ಬೈಟುಕಾಫಿ

ಖಾಸಗಿ ಬಸ್‌ಗಳದೇ ಸಾಮ್ರಾಜ್ಯ

Published On :

ಈಗಲೂ ಹಲವು ಚಿಲ್ಲೆಗಳಲ್ಲಿ ಖಾಸಗಿ ಬಸ್‌ಗಳದೇ ಕಾರುಬಾರು. ಸರ್ಕಾರಿ ಬಸ್‌ಗಳ ಚಾಲಕ-ನಿರ್ವಾಹಕರದ್ದು ಮತ್ತೊಂದು ಕಾರುಬಾರು. ಇವರಲ್ಲಿ ಸೌಜನ್ಯತೆ, ಮಾನವೀಯತೆಯನ್ನು ಹುಡುಕಬೇಕಾಗಿದೆ. ತಮ್ಮದೇ ಸ್ವಂತ ಬಸ್ಸು ಎನ್ನುವಂತೆ ಆಡುತ್ತಾರೆ. ಸರ್ಕಾರಿ ಬಸ್ ಎಲ್ಲಾದರೂ ಒಂದೆಡೆ ಕೆಟ್ಟು ನಿಂತರೆ ಅದು ಸಣ್ಣ ರಿಪೇರಿಯಾದರೂ ಅದನ್ನು ಮಾಡಲಾಗದವರು. ಖಾಸಗಿ ಬಸ್ ಆದರೆ, ಕೆಲವೇ ಕ್ಷಣದಲ್ಲಿ ರಿಪೇರಿ ಮಾಡಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದೊಯ್ಯುತ್ತಾರೆ. ಪ್ರಯಾಣಿಕರಿಗೆ ಬಾಕಿ ಚಿಲ್ಲರೆ ಕೊಡಬೇಕಾದರೆ ನಿರ್ವಾಹಕ ಹತ್ತಾರು ಬಾರಿ ಕೂಗಿ ಹೇಳಿ ತಪ್ಪದೇ ತಲುಪಿಸುತ್ತಾರೆ. ಆದರೆ ಇಂತಹ ವಾತಾವರಣವನ್ನು ನಾವು ಸರ್ಕಾರಿ ಬಸ್ಸಿನಲ್ಲಿ ಕಾಣಲು ಸಾಧ್ಯವೇ? ಕೊಡಗು ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳದೇ ಸಾಮ್ರಾಜ್ಯ. ಈ ಬಸ್ಸುಗಳ ಚಾಲಕರು, ನಿರ್ವಾಹಕರು ಪ್ರಯಾಣಿಕರೊಂದಿಗೆ ಸ್ಪಂದಿಸುವ ಪರಿ ಅಮೋಘ. ಎಲ್ಲೆಂದರಲ್ಲಿ ಬಸ್ ನಿಲ್ಲಿಸಿ ಸಹಕರಿಸುವ ರೀತಿಯ ಜೊತೆಗೆ ಸಮಯ ಪರಿಪಾಲನೆ ಬಗ್ಗೆ ಅದೆಷ್ಟು ಹೇಳಿದರೆ ಸಾಲದು. ಇತ್ತೀಚೆಗೆ ಖಾಸಗಿ ಬಸ್ಸುಗಳು ಸುಸಜ್ಜಿತಗೊಂಡಿದೆ. ಸುಖ ಪ್ರಯಾಣಕ್ಕೆ ಹಿತಕರವಾಗಿದೆ.
- ಸಂಗೀತ ವಿಜಯ್, ತುಮಕೂರು

ಮುಂಜಾಗ್ರತೆ ಅವಶ್ಯವಿದೆ!
ಖಾಸಗಿ ಬಸ್‌ಪ್ರಯಾಣವು ಒಂದು ಅರ್ಥದಲ್ಲಿ ಸುರಕ್ಷಿತ ಹೌದು ಹಾಗೂ ಅಲ್ಲ. ಕಾರಣ ಏನೆಂದರೆ ಖಾಸಗಿ ಬಸ್‌ಗಳು ತಮ್ಮ ಆರಂಭಿಕ ನಿಲ್ದಾಣದಿಂದ ಹೊರಟರೆ ಮಧ್ಯದಲ್ಲಿ ಎಲ್ಲೂ ನಿಲ್ಲದೆ ತಾನು ತಲುಪಬೇಕಾದ ನಿಲ್ದಾಣಕ್ಕೆ ತಲುಪಿದರೆ ಅದು ಸುರಕ್ಷಿತ ಪ್ರಯಾಣವಾಗುತ್ತದೆ. ಬಸ್‌ನಲ್ಲಿ ಪ್ರಯಾಣಿಕರು ಇಲ್ಲದಿದ್ದರೆ ಎಲ್ಲಾ ಕಡೆಯು ನಿಲ್ಲಿಸಿ ಜನರನ್ನು ಕರೆದು ಕರೆದು ಹತ್ತಿಸುತ್ತಾರೆ. ಲಗೇಜು ಇದ್ದಲ್ಲಿ ಚೌಕಾಸಿ ಮಾಡಿ ಬಸ್ಸಿನಲ್ಲಿ ತುಂಬಿಕೊಂಡು ಎಲ್ಲೆಂದರೆ ಅಲ್ಲಿ ಇಳಿಸಿ ನಿಗದಿತ ಸಮಯಕ್ಕೆ ತಲುಪದೆ ಪ್ರಯಾಣಿಕರಿಗ ಮುಜುಗರ ತರಿಸುತ್ತಾರೆ. ಕೆಲವೊಮ್ಮೆ ಸಾಮಾನು ಸರಂಜಾಮು ಹಾಕುವಾಗ ಸ್ಫೋಟಕಗಳು ಇದ್ದಲ್ಲಿ ಅವು ಅಪಘಾತಗಳಿಗೆ ಅವಕಾಶ ದಾರಿ ಮಾಡಿಕೊಟ್ಟಂತಾಗುತ್ತದೆ. ಆದರೆ ನಿರ್ವಾಹಕರು ಸ್ವಲ್ಪ ಮುಂಜಾಗ್ರತೆಯಿಂದ ಕಾರ್ಯ ನಿರ್ವಹಿಸಿದರೆ ಇಂತಹ ಅಪಘಾತಗಳನ್ನು ತಪ್ಪಿಸಬಹುದು.
-ಜೀವನ್.ಎಲ್ ಪೈ, ಶಿರಸಿ

ಅಪಾಯಗಳ ಪ್ರಮಾಣ ಫಿಫ್ಟಿ-ಫಿಫ್ಟಿ
ಸ್ವಚ್ಛತೆ, ಸಮಯ ಪಾಲನೆಗಳಂತಹ ವಿಚಾರಗಳಲ್ಲಿ ಸರ್ಕಾರಿ ಬಸ್‌ಗಳನ್ನು ಓವರ್ ಟೇಕ್ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಖಾಸಗಿ ಬಸ್ಸುಗಳು ಸುರಕ್ಷಿತ ಪ್ರಯಾಣದ ವಿಷಯದಲ್ಲಿ ಫುಲ್ ಮಾರ್ಕ್ಸ್ ಪಡೆಯಲಾರವು. ಹಗಲಿನಲ್ಲಿ ಸುರಕ್ಷಿತ ಪ್ರಯಾಣದ ವಿಷಯಕ್ಕೆ ಸಂಬಂಧಪಟ್ಟಂತೆ ಖಾಸಗಿ ಬಸ್‌ಗಳು ಸರ್ಕಾರಿ  ಬಸ್‌ಗಳಿಗಿಂತ ಸುರಕ್ಷಿತ. ಆದರೆ, ರಾತ್ರಿ ವೇಳೆಯಲ್ಲಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವುದೆಂದರೆ ಸಾವನ್ನು ಸೊಂಟಕ್ಕೆ ಕಟ್ಟಿಕೊಂಡಂತೆ, ಕೆಲವೇ ತಿಂಗಳುಗಳ ಹಿಂದೆಯಷ್ಟೇ ರಾತ್ರಿಯ ಪ್ರಯಾಣದಲ್ಲಿ ಪ್ರಯಾಣಿಕರ ಸಮೇತ ಸುಟ್ಟು ಕರಕಲಾದ ಖಾಸಗಿ ಬಸ್ಸುಗಳ ಅಪಘಾತ ಆಘಾತಕ್ಕೆ ಕಾರಣವಾಗಿದೆ. ಆದ್ದರಿಂದ ಖಾಸಗಿ ಬಸ್‌ಗಳಲ್ಲಿ ಸುರಕ್ಷತೆ ಮತ್ತು ಅಪಾಯಗಳ ಪ್ರಮಾಣ ಫಿಫ್ಟಿ-ಫಿಫ್ಟಿ ಎಂದೇ ಹೇಳಬೇಕಾಗುತ್ತದೆ.
- ನರೇಂದ್ರ ಘೋರ್ಪಡೆ, ಭದ್ರಾವತಿ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.