ಆಧುನಿಕ ಮನಸ್ಸುಗಳು ಪ್ರತ್ಯೇಕವಾಗಿರಲು ಬಯಸುತ್ತವೆ. ತಮಗೆ ಅನುಕೂಲವಾಗುವಂತೆ ವ್ಯವಸ್ಥೆಯನ್ನು ರೂಪಿಸಿಕೊಂಡು ಸಮಾಜವನ್ನು, ಜನಾಂಗವನ್ನು ನಿಂತ ನೀರಿನಂತೆ ಕೊಳೆಸುತ್ತವೆ. ಇದಕ್ಕೆ ಕಾರಣ ಶ್ರಮರಹಿತ ಅಧಿಕ ಫಲಪ್ರಾಪ್ತಿ ಬಯಕೆ. ಆದರೆ ದೇಶದ ಪ್ರಜಾಗಳಾಗಿ ನಮ್ಮ ಮನಸ್ಸುಗಳು ಉತ್ಸಾಹದ ಸೆಲೆಯಾಗಿ, ಎಲ್ಲರೊಂದಿಗೆ ಒಟ್ಟಾಗಿ ಬಾಳಿ ದುಡಿಮೆಯೊಂದಿಗೆ ಕೈಜೋಡಿಸಿ ಅವರವರ ಸ್ವಭಾವ, ಸಾಮರ್ಥ್ಯಕ್ಕನುಗುಣವಾಗಿ ಸಂಘಟಿಸಿ, ವೈಯಕ್ತಿಕ ಸಾರ್ಥಕತೆ ಮತ್ತು ದೇಶದ ಸಾಧನೆಗಾಗಿ ತಮ್ಮೆಲ್ಲ ಪ್ರತಿಷ್ಠೆಗಳನ್ನು ಬದಿಗೊತ್ತಿ ಮುನ್ನಡೆಸುವ ವ್ಯಕ್ತಿತ್ವವನ್ನು ನಾವು ರೂಪಿಸಿಕೊಳ್ಳಬೇಕು.
'ಯಾರನ್ನೂ ಅವಲಂಬಿಸಬೇಡಿ. ನಿಮ್ಮಷ್ಟಕ್ಕೆ ಕಾರ್ಯವನ್ನು ಮುಂದುವರಿಸಿ. ನೀರಸ, ನಿರ್ಲಿಪ್ತ ಮನೋಭಾವ ಬಿಟ್ಟು ಕಟಿಬದ್ಧರಾಗಿ. ನಮಗೀಗ ಬೇಕಾಗಿರುವುದು ಸಂಘಟನಾ ಸಾಮರ್ಥ್ಯ. ಅಸೂಯೆ ನಮ್ಮೊಳಗೆ ಪ್ರವೇಶಿಸದಂತೆ ನೋಡಿಕೊಳ್ಳಬೇಕು. ನಿಷ್ಕಳಂಕ ವ್ಯಕ್ತಿಗಳಾಗಿ. ಪರಸ್ಪರರಲ್ಲಿ ಪ್ರೀತಿಯಿರಲಿ. ಮನಸ್ತಾಪವಿಲ್ಲದಿರುವವರೆಗೆ ನೀರಿನಲ್ಲಾಗಲಿ, ಬೆಂಕಿಯಲ್ಲಾಗಲಿ, ಪರ್ವತಶಿಖರದ ಮೇಲಾಗಲಿ, ಶತ್ರುಗಳ ಮಧ್ಯದಲ್ಲಾಗಲಿ ಯಾವುದೇ ಅಪಾಯವಿಲ್ಲ. ನೀವೆಲ್ಲ ಕಟಿಬದ್ಧರಾಗಿ ನಿಂತರೆ ಇಡೀ ಜಗತ್ತೇ ನಿಮಗೆದುರಾದರೂ ಭಯವಿಲ್ಲ.'
'ನಾನು ನಿಮ್ಮೆಲ್ಲರಿಂದಲೂ ನಿರೀಕ್ಷಿಸುವುದು ಇದನ್ನು- ಎಂದೆಂದಿಗೂ ನೀವು ಸ್ವಪ್ರತಿಷ್ಠೆಯನ್ನು, ಮತ್ಸರವನ್ನು ಮತ್ತು ಗುಂಪುಗಾರಿಕೆಯನ್ನು ತ್ಯಜಿಸಬೇಕು. ನೀವು ಭೂದೇವಿಯಂತೆ ಅಪಾರ ಸಹಿಷ್ಣುತೆಯನ್ನು ಹೊಂದಿದವರಾಗಬೇಕು.'
-ಆನಂದ ಎಸ್.ಎನ್.