ಕೇಕ್ ಮಾಡಿ ಕೇಕೆ ಹಾಕಿ!

ಕ್ರಿಸ್ಮಸ್ ಅಂದ್ರೆ ಇಂಟರ್ನ್ಯಾಷನಲ್ ಹಾಲಿಡೇ. ಹೌದು. ಅದು ಇತರೆ ಹಬ್ಬಗಳಂತೆ ಡೇಟು ಬದಲಿಸುವುದಿಲ್ಲ. ಪ್ರತಿ ವರ್ಷ ಡಿಸೆಂಬರ್ ಇಪ್ಪತ್ತೈದಕ್ಕೇ ಬರುತ್ತದೆ. ಕ್ರೈಸ್ತರ ಪವಿತ್ರ ಹಬ್ಬವಾದರೂ ಇದು ಎಲ್ಲ ಧರ್ಮದವರಲ್ಲೂ ಸಂಭ್ರಮ ತರುವ ಹಬ್ಬ. ಕ್ರಿಸ್ಮಸ್ ಅಂದ್ರೆ ವರ್ಷದ ಕೊನೆಯ ರಜೆ. ಕ್ರಿಸ್ಮಸ್ ಅಂದ್ರೆ ಹೊಸ ವರ್ಷಕ್ಕೆ ಮುನ್ನುಡಿ. ಹಾಗಾಗಿ ಕ್ರಿಸ್ಮಸ್ ಸಂಭ್ರಮ ಜನವರಿ ವರೆಗೂ ವಿಸ್ತರಿಸೋದು ಸಹಜ. ಕ್ರಿಸ್ಮಸ್ ಅಂದರೆ ವರ್ಷದ ರಜೆ ಉಳಿಸಿಕೊಂಡು ಲಾಂಗ್ಲೀವ್ ಅಂತ ತಗೊಂಡು ಹೊಸವರ್ಷದ ದಿನವೇ ಮರಳಿ ಆಫೀಸಿಗೆ ಮರಳೋ ಪ್ಲಾನ್ ಮಾಡಿದವರ ಪಾಲಿನ ಗುಡ್ ಡೇ. ಕ್ರಿಸ್ಮಸ್ ಅಂದ್ರೆ ಸಂತಾಕ್ಲಾಸ್ ಅಲಿಯಾಸ್ ಕ್ರಿಸ್ಮಸ್ ತಾತ. ಎಲ್ಲಕ್ಕಿಂತ ಹೆಚ್ಚಾಗಿ ಕ್ರಿಸ್ಮಸ್ ಅಂದ್ರೆ ಕ್ರಿಸ್ಮಸ್ ಕೇಕ್!
ಹೊಸವರ್ಷ, ಹುಟ್ಟುಹಬ್ಬ, ಆನಿವರ್ಸರಿ, ಇವೆಲ್ಲ ಕೇಕುಗಳನ್ನು ತಿಂದು ಖುಷಿಯಲ್ಲಿ ಕೇಕೆ ಹಾಕಿದ ನಮಗೆ ಕ್ರಿಸ್ಮಸ್ ಕೇಕ್ ಎಂಬುದು ವರ್ಷದ ಕೊನೆ ಕೇಕ್. ಅದಷ್ಟೇ ಕಾರಣಕ್ಕಲ್ಲ ಕ್ರಿಸ್ಮಸ್ ಕೇಕ್ ವಿಶೇಷ ಅನಿಸೋದು. ಕ್ರೈಸ್ತರೇ ಇರುವ ಹಲವು ವಿದೇಶಗಳು ಮಾತ್ರವಲ್ಲ ಸರ್ವಧರ್ಮದ ಬೀಡಾಗಿರುವ ಭಾರತದಲ್ಲಿ ಕೂಡ ಕ್ರಿಸ್ಮಸ್ ಹತ್ತಿರವಾಗುತ್ತಿದ್ದಂತೆ ತರಹೇವಾರಿ ಆಕಾರದ ತರಹೇವಾರಿ ರುಚಿಗಳ ತರಹೇವಾರಿ ಸೈಜಿನ ಕೇಕುಗಳ ತಯಾರಿಕೆ ಶುರುವಾಗುತ್ತದೆ. ವಿಶ್ವದ ಅತಿ ದೊಡ್ಡ ಕೇಕು, ವಿಶ್ವದ ಅತಿ ಚಿಕ್ಕ ಕೇಕು, ಒಬಾಮ ಆಕೃತಿಯ ಕೇಕು, ವೈಟ್ಹೌಸ್ ಆಕೃತಿಯ ಕೇಕು ಹೀಗೆ ಏನೇನು ಸ್ಪೆಷಲ್ ಮಾಡಬಹುದೋ ಎಲ್ಲವನ್ನೂ ಮಾಡುತ್ತಾರೆ. ಇಪ್ಪತ್ತೈದರ ಈ ಸಂಭ್ರಮಕ್ಕೆ ಇಪ್ಪತ್ತನೇ ತಾರೀಕಿನಿಂದಲೇ ಪೂರ್ವತಯಾರಿ ಆರಂಭವಾಗುತ್ತದೆ.
ಈ ಸಂಭ್ರಮಕ್ಕೆ ಮಹಾನಗರಿ ಬೆಂಗಳೂರು ಕೂಡ ಹೊರತಲ್ಲ. ಶಿವಾಜಿನಗರ, ಆಸ್ಟಿನ್ ಟೌನ್, ಇಂದಿರಾನಗರ, ಬೆನ್ಸನ್ ಟೌನ್ ಮತ್ತಿತರ ಜಾಗಗಳಲ್ಲಿ ಸುಂದರವಾದ ವ್ಯವಸ್ಥಿತವಾದ ಚರ್ಚುಗಳಿವೆ. ಬೆಂಗಳೂರಿನ ಬೇಕರಿಗಳು ಡಿಸೆಂಬರ್ ಇಪ್ಪತ್ತರಿಂದ ಬ್ಯುಸಿಯಾಗುತ್ತವೆ. ಈ ಬ್ಯುಸಿ ಕೆಲಸಗಳ ನಡುವೆಯೇ ಕೆಲವು ಬೇಕರಿಗಳ ಕೇಕು ತಯಾರಕರು ಕ್ರಿಸ್ಮಸ್ ಕೇಕ್ ತಯಾರಿಸುವ ಬಗೆ, ಹಾಗೂ ಕ್ರಿಸ್ಮಸ್ ಕೇಕ್ ವಿಶೇಷಗಳ ಬಗೆಗೆ, ಅವುಗಳಲ್ಲಿ ಜನ ಮೆಚ್ಚುವ ವಿಧಗಳ ಬಗೆಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡರು.
ಅಂದ ಹಾಗೆ ಕ್ರಿಸ್ಮಸ್ಗೆ ಅಂತ ಕೇಕಲ್ಲೇನೂ ಭಾರಿ ವಿಶೇಷತೆ ಇರೋದಿಲ್ಲ. ಆದರೆ ಈ ಸಂದರ್ಭಕ್ಕೆ ಪ್ಲಮ್ ಕೇಕ್ ಹೆಚ್ಚು ಪ್ರಸ್ತುತವಂತೆ. ಮೊದಲೆಲ್ಲಾ ಕ್ರಿಸ್ಮಸ್ ಕೇಕ್ ಅಂದರೆ ಅದು ಪ್ಲಮ್ ಕೇಕ್ ಎಂಬಂತಾಗಿತ್ತು. ನಂತರದಲ್ಲಿ ಅದಕ್ಕೆ ಡ್ರೈ ಫ್ರೂಟ್ಸ್, ನಟ್ಸ್, ಕ್ರೀಮ್ ಇತ್ಯಾದಿಗಳನ್ನು ಸೇರಿಸಿ ಇನ್ನಷ್ಟು ರುಚಿಕಟ್ಟಿಸಲಾಯ್ತು.
ಕೆಲವು ಕಡೆ ನವೆಂಬರ್ನಲ್ಲೇ ಕೇಕು ತಯಾರಿಸಿ ಅದನ್ನು ಶೈತ್ಯದಲ್ಲಿ ಸಂರಕ್ಷಿಸಲಾಗುತ್ತದಂತೆ. ಅದಕ್ಕೆ ಕ್ರಿಸ್ಮಸ್ ತನಕ ದಿನವೂ ಚೂರು ಚೂರು ಬ್ರಾಂಡಿ ವಿಸ್ಕಿ ಸೇರಿಸುತ್ತಾ ಹೋಗಲಾಗುತ್ತದಂತೆ. ಇದನ್ನ ಫೀಡಿಂಗ್ ಅಂತಾರಂತೆ. ನೀವೂ ಮನೆಯಲ್ಲಿ ಕೇಕ್ ತಯಾರಿಸಬಹುದು ಎಂದು ಅವರು ಕೊಟ್ಟ ಒಂದಷ್ಟು ಷಾರ್ಟ್ ಆ್ಯಂಡ್ ಸ್ವೀಟ್ ಟಿಪ್ಸ್ ಇಲ್ಲಿದೆ ನಿಮಗಾಗಿ.
ತಯಾರಿಕೆ
ಕೇಕ್ ತಯಾರಿಕೆಗೆ ಮುಖ್ಯವಾಗಿ ಕೇಕ್ ಟಿನ್, ದೊಡ್ಡ ಬೌಲ್ ಮತ್ತು ತೊಳಸೋದಕ್ಕೆ ಒಂದು ಅಗಲದ ಸೌಟು ಬೇಕಿದ್ದು, ಓವನ್ ತುಂಬಾ ಅಗತ್ಯ. ಓವನ್ ಉಷ್ಣಾಂಶ 170 ಡಿಗ್ರಿಗೆ ಹದವಿಟ್ಟುಕೊಳ್ಳುವುದು ಗಮನದಲ್ಲಿರಲಿ. ಎಲ್ಲ ಪೂರ್ವತಯಾರಿಗಳಾದ ಮೇಲೆ ಕೇಕ್ ಪ್ರೊಡಕ್ಷನ್ ಟೈಮ್ ಅಂತ 45 ನಿಮಿಷ ಸಾಕು.
ಬಟ್ಟಲಿನ ಒಳಮೈಗೆ ಗ್ರೀಸ್ ಪ್ರೂಫ್ ಕಾಗದ ಹಾಕಿಡಿ. ಮಿಕ್ಸಿಯಲ್ಲಿ ಸಕ್ಕರೆ, ಬೆಣ್ಣೆ, ಮಾರ್ಗರೈನ್ ಇಷ್ಟನ್ನೂ ಒಟ್ಟಾಗಿ ಸೇರಿಸಿ ತಿರುಗಿಸಿ ಪೇಸ್ಟ್ ರೀತಿಯಲ್ಲಿ ಆದ ನಂತರ ಅದಕ್ಕೆ ಮೊಟ್ಟೆ ಒಡೆದು ಹಾಕಬೇಕು. ಅಲ್ಲಿಗೆ ಅದು ಹಿಟ್ಟಿನ ರೂಪಕ್ಕೆ ತಿರುಗುತ್ತದೆ. ಆಗ ಅದನ್ನು ಕಿರುಬೆಂಕಿಯಲ್ಲಿ ಕಾಯಿಸಿ ಸ್ವಲ್ಪ ಗಟ್ಟಿಗೊಳಿಸಬೇಕು. ಹದಕ್ಕೆ ಬಂದ ಮೇಲೆ ಚೆರ್ರಿ, ಡ್ರೈಫ್ರೂಟ್ಸ್ ಮತ್ತು ಬಾದಾಮಿ ಹಾಗೂ ಇತರೆ ನಟ್ಸ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಈಗ ಗ್ರೀಸ್ ಪ್ರೂಫ್ ಕಾಗದ ಇರುವ ಬಟ್ಟಲಿಗೆ ವರ್ಗಾಯಿಸಬೇಕು. ತದನಂತರ ಕೊನೆಯ ಸ್ಟೆಪ್ ಎಂಬಂತೆ ಅದನ್ನು ಓವನ್ನಲ್ಲಿ ಇಟ್ಟು ನೂರಾ ಎಪ್ಪತ್ತು ಡಿಗ್ರಿ ಸೆಂಟಿಗ್ರೇಡು ಬಿಸಿಯಲ್ಲಿ ಇಡಬೇಕು. ಅಲ್ಲಿಗೆ ಅದು ಪುಡಿಯಾಗದ ಹದಕ್ಕೆ ಬಂದಿರುತ್ತದೆ. ನಂತರ ಬ್ರಾಂಡಿ ಅಥವಾ ರಮ್ ಹನಿಗಳನ್ನು ಸೇರಿಸಿ ಅದನ್ನು ಫೀಡಿಂಗ್ ಮಾಡಬಹುದು. ತುಂಬಾ ದಿನ ಇಡಬೇಕೆಂದಾದರೆ ಫ್ರಿಜ್ಜಲ್ಲಿಡಬಹುದು.
ಸಾಮಗ್ರಿಗಳು
ಬೆಣ್ಣೆ
ಐದು ಕೋಳಿ ಮೊಟ್ಟೆ
ಡ್ರೈ ಫ್ರೂಟ್ಸ್ ಮತ್ತು ನಟ್ಸ್
ಚೆರ್ರಿ
ಮಾರ್ಗರೈನ್
ಮಿಕ್ಸೆಡ್ ಸ್ಪೈಸ್
ಬ್ರಾಂಡಿ ಅಥವಾ ರಮ್
ಹಾಲು ಹಾಗೂ ಗ್ರೀಸ್ಪ್ರೂಫ್ ಕಾಗದ.
- ನವೀನ್ ಸಾಗರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


