ತಲೆತಲಾಂತರದಿಂದ ಬಾಗಿ ಬೆಳೆದಿರುವ ಭಾರತೀಯರು ತಲೆಯೆತ್ತಿ ಬದುಕುವುದನ್ನೇ ಮರೆತರು. ತಮ್ಮ ಮೆದುಳಿಗೆ ಜೀವನದ ಆಚಾರವಿಚಾರಗಳು, ವಿಧಿವಿಧಾನಗಳನ್ನು ಕುರಿತು ಆಲೋಚಿಸುವ ಕೆಲಸವನ್ನೇ ನೀಡದೆ, ಹಿಂದೆ ನಡೆದಂತೆ ನಡೆಸಿಕೊಂಡು ಹೋಗುವ, ಅದಕ್ಕೊಂದಿಷ್ಟು ಮೌಢ್ಯಗಳನ್ನು ಕೂಡಿಸುವ ಕಾರ್ಯದಲ್ಲಿ ತೊಡಗಿಸಿದ ಪಟ್ಟಭದ್ರಹಿತಾಸಕ್ತರು ಶತಶತಮಾನಗಳ ಕಾಲ ಆಳಿಕೊಂಡು ಬಂದದ್ದು ವಿಪರ್ಯಾಸ.
'ಯಾರ ತಲೆಯೊಳಗೆ ಕೇವಲ ಕ್ಷುದ್ರ ಆಲೋಚನೆಗಳು ಮಾತ್ರ ಪ್ರವೇಶಿಸುತ್ತವೆಯೋ ಅವರನ್ನು ನಿರ್ವೀರ್ಯರೆನ್ನುತ್ತಾರೆ. 'ಗಂಟೆಯನ್ನು ಎಡಗಡೆ ಬಾರಿಸಬೇಕೆ, ಬಲಗಡೆ ಬಾರಿಸಬೇಕೆ?, ಗಂಧವನ್ನು ಹಣೆಯ ಮೇಲೆ ಹಚ್ಚಿಕೊಳ್ಳಬೇಕೆ, ಇನ್ನೆಲ್ಲಾದರೂ ಹಚ್ಚಿಕೊಳ್ಳಬೇಕೆ?, ಆರತಿಯನ್ನು ಎರಡು ಸಲ ಎತ್ತಬೇಕೆ, ನಾಲ್ಕು ಸಲ ಎತ್ತಬೇಕೆ?' ಎಂಬಂತಹ ಪ್ರಶ್ನೆಗಳು ಮಾತ್ರ ಯಾರ ತಲೆಯಲ್ಲಿ ಹಗಲಿರುಳೂ ಕುಣಿಯುತ್ತವೆಯೋ, ಅಂಥವರು ದರಿದ್ರರೆಂದು ಕರೆಸಿಕೊಳ್ಳಲು ಯೋಗ್ಯರು. ಇಂತಹ ಬುದ್ಧಿಗೇಡಿತನದಿಂದಾಗಿಯೇ ಭಾಗ್ಯದೇವತೆಯು ನಮ್ಮನ್ನು ಅಸ್ಪೃಶ್ಯರಂತೆ ದೂರವೇ ಇಟ್ಟಿದ್ದಾಳೆ. ಸೋಮಾರಿತನಕ್ಕೂ ವೈರಾಗ್ಯಕ್ಕೂ ಸಾಗರದಷ್ಟು ಅಂತರವಿದೆ.'
'ಉತ್ತಿಷ್ಠತ! ಜಾಗೃತ! ಭಗವಂತ ಮಹಾಮಹಿಮ! ಅವನೇ ನಮ್ಮ ಹಿಂದಿದ್ದಾನೆ. ನಾನು ಇದಕ್ಕಿಂತ ಹೆಚ್ಚಿಗೇನೂ ಬರೆಯಲಾರೆ. ಮುಂದೆ ಸಾಗಿ! ನಾನು ಇಷ್ಟು ಮಾತ್ರ ಹೇಳಬಲ್ಲೆ. ಯಾರು ಯಾರು ನನ್ನ ಪತ್ರಗಳನ್ನು ಓದುತ್ತಾರೋ ಅವರೆಲ್ಲ ನನ್ನ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ. ವಿಶ್ವಾಸವಿಡಿ! ಮುನ್ನುಗ್ಗಿ!... ಕ್ಷುದ್ರ ಆಲೋಚನೆಗಳಿಂದ ಮುಕ್ತರಾಗಿ...'
= ಆನಂದ ಎಸ್.ಎನ್.