

ಒಂದು ಸೀರೆ ನೇಯಲು ಕನಿಷ್ಠ ಸಮಯ: 2-3 ದಿನ
ನೇಕಾರರಿಗೆ ದೊರೆಯುವ ಲಾಭ: ರು. 200-300
ಮಾರುಕಟ್ಟೆ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ ನೇಕಾರರು
ಆಂಧ್ರ ತಂತ್ರಜ್ಞಾನದ ಎದುರು ಸ್ತಬ್ಧಗೊಂಡ ಕೈಮಗ್ಗಗಳು
ಹೆಸರು ಆಧುನಿಕತೆ, ಮಾಡಿದ್ದೇ ಫ್ಯಾಷನ್ ಹೇಳಿದ್ದೇ ಟ್ರೆಂಡ್, ಚಿತ್ರ ನಟಿಯರೇ ರೋಲ್ ಮಾಡೆಲ್ಗಳು... ಉಡುಪುಗಳ ವಿಚಾರದಲ್ಲಿ ಇಂದಿನ ನಮ್ಮ ಸ್ಥಿತಿ. ಇಂಥದ್ದರ ನಡುವೆ ಸೀರೆಗಳನ್ನು ಕೇಳೋರ್ಯಾರು. ಮೊಳಕಾಲಿನ ಮೇಲೆ ಹೊಗಿ ಕುಂತಿರುವ ನಮ್ಮ ಡ್ರೆಸ್ ಕೋಡ್ನ ನಡುವೆ ಮೊಳಕಾಲ್ಮುರಿನ ಪ್ರಸಿದ್ಧ ರೇಷ್ಮೆ ಸೀರೆ ಬೆಲೆಯ ಜತೆಗೆ ಬೇಡಿಕೆ ಕುಗ್ಗಿದೆ.
ಆಧುನಿಕತೆಯ ಅಟ್ಟಹಾಸ, ಯುವಜನತೆಯ ನಿರ್ಲಕ್ಷ್ಯ, ಕಚ್ಚಾ ವಸ್ತುಗಳ ಮೇಲೆ ವಿಧಿಸಲಾಗಿರುವ ತೆರಿಗೆ ಏರಿಕೆ ಹಾಗೂ ಸೂಕ್ತ ಮಾರುಕಟ್ಟೆ ವ್ಯವಸ್ಥೆಯ ಕೊರತೆ... ಪಟ್ಟಿ ಮಾಡುತ್ತ ಹೊರಟರೆ ಸೀರೆಯ ಅವಸಾನಕ್ಕೆ ಕಾರಣಗಳು ಸೀರೆಗಿಂತಲೂ ಉದ್ದವಾಗುತ್ತದೆ. ನೂರಾರು ವರ್ಷಗಳಿಂದ ತನ್ನದೇ ಛಾಪು ಒತ್ತಿ ನಾಡಿನೆಲ್ಲೆಡೆ ಹೆಸರು ಗಳಿಸಿದ್ದ ಮೊಳಕಾಲ್ಮುರು ರೇಷ್ಮೆ ಸೀರೆಯ ಉದ್ಯಮ ಸದ್ದಿಲ್ಲದೆ ಅವನತಿಯತ್ತ ದಾಪುಗಾಲಿಡುತ್ತಿದೆ. ಕೈ ಮಗ್ಗಗಳಿಂದ ಜೀವನ ರೂಪಿಸಿಕೊಂಡ ನೇಕಾರರ ಬದುಕು ಈಗ ಸಹಜವಾಗಿಯೇ ಸಂಕಷ್ಟಕ್ಕೆ ಈಡಾಗಿದೆ. ಆಧುನಿಕ ತಂತ್ರಜ್ಞಾನಕ್ಕೆ ಉದ್ಯಮ ಮಂಡಿಯೂರಿದ್ದಾರೆ. ಸಾವಿರಾರು ನೇಕಾರಿಕೆ ಕುಟುಂಬಗಳು ಉದ್ಯೋಗವಿಲ್ಲದೇ ತಮ್ಮ ಕೈ ಮಗ್ಗಗಳನ್ನು ಮೂಲೆಗುಂಪಾಗಿಸಿಕೊಂಡಿವೆ.
ಹಿಂದುಳಿದ ಪ್ರದೇಶವಾಗಿದ್ದರೂ, ಸೀರೆ ಉದ್ಯಮ ಮಾತ್ರ ಹಿಂದುಳಿಯದೇ ಸಾವಿರಾರು ಕುಟುಂಬಗಳಿಗೆ ಅನ್ನ- ಆಶ್ರಯದಾತವಾಗಿತ್ತು. ಪಕ್ಕದ ಆಂಧ್ರದ ಹಲವು ಭಾಗಗಳ ಕುಟುಂಬಗಳನ್ನೂ ಇದು ಪೊರೆಯುತ್ತಿತ್ತು. ಒಂದು ಕಾಲದಲ್ಲಿ ಪಟ್ಟಣದಲ್ಲಿ ಮೂರು ಸಾವಿರಕ್ಕಿಂತ ಹೆಚ್ಚು ಕೈ ಮಗ್ಗಗಳು ರೇಷ್ಮೆ ಸೀರೆ ತಯಾರಿಸುವ ಮೂಲಕ ರೇಷ್ಮೆ ಸೀರೆ ಉದ್ಯಮವನ್ನು ಶ್ರೀಮಂತಗೊಳಿಸಿತ್ತು. ಈಗ ಉಳಿದಿರುವುದು ಬೆರಳೆಣಿಕೆಯ ಕೈಮಗ್ಗ ಕುಟುಂಬಗಳು ಮಾತ್ರ.
ಸೀರೆ ತಯಾರಿಕೆಗೆ ಅಗತ್ಯ ಕಚ್ಚಾ ವಸ್ತುಗಳ ಬೆಲೆ ಮಾರುಕಟ್ಟೆಯಲ್ಲಿ ಗಗನಕ್ಕೇರಿದೆ. ಅದರೆ ತಯಾರಿಸಿದ ಸೀರೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಕಚ್ಚಾ ವಸ್ತು ಖರೀದಿಸುವುದರಿಂದ ಹಿಡಿದು ಒಂದು ಸೀರೆ ನೇಯಲು ಕನಿಷ್ಠ 2 ರಿಂದ 3 ದಿನವಾದರೂ ಸಮಯ ಬೇಕು. ಕಚ್ಚಾ ವಸ್ತುಗಳು, ಜರಿ, ಬಣ್ಣ ಲೇಪನ, ಕೂಲಿ ಸೇರಿಸಿಕೊಂಡರೆ ಸೀರೆ ನೇಯ್ದ ನೇಕಾರರಿಗೆ ರು. 200 ರಿಂದ 300 ಲಾಭ ದೊರೆಯುತ್ತದೆ ಎನ್ನುತ್ತಾರೆ ಇಲ್ಲಿನ ನೇಕಾರರು. ಕಾಲ ಬದಲಾದಂತೆ ಪಕ್ಕದ ಆಂಧ್ರದ ಹಲವು ಭಾಗಗಳಲ್ಲಿ ವಿದ್ಯುನ್ಮಾನ ಮಗ್ಗಗಳಿಂದ ಸೀರೆ ತಯಾರಿಕೆ ಉದ್ಯಮ ವೇಗವಾಗಿ ಬೆಳೆಯುತ್ತಿದೆ. ಆದರೆ, ಮೊಳಕಾಲ್ಮುರಿನ ನೇಕಾರರು ಮಾತ್ರ ಯಾವುದೇ ಆಧುನಿಕ ಯಂತ್ರೋಪಕರಣ ಬಳಸುತ್ತಿಲ್ಲ. ಜತೆಗೆ ಸರ್ಕಾರ ಸಹ ಪ್ರೋತ್ಸಾಹ ನೀಡುತ್ತಿಲ್ಲ. ಇದು ಕೂಡ ಹಿಂದುಳಿಯಲು ಕಾರಣವಾಗಿದೆ.
= ಬಿ.ಜಿ. ಕೆರೆ ಬಸವರಾಜ