್ಷಿಣ್ಯವಾಗಿ ನಾಶ ಮಾಡಿ. ಅವು ಮುಂದೆಂದೂ ನಿಮಗೆ ಹೊರೆಯಾಗದಂತೆ ನೋಡಿಕೊಳ್ಳಿ.
ಇಷ್ಟಕ್ಕೇ ಮುಗಿಯಿತೆಂದಿಲ್ಲ. ಪಾತ್ರೆಯಲ್ಲಿ ಹಳೆಯ ತುಪ್ಪದ ಜಿಡ್ಡು ಉಳಿಯುವಂತೆ, ಕಲ್ಮಶ ಸ್ವಲ್ಪ ಉಳಿದಿರುತ್ತದೆ. ಇದನ್ನು ನಾಶ ಮಾಡಲು ಉತ್ತಮ ಹವ್ಯಾಸವೆಂಬ ಸುಗಂಧ ಬೇಕು. ಎಲ್ಲಿಗಾದರೂ ಟೂರ್ ಹೋಗಿ ಬನ್ನಿ. ಒಂದೊಳ್ಳೆಯ ಪುಸ್ತಕ ಓದಿ, ಸಿನೆಮಾ ನೋಡಿ, ಸಂಗೀತ ಕೇಳಿ. ಯಾವುದಾದರೂ ಅನಾಥಾಲಯಕ್ಕೆ ಹೋಗಿ ಅವರಿಗಿಷ್ಟು ನೆರವಾಗಿ. ಮಕ್ಕಳೊಂದಿಗೆ ಮಗುವಾಗಿ ಆಡಿ. ಹೊಸ ಹವ್ಯಾಸ ಶುರುಹಚ್ಚಿಕೊಳ್ಳಿ. ಇವೆಲ್ಲದರಿಂದ ಮನಸ್ಸು ಲವಲವಿಕೆಯಿಂದ ಗರಿಗೆದರಿ ಹೊಸ ಹೊಣೆಗಾರಿಕೆಗಳಿಗೆ ಸಜ್ಜಾಗುವುದರಲ್ಲಿ ಅನುಮಾನವಿಲ್ಲ.

-  ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.