ನಗು ಎಂದಿದೆ ಮಂಜಿನಾ ಬಿಂದು!

ನಗು ಎಂದಾಕ್ಷಣ ಮಗುವಿನ ಚಿತ್ರಣ ಪ್ರತ್ಯಕ್ಷ. ಮಗುವಿನ ಕಿಲಕಿಲ ನಗುವಿಗೆ ಸಾಟಿ ಏನಿದೆ? ಮಗು ದಿನದಲ್ಲಿ 300-400 ಬಾರಿ ನಗುತ್ತದೆ. ವಯಸ್ಸಾದವರು 15-20 ಸಲ ನಕ್ಕರೆ ಅದೇ ಹೆಚ್ಚು. ನಗುವಿಂದ ಯಾವ ದುಷ್ಪರಿಣಾಮವೂ ಇಲ್ಲ. ಸತ್ಪರಿಣಾಮವೇ ಎಲ್ಲ.
ನಗು ದೇಹಕ್ಕೆ ಹಲವಾರು ಲಾಭಾಂಶ ನೀಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಶಕ್ತಿಗೆ ಉತ್ತೇಜನ ನೀಡುತ್ತದೆ. ನೋವು ನಿವಾರಿಸುತ್ತದೆ. ಒತ್ತಡದಿಂದ ಪಾರಾಗಿಸುವಲ್ಲಿ ನಗುವಿನದು ಪ್ರಮುಖ ಪಾತ್ರ. ನಗು ಸುಲಭವಾಗಿ ಮತ್ತು ಉಚಿತವಾಗಿ ಸಿಗುವ ಚಿಕಿತ್ಸೆ. ಬಳಸಲು ಅತ್ಯಂತ ಸುಲಭ. ದೇಹ ಮತ್ತು ಮೆದುಳನ್ನು ಸಮತೋಲನಕ್ಕೆ ತರುವ ಶಕ್ತಿ ನಗುವನ್ನು ಬಿಟ್ಟರೆ ಬೇರಾವ ಚಿಕಿತ್ಸೆಗೂ ಸಾಧ್ಯವಿಲ್ಲ.
ನಗು ಆರೋಗ್ಯಕ್ಕೆ ಉತ್ತಮ
ನಗು ಪೂರ್ತಿ ದೇಹವನ್ನು ಉಲ್ಲಾಸದಿಂದ ಇರುವಂತೆ ಮಾಡುತ್ತದೆ. ಒಂದೊಳ್ಳೆಯ ನಗು ದೈಹಿಕ ಒತ್ತಡ ತಣಿಸಿ ಸುಸ್ತನ್ನು ಪರಿಹರಿಸುತ್ತದೆ. ನಕ್ಕ 45 ನಿಮಿಷಗಳ ನಂತರ ಸ್ನಾಯುಗಳು ಸಡಿಲಗೊಂಡು ಆಯಾಸ ಪರಿಹಾರವಾಗುತ್ತದೆ. ಒತ್ತಡದ ಹಾರ್ಮೋನು ಕಡಿಮೆ ಮಾಡಿ ಇಮ್ಯೂನ್ ಸೆಲ್ಸ್ ಹೆಚ್ಚಿಸುತ್ತದೆ. ದೇಹದ ಸೋಂಕಿನ ವಿರುದ್ಧ ಹೋರಾಡಲು ಪ್ರತಿಕಾಯ ಸೃಷ್ಟಿಮಾಡುತ್ತದೆ. ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ದೇಹದಲ್ಲಿ ಎಂಡೋರ್ಫಿನ್ ಉತ್ಪತ್ತಿಗೆ ಪ್ರಚೋದಿಸುತ್ತದೆ. ಎಂಡೋರ್ಫಿನ್ನ ಅಂಶ ಹೆಚ್ಚಾದಂತೆ ದೇಹದ ಸಮತೋಲನ ಕಾಯ್ದುಕೊಳ್ಳಲು ಸಹಕರಿಸುತ್ತದೆ. ತಾತ್ಕಾಲಿಕವಾಗಿ ನೋವನ್ನು ಶಮನ ಮಾಡುತ್ತದೆ. ನಗು ಹೃದಯಕ್ಕೆ ಕಾವಲುದಾರಿ. ಹೃದಯದ ರಕ್ತನಾಳಗಳನ್ನು ಕ್ರಿಯಾಶೀಲವಾಗಿ ಮಾಡುತ್ತದೆ. ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಇದರಿಂದ ಹೃದಯಾಘಾತ ತಡೆಯಬಹುದು. ಹೃದಯಕ್ಕೆ ಸಂಬಂಧಿಸಿದ ಇತರ ಖಾಯಿಲೆಗಳು ಬರದಂತೆ ತಡೆಗಟ್ಟಲು ಸಹಕಾರಿ.
ಬಾಲ್ಟಿಮೋರ್ನ ಯುನಿವರ್ಸಿಟಿ ಆಫ್ ಮೇರಿಲ್ಯಾಂಡ್ ಮೆಡಿಕಲ್ ಸೆಂಟರ್ ತನ್ನ ಸಂಶೋಧನೆಯಲ್ಲಿ ನಗು ಆರೋಗ್ಯಕ್ಕೆ ಉತ್ತಮ ಎಂದು ಬಹಿರಂಗಪಡಿಸಿದೆ. ನಗು ಹೃದಯ ಸಂಬಂಧಿ ಕಾಯಿಲೆ ಬರದಂತೆ ತಡೆಯುತ್ತದೆ ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಹೇಳಿದೆ.
ಸಾಮಾಜಿಕ ನಗು
ಸಂಬಂಧಗಳ ನಡುವಿನ ಮಾತಿನ ವಿನಿಮಯ ಸೊಗಸಾಗಿಸುತ್ತದೆ. ಭಾವನಾತ್ಮಕವಾಗಿ ಹತ್ತಿರವಾಗುವಂತೆ ಮಾಡುತ್ತದೆ. ನಗು ವಿನಿಮಯದಿಂದ ಇಬ್ಬರ ನಡುವೆ ಧನಾತ್ಮಕ ಬಂಧ ಉಂಟಾಗುತ್ತದೆ. ಈ ಬಂಧವು ಭಿನ್ನಾಭಿಪ್ರಾಯ ಹಾಗೂ ಬೇಸರ ದೂರಮಾಡುತ್ತದೆ.
ಒಬ್ಬನೇ ನಗುವುದಕ್ಕಿಂತ ಎಲ್ಲರೊಂದಿಗೆ ಜೊತೆಗೂಡಿ ನಗುವುದರಲ್ಲಿ ಸೊಗಸಿದೆ. ಅಧಿಕ ಲಾಭಾಂಶವೂ ಇದೆ.
ಸಂಬಂಧಗಳನ್ನು ತಾಜಾವಾಗಿರಿಸುವ ಸಾಧನ ನಗು. ಕಳೆದುಹೋದ ಸಂಬಂಧಗಳ ಮರುಜೋಡಣೆಗೂ ಉಪಕಾರಿ. ನಗು ಹಂಚುವುದರಿಂದ ಸೊಗಸಾದ ವಾತಾವರಣ ನಿರ್ಮಾಣವಾಗುತ್ತದೆ. ಮುನಿಸು, ಭಿನ್ನಾಭಿಪ್ರಾಯ, ನೋವುಂಟು ಮಾಡುವ ಸನ್ನಿವೇಶ ಕಡಿಮೆಯಾಗುತ್ತವೆ. ಮಾತಲ್ಲಿ ಹಾಸ್ಯಪ್ರಜ್ಞೆ ಉಳ್ಳವರಾದರೆ ಸುತ್ತಲಿನ ಜನರೊಂದಿಗೆ ಅನ್ಯೋನ್ಯ ಬೆಸುಗೆ ಸಾಧಿಸಲು ಸಾಧ್ಯ. ಹಾಗೂ ಗೆಳೆಯರೊಂದಿಗೆ ಉತ್ತಮ ಒಡನಾಟ ಸಾಧ್ಯ.
ನಿಮ್ಮ ಹಲ್ಲೇನು ಉದುರದು!
ನಗು ನಿಮ್ಮ ಜನ್ಮಸಿದ್ಧ ಹಕ್ಕು. ನಗು ಸಹಜ ಮತ್ತು ಜನ್ಮಜಾತವಾಗಿ ಬಂದಿರುವ ವರ. ಮಗು ಜನಿಸಿದ ಪ್ರಥಮ ವಾರ ನಗಲು ಶುರುಮಾಡುತ್ತದೆ. ಅದರ ಕಿಲಿಗುಡುವ ನಗು ಎಂಥವನಿಗೂ ಕಚಗುಳಿ ಇಟ್ಟು ನಗುವಂತೆ ಮಾಡುತ್ತದೆ. ತಿಂಗಳಲ್ಲೇ ಜೋರಾಗಿ ನಗುವ ಗುಣವನ್ನು ಬಹಳ ಬೇಗನೆ ಮಗು ಮೈಗೂಡಿಸಿಕೊಂಡುಬಿಡುತ್ತದೆ. ಮುಗುಳ್ನಗು ನಗುವಿನ ಪ್ರಾರಂಭದ ಹಂತ. ಅಂಟುರೋಗವಾದ್ದರಿಂದ ಕ್ರಮೇಣ ಹರಡುತ್ತದೆ. ಹಾಸ್ಯ ಸನ್ನಿವೇಶ ಇಲ್ಲದಿದ್ದಾಗಲೂ ನಗಲು ಸಾಧ್ಯವೇ ಎಂದು ಪ್ರಯತ್ನಿಸಿ. ಮುಗುಳ್ನಗುವಾಗಲು ಅದು ಅನ್ವಯಿಸುತ್ತದೆ. ಯಾರನ್ನಾದರು ನೋಡಿದಾಗ, ಆಹ್ಲಾದಕರ ಎನಿಸುವ ವಸ್ತು ನೋಡಿದಾಗ ಮುಗುಳ್ನಗುವ ಅಭ್ಯಾಸ ರೂಡಿಸಿಕೊಳ್ಳಿ. ಎಲ್ಲಿಯಾದರು ನಗುತ್ತಿರುವುದು ಕೇಳಿಸಿದರೆ ನೀವು ಸೇರಿಕೊಳ್ಳಿ. ನಗುವಿನ ಕೂಟದಲ್ಲಿ ಸೇರಲು ಯಾವುದೇ ಫೀಜು ಇಲ್ಲ. ನಗುತ್ತಿರುವವರ ಪರಿಚಯವಿದ್ದರಷ್ಟೇ ಸಾಕು.
ನಗುವಿನಿಂದಾಗುವ ಲಾಭಗಳು
ದೈಹಿಕ ಲಾಭಾಂಶ
ಇಮ್ಯುನಿಟಿಗೆ ಉತ್ತಮ ಪೋಷಕಾಂಶ
ಒತ್ತಡದ ಹಾರ್ಮೋನ್ ನಿಯಂತ್ರಣ
ಸ್ನಾಯು ಸಡಿಲವಾಗುವಿಕೆ
ಹೃದಯ ರೋಗಗಳಿಂದ ಪಾರು
ಮಾನಸಿಕ ಲಾಭಾಂಶ
ಜೀವನದ ಆನಂದ ಮತ್ತು ಸ್ವಾದ ಹೆಚ್ಚಳ
ಆತಂಕ ಮತ್ತು ಭಯ ದೂರ
ಲಹರಿ ಹೆಚ್ಚಳ
ಚೇತರಿಕೆ ಅಥವಾ ಸ್ಥಿತಿಸ್ಥಾಪಕತ್ವ ರಚನೆ
ಸಾಮಾಜಿಕ ಲಾಭಾಂಶ
ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ
ಇತರರನ್ನು ನಮ್ಮೆಡೆಕೆ ಆಕರ್ಷಿಸಲು ಸಾಧ್ಯ
ಸಾಂಘಿಕ ಶಕ್ತಿ ಹೆಚ್ಚಳ
ಸಂಘರ್ಷ ನಿಯಂತ್ರಣ
ಗುಂಪುಗೂಡಿಸಲು ಸಹಕಾರಿ
-ಮಂಜುನಾಥ್ ಎಲ್. ಕೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


