ಸಾರ್ವಜನಿಕ ಸಮಿತಿ ಸಭೆ
ಸಂಚಾರ ಪೊಲೀಸರ ಸಮಸ್ಯೆ ಒಂದೆರಡಲ್ಲ. ಇದಕ್ಕೆ ಯಾವ ಸಂಚಾರ ಠಾಣೆಯೂ ಹೊರತಲ್ಲ. ಆದರೆ, ಆಯಾ ನಗರಗಳ ಮುಖ್ಯರಸ್ತೆಯಲ್ಲಿನ ಸಮಸ್ಯೆಗಳು ಮಾತ್ರ ಪೊಲೀಸರಿಗೆ ತಿಳಿಯುತ್ತವೆ. ಅಡ್ಡರಸ್ತೆಗಳು, ಗಲ್ಲಿಗಳು, ಸಣ್ಣ ರಸ್ತೆಗಳಲ್ಲಿನ ಸಮಸ್ಯೆ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗುವುದು ಕಷ್ಟ.
ಈ ಹಿನ್ನೆಲೆಯಲ್ಲಿ ನಗರದ ಎಲ್ಲಾ ಬಡಾವಣೆಯ, ಪ್ರತಿಯೊಂದು ರಸ್ತೆ, ಅಲ್ಲಿನ ಸಮಸ್ಯೆಗಳ ಬಗ್ಗೆ ಅರಿಯಲು ಬೆಂಗಳೂರು ಸಂಚಾರ ಪೊಲೀಸರು ಸಿಟಿಜನ್ ಫೋರಂ ಮೀಟಿಂಗ್(ಸಾರ್ವಜನಿಕ ಸಮಿತಿ ಸಭೆ) ಎಂಬ ವಿನೂತನ ಕಾರ್ಯಕ್ರಮ ನಡೆಸುತ್ತಿದ್ದಾರೆ.
ಪ್ರತಿ ತಿಂಗಳ ಮೂರನೇ ಶನಿವಾರ ಈ ಸಭೆ ನಡೆಯುತ್ತದೆ. ಪ್ರತಿ ಪೊಲೀಸ್ ಠಾಣೆಯಲ್ಲೂ ಬೆಳಗ್ಗೆ 10 ಗಂಟೆಯಿಂದ ಈ ಸಭೆ ಆರಂಭವಾಗಿ, ಮಧ್ಯಾಹ್ನ ಮುಕ್ತಾಯವಾಗಲಿದೆ. ಆ ದಿನ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸೇರಿದಂತೆ ಎಲ್ಲಾ ಸಿಬ್ಬಂದಿ ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸುತ್ತಾರೆ.
ಆಯಾ ಠಾಣೆ ವ್ಯಾಪ್ತಿಯ ಸಾರ್ವಜನಿಕರು ಪ್ರತಿ ಮೂರನೇ ಶನಿವಾರ ಸಂಬಂಧಪಟ್ಟ ಸಂಚಾರ ಪೊಲೀಸ್ ಠಾಣೆಗೆ ಹೋಗಿ ತಮ್ಮ ಸಮಸ್ಯೆಗಳನ್ನು ಹೇಳಬಹುದು(ಸಂಚಾರಕ್ಕೆ ಸಂಬಂಧಿಸಿದ್ದು ಮಾತ್ರ). ಉದಾಹರಣೆಗೆ, ರಸ್ತೆಯಲ್ಲಿ ಅನಗತ್ಯ ರಸ್ತೆ ಉಬ್ಬು ಇರುವುದು, ಗುಂಡಿಗಳು, ತಂತಿಗಳನ್ನು ಅಳವಡಿಸಲು ಕಾಮಗಾರಿ ಮಾಡಿ ರಸ್ತೆ ಹಾಳು ಮಾಡಿರುವುದು, ಸಂಚಾರ ದಟ್ಟಣೆ ಇದ್ದಲ್ಲಿ, ಆ ಭಾಗದ ಶಾಲಾ ಮಕ್ಕಳಿಗೆ ಇದರಿಂದ ಸಮಸ್ಯೆಯಾಗುತ್ತಿದ್ದಲ್ಲಿ, ಹಿರಿಯ ನಾಗರಿಕರ ಸಮಸೆಯೂ ಸೇರಿದಂತೆ ಆ ಭಾಗದ ಜನರ ಸಮಸ್ಯೆಗಳನ್ನು ತಿಳಿಸಬಹುದು.
ಅಲ್ಲದೆ, ಸಂಚಾರ ನಿಯಮಗಳ ಬಗ್ಗೆ ಅನುಮಾನಗಳಿದ್ದಲ್ಲಿ ಅದನ್ನು ನಿವಾರಿಸಿಕೊಳ್ಳಬಹುದು. ಅಥವಾ ಸಮಸ್ಯೆ ಬಗೆಹರಿಸಲು ಪೊಲೀಸರಿಗೆ ಸಲಹೆ ಸೂಚನೆಗಳನ್ನು ಕೊಡಬಹುದು. ಸಮಸ್ಯೆ ಆಲಿಸಿದ ನಂತರ ಪೊಲೀಸರು ಸಂಬಂಧಪಟ್ಟವರನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸುತ್ತಾರೆ. ಹಾಗಾಗಿ ತಮ್ಮ ಯಾವುದೇ ದೂರುಗಳಿದ್ದರೂ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಬಹುದು.
- ಶಾಂತ ತಮ್ಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

