ನನ್ನ ಅನೇಕ ಮಂದಿ ಬ್ರಾಹ್ಮಣ ಗೆಳೆಯರು ಬೆಳ್ಳುಳ್ಳಿಯನ್ನು ತಿನ್ನುತ್ತಲೇ ಇರುತ್ತಿರಲಿಲ್ಲ. ಯಾಕೆ ಎಂದು ಕೇಳಿದರೆ, 'ಮನು-ಕಶ್ಯಪರೇ ಬೆಳ್ಳುಳ್ಳಿ ನಿಷಿದ್ಧ ಎಂದು ಹೇಳಿದ್ದಾರೆ. ಇನ್ನು ನಾವೇಕೆ ತಿನ್ನಬೇಕು?' ಎಂದು ಪ್ರಶ್ನಿಸುತ್ತಿದ್ದರು. ಆದರೆ, ನಾನು ವೈಜ್ಞಾನಿಕವಾಗಿ ಅದರ ಮಹತ್ವಗಳನ್ನು ವಿವರಿಸಿ ಅವರನ್ನು ಒಪ್ಪಿಸುತ್ತಿದ್ದೆ. ಆದರೆ, ಕೆಲವರು ಅದೇ ಪೂರ್ವಗ್ರಹದಲ್ಲೇ ಇದ್ದಾರೆ. ಅವರಿಗೆ ಹೇಳಿ ಹೇಳಿ ಸಾಕಾಗಿದೆ. ನಾನೂ ಸುಮ್ಮನಾಗಿದ್ದೇನೆ.
ಬೆಳ್ಳುಳ್ಳಿ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಇದು ಗೊತ್ತಾಗಿದ್ದು ಮೊಲ ಮತ್ತು ಇಲಿಗಳ ಮೇಲೆ ನಡೆಸಿದ ಪ್ರಯೋಗದಿಂದ. ಈ ಪರಿಣಾಮ ಮಾನವನ ಮೇಲೂ ಫಲಿಸಿದೆ. ಕೆಲವು ವರ್ಷಗಳ ಹಿಂದೆ ಅಮೆರಿಕದಲ್ಲಿ 114 ವ್ಯಕ್ತಿಗಳ ಮೇಲೆ ಬೆಳ್ಳುಳ್ಳಿ ಚಿಕಿತ್ಸೆ ನಡೆಸಿದಾಗ ಅವರಿಗಿದ್ದ ರಕ್ತದ ಒತ್ತಡ ಮತ್ತು ರಕ್ತನಾಳಗಳ ಗಡುಸಾಗುವಿಕೆ ಬಹುಮಟ್ಟಿಗೆ ಸುಧಾರಿಸಿತು. ಅವರ ಸಿಸ್ಟಾಲಿಕ್ ಅಪಧಮನಿ ಒತ್ತಡ 8-33 ಮಿ.ಮೀ.ನಷ್ಟು ಕಡಿಮೆಯಾಯಿತು ಮತ್ತು ಡಯಾಸ್ಟಾಲಿಕ್ ಒತ್ತಡ 4-20 ಮಿ.ಮೀ. (ಪಾದರಸ) ಅಷ್ಟು ಕಡಿಮೆಯಾಯಿತು. ಕೆಲವು ಜೀವಕ್ರಿಯೆಗಳಲ್ಲಿಯೂ ಸುಧಾರಣೆ ಕಂಡುಬಂದಿತು.
ಬೆಳ್ಳುಳ್ಳಿ ಕರುಳಿನ ಮಾಂಸಖಂಡಗಳ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ಪರಿಕ್ರಮ ಸ್ನಾಯು ಸಂಕೋಚನ ಹೆಚ್ಚುತ್ತದೆ. ಆದರೆ, ಹೆಚ್ಚಿದ ಪ್ರಮಾಣದಲ್ಲಿ ಇದಕ್ಕೆ ಅಡಚಣೆಯಾಗುತ್ತದೆ.
ದೀರ್ಘಕಾಲ ಸೀಸ ವಿಷಕ್ಕೆ ಒಳಗಾದ ಪ್ರಾಣಿಗಳ ಮತ್ತು ಮನುಷ್ಯರ ಮೇಲೆ ಪ್ರಯೋಗಗಳನ್ನು ನಡೆಸಿದಾಗ ಬೆಳ್ಳುಳ್ಳಿಯು ಈ ವಿಷ ಸಂಬಂಧ ರೋಗವನ್ನು ತಡೆಗಟ್ಟುತ್ತದೆಂದು ತಿಳಿದುಬಂದಿದೆ.
ಮುಖ್ಯವಾಗಿ ಬೆಳ್ಳುಳ್ಳಿಗೆ ಕ್ಯಾನ್ಸರ್ ನಿರೋಧಕ ಶಕ್ತಿಯಿದೆ. ಮನುಷ್ಯ ಮತ್ತು ಪ್ರಾಣಿಗಳ ಮಾರಕ ದುರ್ಮಾಂಸದ ಮೇಲೆ ಉತ್ತಮ ಪರಿಣಾಮ ಬೀರುವುದೆಂದು ತಿಳಿದುಬಂದಿದೆ. ಬೆಳ್ಳುಳ್ಳಿಯನ್ನು ಹೆಚ್ಚು ಹೆಚ್ಚು ತಿನ್ನುವುದರಿಂದ ಕರುಳಿನಲ್ಲಿ ವಿಟಮಿನ್ ಬಿ1 ಉತ್ಪತ್ತಿ ಹೆಚ್ಚುತ್ತದೆ.
ಬೆಳ್ಳುಳ್ಳಿಯನ್ನು ಮಡಿವಂತಿಕೆಯ ದೃಷ್ಟಿಯಿಂದ ದೂರ ತಳ್ಳುವುದರಲ್ಲಿ ಅರ್ಥವಿಲ್ಲ. ಭಾರತ, ಚೀನಾ, ಈಜಿಪ್ಟ್ ನಾಗರೀಕತೆಗಳಲ್ಲಿ ಬೆಳ್ಳುಳ್ಳಿ ಜನಪ್ರಿಯ ಪದಾರ್ಥ ಎಂಬುದನ್ನು ಮರೆಯಬಾರದು.
ಹ್ಞಾಂ, ನಿನ್ನೆ ನಾನು ಬೆಳ್ಳುಳ್ಳಿ ತೈಲದ ಬಗ್ಗೆ ಹೇಳಲು ಮರೆತಿದ್ದೆ. ಭಾಭಾ ಅಟಾಮಿಕ್ ರೀಸರ್ಚ್ ಸೆಂಟರ್ನಲ್ಲಿ ಒಂದು ಪ್ರಯೋಗ ನಡೆಸಿದ್ದರು. ಬೆಳ್ಳುಳ್ಳಿ ತೈಲ ನೊಣ ಮತ್ತು ಜೀರುಂಡೆಗಳ ಮೇಲೆ ಅತಿಯಾದ ಪರಿಣಾಮ ಬೀರುತ್ತದೆ. ಇದರ ತೈಲದ ಬಾವಿಗೆ ಜೀರುಂಡೆಗಳನ್ನು ಹಾಕಿದಾಗ ಅವು ಅತಿಯಾಗಿ ಕೆರಳುತ್ತಿದ್ದವು. ಜೊಲ್ಲು ಸುರಿಸುತ್ತಿದ್ದವು. ಈ ಕಾರಣದಿಂದಾಗಿ ಇದನ್ನು ಕೀಟನಾಶಕ ಔಷಧಗಳಲ್ಲಿ ಬಳಸಲಾಗುತ್ತದೆ.
ಮೊದಲೇ ಹೇಳುತ್ತೇನೆ... ಈ ತೈಲದ ಪರಿಣಾಮಕ್ಕೂ ನಮ್ಮ ದೇಹಕ್ಕೂ ಏನೂ ಸಂಬಂಧವಿಲ್ಲ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com