

ಮೀನು ಮಾರಾಟ ಮಳಿಗೆಯಲ್ಲೂ ಕ್ರಿಯೇಟಿವಿಟಿಯಾ? ಅದು ಹೇಗೆ ಸಾಧ್ಯ? ಉತ್ತರ ಇಲ್ಲಿದೆ. ಕರ್ನಾಟಕ ರಾಜ್ಯ ಸಹಕಾರಿ ಮೀನುಗಾರಿಕೆ ಮಹಾಮಂಡಳಿ ಮೈಸೂರಿನ ಪ್ರಸಿದ್ಧ ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ ನಿರ್ಮಿಸಿದ ಮಳಿಗೆ ಹೀಗಿದೆ ನೋಡಿ.
ಮಂಡಳಿ ರಾಜ್ಯಾದ್ಯಂತ ನಿರ್ಮಿಸಲಿರುವ 50 ಮಾರಾಟ ಮಳಿಗೆಗಳಲ್ಲಿ ಇದೂ ಒಂದು. ಈಗಾಗಲೇ 92 ಮಳಿಗೆಗಳಿವೆ. ಹೊಸ ಮಳಿಗೆಗೆ ವಿಭಿನ್ನ ರೂಪ ನೀಡಬೇಕೆಂಬ ಆಕಾಂಕ್ಷೆ ಮಹಾಮಂಡಳಿ ಅಧ್ಯಕ್ಷ ಎಸ್. ಮಾದೇಗೌಡರದು. ಮೀನಿನ ಮಾದರಿಯ ವಿನ್ಯಾಸ, ರಚನೆ ಖ್ಯಾತ ಕಲಾವಿದ ಪ್ರಕಾಶ್ ಚಿಕ್ಕಪಾಳ್ಯ ಅವರದು.
ಸಾಕಷ್ಟು ಎಂಜಿನಿಯರ್ಗಳು ಅಸಾಧ್ಯ ಎಂದು ಕೈಚೆಲ್ಲಿದ್ದನ್ನು ಎಂಟು ತಿಂಗಳು ಹಠತೊಟ್ಟು ಮಾಡಿ ಮುಗಿಸಿದ್ದಾರೆ ಪ್ರಕಾಶ್.
ಶೀಟ್ ಬಳಸಿ, ತಾಂತ್ರಿಕತೆಯಲ್ಲಿ ಯಾವುದೇ ಎಂಜಿನಿಯರ್ ಗೆ ಕಡಿಮೆ ಇಲ್ಲದಂತೆ ನಿರ್ಮಿಸಿದ ಮಳಿಗೆಯಲ್ಲಿ ಎಲ್ಲಿಯೂ ಜಾಗ ವ್ಯರ್ಥವಾಗಿಲ್ಲ. ತಲೆಯಾಕಾರ ಬರುವ ಕಡೆ ದಾಸ್ತಾನಿಡುವ ಬೀರು, ಬಾಲದ ಕಡೆ ಕಬಾಬ್, ಲಾಲಿಪಪ್, ಬೋನ್ಲೆಸ್ ಚಿಕನ್, ಫಿಶ್ ಮೀಲ್ ನೀಡಲು ಜಾಗ. ಹೊಟ್ಟೆಯ ಸ್ಥಳದಲ್ಲಿ ಸಿಬ್ಬಂದಿ ನಿಲ್ಲಬಹುದು.
ಇದಕ್ಕೆ ಹೈದರಾಬಾದ್ನಲ್ಲಿ ನಡೆದ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಅಧ್ಯಕ್ಷ, ಕೇಂದ್ರ ಕೃಷಿ ಸಚಿವ ಶರದ್ ಪವಾರ್ ರಿಂದ ಶಹಬ್ಬಾಸ್ಗಿರಿ ಸಿಕ್ಕಿದೆ ಎನ್ನುತ್ತಾರೆ ಮಾದೇಗೌಡ. ಮೀನು ಮಳಿಗೆಯತ್ತ ಗ್ರಾಹಕರನ್ನು ಆಕರ್ಷಿಸಲು, ನೋಡಿದಾಕ್ಷಣ ಅದು ಮೀನು ಮಾರಾಟ ಮಳಿಗೆ ಎಂದು ಗೊತ್ತಾಗಲು ಈ ವಿಶೇಷ ವಿನ್ಯಾಸ ಅನ್ನುತ್ತಾರೆ ಪ್ರಕಾಶ್ ಚಿಕ್ಕಪಾಳ್ಯ,.
- ಅಂಶಿ ಪ್ರಸನ್ನಕುಮಾರ್