ಬೈಟುಕಾಫಿ

'ಸೇತುಬಂಧ ನಿಲ್ಲಿಸುವುದಿಲ್ಲ'

'ಸೇತುಬಂಧ ನಿಲ್ಲಿಸುವುದಿಲ್ಲ'
Published On :

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದ ಆ ಬಾಲಕ ಅಂದು ಎಂಜಿನಿಯರಿಂಗ್ ಪದವಿ ಪಡೆದು ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಬೆಂಗಳೂರಿಗೆ ಹೊರಟಾಗ ಒಂದು ದೊಡ್ಡ ಕಂಪನಿಯ ಎಂಡಿಯಾಗುವ ಕನಸು ಕಂಡಿದ್ದ. ಆದರೆ ಇವರ ತಂದೆ ರು. 400 ಕೊಟ್ಟು, ಮಗ ಊರಲ್ಲೇ ಇರಲಿ ಎಂಬ ಉದ್ದೇಶದಿಂದ 'ಬೆಂಗಳೂರು ನೋಡಿ ಬಾ, ನಿನಗೆ ಕೆಲಸ ಮಾತ್ರ ಸಿಗದೇ ಇರಲಿ' ಎಂದು ಹಾರೈಸಿದ್ದರಂತೆ. ಅಂದು ಅವರು ನೀಡಿದ 'ಹಾರೈಕೆ'ಯಿಂದಾಗಿಯೇ ಇವರು ಊರಲ್ಲೇ ವರ್ಕ್ಶಾಪ್ ಮಾಡಿ ನೆಲೆನಿಂತರು. ಮಳೆಗಾಲದಲ್ಲಿ ನದಿದಾಟಲು ಎದುರಾಗುತ್ತಿದ್ದ ಊರಿನ ಸಮಸ್ಯೆ ಪರಿಹರಿಸಲು ಆರಂಭಿಸಿದ ತೂಗು ಸೇತುವೆ ಇಂದು ಇವರನ್ನು ಸೇತುವೆಗಳ ಸರದಾರನನ್ನಾಗಿಸಿದೆ.
ಸೀತೆಯನ್ನು ಅರಸುತ್ತಾ ಹೊರಟ ಶ್ರೀರಾಮ, ಸಮುದ್ರ ದಾಟಲು ಲಂಕೆಗೆ ಸೇತುವೆ ನಿರ್ಮಿಸಿದ್ದನ್ನು ಕೇಳಿದ್ದೇವೆ. ಆಗ ಆ ಒಂದು ಸೇತುವೆ ನಿರ್ಮಿಸಲು ದೊಡ್ಡ ಕಪಿ ಸೈನ್ಯವೇ ಶ್ರೀರಾಮನ ಹಿಂದಿತ್ತು. ಆದರೆ ಇವರು ಒಂದಲ್ಲ, ಎರಡಲ್ಲ... 123 ಸೇತುವೆ ನಿರ್ಮಿಸಿದ ಸಾಧಕ. ಅವರು ನಿರ್ಮಿಸಿದ್ದು ಸಂಪರ್ಕಕ್ಕೊಂದು ಸೇತುವೆಯಾದರೂ, ಅದು ಬರೀ ಸೇತುವೆ ಮಾತ್ರವಾಗಲಿಲ್ಲ. ಒಂದು ದಡದಿಂದ ಇನ್ನೊಂದು ದಡಕ್ಕೆ, ಜನರನ್ನು, ಸ್ಥಳವನ್ನು ಜೊತೆಗೆ ಹೃದಯವನ್ನೂ ಬೆಸೆದಿದೆ. ತೂಗು ಸೇತುವೆಗಳ ಮೂಲಕ ಸರ್ಕಾರವೂ ಮಾಡದ ಮೂಲ ಸೌಕರ್ಯ ಒದಗಿಸುವ ಮಹತ್ಕಾರ್ಯವನ್ನು ಇವರೊಬ್ಬರೇ ಮಾಡಿದ್ದಾರೆ.
ಇವರೇನಾದರೂ ಅಸಾಧ್ಯವೆಂದು ಕೈಕಟ್ಟಿ ಕುಳಿತಿದ್ದರೆ ಅದೆಷ್ಟೋ ಹಳ್ಳಿಗಳು ಇನ್ನೂ ಸಂಪರ್ಕ ಸಾಧಿಸದೆ ಕುಗ್ರಾಮವಾಗಿಯೇ ಇರುತ್ತಿತ್ತು. ಆ ಹಳ್ಳಿಯ ಮುಗ್ಧ ಮಕ್ಕಳಿಗೆ ಶಿಕ್ಷಣ ಭಾಗ್ಯವೂ ಇರುತ್ತಿರಲಿಲ್ಲ, ಅಲ್ಲಿನ ಜನರಿಗೆ ಆರೋಗ್ಯ ಭಾಗ್ಯವೂ ಲಭಿಸುತ್ತಿರಲಿಲ್ಲ. ಹಳ್ಳಿ ಹಳ್ಳಿಗಳನ್ನು ತೂಗುಸೇತುವೆ ಮೂಲಕ ಬೆಸೆದ ಈ ಹಳ್ಳಿ ಹೈದರೆಂದರೆ ಸೇತುವೆ ಸರದಾರ ಸುಳ್ಯದ ಗಿರೀಶ್ ಭಾರದ್ವಾಜ್. ದಕ್ಷಿಣ ಕನ್ನಡದ ವಿಶ್ವೇಶ್ವರಯ್ಯನವರೆಂದೇ ಪ್ರಸಿದ್ಧರಾಗಿರುವ ಇವರು, ಸದ್ಯ ನಕ್ಸಲ್ ಪೀಡಿತ ಪ್ರದೇಶವಾದ ಒಡಿಶಾದ ರಾಯಗಡ್ನಲ್ಲಿ ಗನ್ಮ್ಯಾನ್ಗಳ ರಕ್ಷಣೆಯೊಂದಿಗೆ ತೂಗುಸೇತುವೆ ನಿರ್ಮಿಸುತ್ತಿದ್ದಾರೆ.
ಇನ್ನೇನು ಸಾಧಿಸಿದ್ದು ಸಾಕು, ಹಳ್ಳಿ ಹಳ್ಳಿಗಳಿಗೆ ಸಂಪರ್ಕ ಸೇತುವಾಗಿ ಜನರ ಮನಸ್ಸನ್ನು ತಲುಪಿದ ತೃಪ್ತಿಯಂತೂ ಜೊತೆಯಲ್ಲೇ ಇದೆ, ಹಾಯಾಗಿ ನಿವೃತ್ತ ಜೀವನ ಸಾಗಿಸೋಣ ಎಂದು ಗಿರೀಶ್ ಅವರು ಎಂದುಕೊಳ್ಳುತ್ತಿರುವಾಗಲೇ ಸಮಾಜದ ಬಗ್ಗೆ ಕಾಳಜಿ ಇರುವವರಿಗಾಗಿ ನೀಡುವ ಸಿಎನ್ಎನ್ ಐಬಿಎನ್ 'ಸೀನಿಯರ್ ಸಿಟಿಜನ್ ಅವಾರ್ಡ್, ದಿ ಅನ್ಸ್ಟಾಪೆಬಲ್' ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂತು. ಬಿಗ್ ಬಿ ಅವರಿಂದ ಪ್ರಶಸ್ತಿ ಸ್ವೀಕರಿಸುವಾಗಲೇ ನಿರ್ಧರಿಸಿದರು, ಎಲ್ಲಿವರೆಗೆ ದೇಹದಲ್ಲಿ ಶಕ್ತಿ ಇರುತ್ತೊ ಅಲ್ಲಿವರೆಗೂ ಸಮಾಜಕ್ಕಾಗಿ ದುಡಿಯಲೇ ಬೇಕೆಂದು. ಹಾಗಾಗಿ ಮತ್ತೆ ಮುಂದುವರಿದಿದೆ ಇವರ ಸೇತುವೆ ನಿರ್ಮಾಣ ಕಾರ್ಯ. ಪ್ರಶಸ್ತಿಯ ಹಿನ್ನೆಲೆಯಲ್ಲಿ ಸೇತುವೆ ಸರದಾರೊಂದಿಗಿನ ಮಾತುಕತೆ ಇಲ್ಲಿದೆ:

ತೂಗು ಸೇತುವೆ ನಿರ್ಮಾಣ ಕುರಿತು ಹೇಗೆ ಕಲ್ಪನೆ ಮೂಡಿದ್ದು? ಅದು ಯಾವಾಗ?
ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರು ತಮ್ಮ ಒಂದು ಕೃತಿಯಲ್ಲಿ, ಹಳ್ಳಿಯೊಂದರಲ್ಲಿ ಭೌತಿಕ ಸಂಪರ್ಕ, ವಿದ್ಯುನ್ಮಾನ ಹಾಗೂ ಜ್ಞಾನವನ್ನು ಸಾಧಿಸಿದರೆ ಆರ್ಥಿಕ ಅಭಿವೃದ್ಧಿ ತನ್ನಿಂದ ತಾನೆ ಸಾಧ್ಯವಾಗುತ್ತೆ ಎಂದು ಉಲ್ಲೇಖಿಸಿದ್ದನ್ನು ಓದಿದ್ದೆ. ಆದರೆ ನಮ್ಮ ಹಳ್ಳಿಗಳಿಗೆ ಸಂಪರ್ಕವೇ ಇರುವುದಿಲ್ಲ, ಮಳೆಗಾಲದಲ್ಲಂತೂ ಗ್ರಾಮಗಳು ಸಂಪರ್ಕ ಕಡಿದುಕೊಂಡು ದ್ವೀಪವೇ ಆಗಿಬಿಡುತ್ತವೆ. 1987- 88 ಸಮಯವದು, ಸುಳ್ಯದ ಶ್ರೀಧರ ಭಟ್ ಎಂಬವರು ತಮ್ಮ ಮನೆ ಸಮೀಪದ ಹಳ್ಳವನ್ನು ಬೆತ್ತದ ಸಹಾಯದಿಂದ ದಾಟುತ್ತಿದ್ದರು. ಅದನ್ನು ನೋಡಿ ತೂಗು ಸೇತುವೆ ಕಟ್ಟುವ ಕನಸು ಹುಟ್ಟಿತು. ಮೊದಲ ಸೇತುವೆ ಕುಶಾಲನಗರದಲ್ಲಾದರೆ, ಎರಡನೇ ಸೇತುವೆ ನಿರ್ಮಿಸಿದ್ದು, ಊರಿನಲ್ಲೇ.

ಎಲ್ಲೆಲ್ಲಿ ನಿರ್ಮಾಣಗೊಂಡಿದೆ, ಅತ್ಯಂತ ಸವಾಲಿನ ಸೇತುವೆ ಯಾವುದು?
ದಕ್ಷಿಣ ಕನ್ನಡದಲ್ಲೇ ಹಲವು, ರಾಜ್ಯದ ವಿವಿಧೆಡೆ ಮಲೆನಾಡ ಅಭಿವೃದ್ಧಿ ಮಂಡಳಿ ಮತ್ತು ನಿರ್ಮಿತಿ ಕೇಂದ್ರದ ಆಶ್ರಯದಲ್ಲಿ ಸುಮಾರು 25, ನೆರೆಯ ರಾಜ್ಯವಾದ ಕೇರಳದಲ್ಲಿ 32 ತೂಗು ಸೇತುವೆ ಹಾಗೂ ಆಂಧ್ರ ಪ್ರದೇಶದಲ್ಲಿ 3 ಹಾಗೂ ದೂರದ ಒಡಿಶಾದಲ್ಲಿ 2 ಸೇತುವೆ ನಿರ್ಮಾಣಗೊಂಡಿವೆ. ಕೊಡಗಿನ ಮಾಕುಟ್ಟದಲ್ಲಿ ನಿರ್ಮಿಸಿದ್ದು ಅತ್ಯಂತ ಉದ್ದ (80 ಮೀಟರ್), ತುಂಬಾ ಸವಾಲಿನದ್ದಾಗಿತ್ತು. ಅಲ್ಲಿ ಭೋರ್ಗರೆವ ಮಳೆಯ ನಡುವೆ, ಕಾಡಾನೆಗಳ ಕಾಟದ ನಡುವೆ ನಿರ್ಮಿಸುವಾಗ ತುಂಬಾ ಕಷ್ಟವಾಗಿತ್ತು.

ಸಂಪರ್ಕವಿಲ್ಲದಿರುವಲ್ಲಿ ಸಂಪರ್ಕ ಸೇತು ನಿರ್ಮಿಸಿದ ಬಳಿಕ ಅಲ್ಲಿನ ಜನರು ನಿಮ್ಮನ್ನು ಹೇಗೆ ಸ್ಮರಿಸುತ್ತಾರೆ?
ಉತ್ತರ ಕನ್ನಡದ ಕುಮಟಾದ ಕುಗ್ರಾಮವೊಂದರಲ್ಲಿ ಬಹುಜನರ ಬಹು ನಿರೀಕ್ಷಿತ ತೂಗುಸೇತುವೆ ನಿರ್ಮಾಣವಾಗಿ ಮರಳಿ ಊರಿಗೆ ಹೊರಡುವಾಗ 92 ವರ್ಷದ ಹಿರಿಯಜ್ಜರೊಬ್ಬರು ಅವರ ಮನೆಗೆ ಕರೆಸಿ ಸತ್ಕರಿಸಿ, ಕಾಲು ಮುಟ್ಟಿ ನಮಸ್ಕಾರ ಮಾಡಿದ ನೆನಪು ಇಂದಿಗೂ ಇದೆ. ಇದಕ್ಕಿಂತ ಇನ್ನೇನು ಬೇಕು. ಪ್ರತಿಯೊಂದು ಹಳ್ಳಿಗಳ ಜನರು ಇಂದಿಗೂ ಸಂಪರ್ಕದಲ್ಲಿದ್ದು,  ನಿಮ್ಮಂಥವರೇ ನಮ್ಮ ದೇಶದ ಆಸ್ತಿ ಎಂದು ಕಣ್ಣೀರು ಸುರಿಸಿದವರಿದ್ದಾರೆ. ಸಂಪರ್ಕವೇ ನಮ್ಮ ಮೂಲ ಉದ್ದೇಶ. ಯಾವುದೇ ಪ್ರದೇಶದಲ್ಲಿ ತೂಗು ಸೇತುವೆ ಆಗಬೇಕಾದರೆ, ಸೈಟ್ ಸರ್ವೆಯನ್ನು ಉಚಿತವಾಗೇ ಮಾಡುತ್ತೇನೆ. ನನಗೆ ಇದರಲ್ಲಿ ಊರಿಗೆ ಸಂಪರ್ಕ ಸಿಕ್ಕ ಬಳಿಕ ಅಲ್ಲಿನ ಜನರಿಂದ ಸಿಗುವ ಆಶೀರ್ವಾದವೇ ದೊರೆಯುವ ಲಾಭವಾಗಿದೆ.

ಮುಂದೇನಾದರೂ ಹೊಸ ಯೋಜನೆ...?
ನನಗೀಗ 63 ವರ್ಷ. ನನ್ನ ಮಗನೂ ನನ್ನೊಡನೆ ಈಗ ಸೇತುವೆ ನಿರ್ಮಾಣದಲ್ಲಿ ಕೈಜೋಡಿಸಿದ್ದು, ಈ ತಂತ್ರಜ್ಞಾನವನ್ನು ಕಲಿಯ ಬಯಸುವ ವಿದ್ಯಾರ್ಥಿಗಳಿಗೆ ಕಲಿಸಲು ಸಿದ್ಧನಿದ್ದೇನೆ. ಹೊರ ರಾಜ್ಯದ ವಿದ್ಯಾರ್ಥಿಯೊಬ್ಬ ಕಲಿಯಲು ಈಗ ಮುಂದೆ ಬಂದಿದ್ದಾನೆ.

ಯಾವುದೆಲ್ಲ ಪ್ರಶಸ್ತಿ, ಸನ್ಮಾನ ದೊರೆತಿವೆ, ಸರ್ಕಾರವೇನಾದರೂ ನಿಮ್ಮ ಸಾಧನೆ ಗುರುತಿಸಿದೆಯಾ?
ಸರ್ಕಾರದಿಂದ ಸಂಪರ್ಕಕ್ಕಾಗಿ ಮನವಿ ಸಲ್ಲಿಸಿ ಸಾಧ್ಯವಾಗದೇ ರೋಸಿ ಹೋದ ಜನರು, ಆ ಊರಿಗೊಂದು ಸಂಪರ್ಕ ಸೇತು ನಿರ್ಮಾಣವಾದ ಬಳಿಕ ಸ್ವರ್ಗವೇ ಸಿಕ್ಕ ಅನುಭವ. ಆಗ ಅವರು ಸುರಿಸುವ ಆನಂದಭಾಷ್ಪಕ್ಕಿಂತ ಬೇರಾವ ಪ್ರಶಸ್ತಿಯ ಅಗತ್ಯವಿದೆ ಹೇಳಿ. ಖಾಸಗಿಯಾಗಿ ಸಿಎನ್ಎನ್- ಐಬಿಎನ್ ಚಾನೆಲ್ ಸೇರಿದಂತೆ ಕೆಲವು ಸನ್ಮಾನ, ಪ್ರಶಸ್ತಿಗಳು ಸಂದಿವೆ. ಸರ್ಕಾರದಿಂದ ಕಳೆದ ವರ್ಷ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

123 ತೂಗು ಸೇತುವೆಗಳ ನಿರ್ಮಾಣ ಸಾಧ್ಯವಾಗಿದ್ದು ಹೇಗೆ?
ಏನೂ ಇಲ್ಲದೇ ಇರುವಲ್ಲಿ ಕನಿಷ್ಠ ಸಂಪರ್ಕ ನೀಡುವುದು ನಮ್ಮ ಉದ್ದೇಶ.   ಹೆಚ್ಚು ಬಾಳಿಕೆ, ಸುಭದ್ರ, ಕಡಿಮೆ ಖರ್ಚಿನಲ್ಲಿ ಈ ಸೇತುವೆ ಸಾಧ್ಯವಾಗಿದ್ದರಿಂದ ಹೆಚ್ಚು ಜನಪ್ರಿಯವಾಯಿತು. ಮತ್ತೆಲ್ಲ ಜನರ ಆಶಯದಿಂದಾಗಿ ಸಾಧ್ಯವಾಯ್ತು. ಆರಂಭದಲ್ಲಿ ಒಬ್ಬನೇ ಸುಳ್ಯದ ಸುಮಿತ್ರಾ ಎಂಜಿನಿಯರಿಂಗ್ನವರ ಜೊತೆ ಸೇರಿ ತೂಗು ಸೇತುವೆ ನಿರ್ಮಿಸಲು ಆರಂಭಿಸಿದೆ. ಈಗ ನನ್ನ ಟೀಮ್ನಲ್ಲಿ 71 ಜನರಿದ್ದಾರೆ. ಸೇತುವೆ ನಿರ್ಮಿಸುವಾಗ ಅಲ್ಲೇ ಟೆಂಟ್ ಹಾಕಿ ಎಲ್ಲರೂ ಒಟ್ಟಿಗೆ ಇದ್ದು ಕೆಲಸ ಮಾಡುತ್ತೇವೆ. ಹಾಗಾಗಿ ನಿರ್ದಿಷ್ಟ ಸಮಯಕ್ಕೆ ಸೇತುವೆಗಳನ್ನು ಮುಗಿಸಲು ಸಾಧ್ಯವಾಗುತ್ತಿದೆ. ಮೊದಮೊದಲು ಮರದ ಹಲಗೆ ಬಳಸಿದರೆ, ಈಗ ಸಿಮೆಂಟ್ ಹಲಗೆಗಳನ್ನು ಬಳಸುತ್ತಿದ್ದೇವೆ. ನದಿಯ ಎರಡೂ ಬದಿಯಲ್ಲಿ ಸಿಮೆಂಟ್ ಪಿಲ್ಲರ್ ನಿರ್ಮಿಸುತ್ತೇವೆ, ಎರಡೂ ಬದಿಯಲ್ಲಿ ನೈಸರ್ಗಿಕವಾಗಿ ಸದೃಢ ಮರವಿದ್ದಲ್ಲಿ ಮರಕ್ಕೇ ಸೇತುವೆ ನಿರ್ಮಿಸುತ್ತೇವೆ.

- ರಾಘವೇಂದ್ರ ಅಗ್ನಿಹೋತ್ರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.