

ಜೋಳ ತಿಂದವ ತೋಳ, ರೊಟ್ಟಿಯನ್ನು ತಿಂದವ ಗಟ್ಟಿ- ಜೋಳದ ಮಹತ್ವ, ಅದರೊಳಗಿನ ಸತ್ವ ಸಾರುವ ಮಾತುಗಳಿವು. ಅಂಥದ್ದರಲ್ಲಿ ಅದು ಹಾಲ್ದೆನೆಯ ಜೋಳ ಆಗಿದ್ದರೆ..! ಅದರ ಸವಿಯೇ ಸವಿ. ಅದನ್ನಿನಿತು ಬೇಯಿಸಿ ತಿಂದರಂತೂ ದುಪ್ಪಟ್ಟು ಸಿಹಿ. ಹೇಳಿ ಕೇಳಿ ಅದು ಸಿಹಿತೆನೆ... ಅದರಿಂದ ಮಾಡಿದ ತಿನಿಸು ಸಿಹಿತಿನಿ ಉರ್ಫ್ 'ಶೀತನಿ'.
ಹೊಲದಲ್ಲೇ ಕಿಚ್ಚುಮಾಡಿ ಜೋಳದ ಹಾಲ್ದೆನೆಯನ್ನು ಹಿತಮಿತವಾಗಿ ಬೇಯಿಸಿ ತಿನ್ನುವುದು ಎಳ್ಳಮಾವಾಸ್ಯೆ ನಂತರ ಉತ್ತರ ಕರ್ನಾಟಕದ ಹೊಲಗದ್ದೆಗಳಲ್ಲಿ ಕಾಣುವ ಸಾಮಾನ್ಯ ನೋಟ. ಮನೆ ಮಂದಿ ಎಲ್ಲರೂ ಒಟ್ಟಿಗೆ ಸೇರಿ, ಎತ್ತಿನ ಬಂಡಿ ಏರಿ ಹೊಲಕ್ಕೆ ಬಂದು ಶೀತನಿ (ಸಿಹಿತೆನೆ) ತಿನ್ನುವುದೇ ಸಂಭ್ರಮ. ಎಳ್ಳಮಾವಾಸ್ಯೆ ನಂತರ ಸರಿ ಸುಮಾರು ತಿಂಗಳ ಕಾಲ ಕಂಡು ಬರುವ ಈ ವಿದ್ಯಮಾನ ಅತಿ ವಿಶಿಷ್ಟ.
ಮಣ್ಣಿನ ವಾಸನೆಯ ಖಾದ್ಯ
ಶೀತನಿ ತನ್ನೊಂದಿಗೆ ಮಣ್ಣಿನ ವಾಸನೆ ಹೊಂದಿರುವ ಶಕ್ತಿಶಾಲಿ ಪದಾರ್ಥ. ಏಕೆಂದರೆ ಜೋಳದ ಹಾಲ್ದೆನೆ ಬೇಯಿಸುವುದರಿಂದ ಹಿಡಿದು ಅದರೊಳಗಿನ ಬೆಂದ ಕಾಳುಗಳನ್ನು ಹೊರಗೆ ತೆಗೆಯುವುದು, ಎಲ್ಲರೂ ಸೇರಿ ತಿನ್ನುವುದು... ಹೀಗೆ ಇಡೀ ಪ್ರಕ್ರಿಯೆ ನಡೆಯುವುದೇ ಹೊಲದಲ್ಲಿ. ಹೀಗಾಗಿ ಬೇರಾವ ದವಸ- ದಾನ್ಯಗಳಿಗಿಂತಲೂ ಶೀತನಿ ಹೆಚ್ಚು ಮಣ್ಣಿನವಾಸನೆ ಮೈಗಂಟಿಸಿಕೊಂಡು ದೊರಕುವ ಪದಾರ್ಥಗಳ ಸಾಲಲ್ಲಿ ಮೊದಲಿಗೆ ನಿಲ್ಲುತ್ತದೆ.
ಎಲ್ಲ ಹೊಲದಲ್ಲೇ
ಜೋಳ ಹೂವಾಡುವ ಹಂತದಲ್ಲೇ ರೈತರು ಸಿಹಿತೆನೆಗಳನ್ನು ಹುಡುಕಿಡುತ್ತಾರೆ. ಅಂತಹ ಆಯ್ದ ಹಾಲ್ದೆನೆಗಳನ್ನೇ ಶೀತನಿಗಾಗಿ ಸುಡುತ್ತಾರೆ. ಹೊಲದಲ್ಲೇ ನೆಲ ಅಗೆದು ಸ್ಥಳೀಯವಾಗಿ ದೊರಕುವ ಪೊದೆಗಳನ್ನೇ ಬಳಸಿ ಕಿಚ್ಚು (ಬೆಂಕಿ) ಸಿದ್ಧಪಡಿಸಲಾಗುತ್ತದೆ. ಈ ಬೆಂಕಿಯಲ್ಲೇ ಹಾಲ್ದೆನೆ ಬೇಯಿಸುವುದು. ಹೀಗೆ ಬೆಂದ ತೆನೆಗಳನ್ನು ಒಂದೊಂದಾಗಿ ಹೊರತೆಗೆದು ಒಲೆಯ ಸುತ್ತಮುತ್ತ ಎಲ್ಲರನ್ನೂ ಕುಳ್ಳಿರಿಸಿ ಅಲ್ಲೇ ತೆನೆಯೊಳಗಿನ ಕಾಳುಗಳನ್ನು ಕೈಯಿಂದಲೇ ತಿಕ್ಕಿ ಹಾಕಲಾಗುತ್ತದೆ. ಆ ಬಿಸಿಬಿಸಿ ಕಾಳುಗಳನ್ನ ಮೆಲ್ಲುವಾಗಿನ ಸವಿಯನ್ನು ಅನುಭವಿಸಿಯೇ ತಿಳಿಯಬೇಕು.
ಅನೇಕರು ಇಂಗು, ಉಪ್ಪು, ಬೆಲ್ಲ, ಶೇಂಗಾದ ಹಿಂಡಿ, ಪುಟಾಣಿ ಪುಡಿ, ಚುರುಮುರಿ ಚೂಡಾ, ಮೊಳಕೆ ಬಂದ ಹೆಸರು- ಕಡಲೆ ಕಾಳು, ಹೆಚ್ಚಿದ ಈರುಳ್ಳಿ ಹೀಗೆ ಹಲವು ಪದಾರ್ಥಗಳನ್ನು ಶೀತನಿ ಜೊತೆಗೇ ಮೆಲ್ಲುತ್ತಾರೆ. ಇದು ಸಿಹಿತೆನೆ ತಿನ್ನುವರು ಇನ್ನೂ ಬಾಯಿ ಚಪ್ಪರಿಸಿ ತಿನ್ನುವಂತೆ ಮಾಡುತ್ತದೆ, ತೆನೆಯ ಸವಿಯನ್ನು ಇನ್ನೂ ಹೆಚ್ಚಿಸುವಲ್ಲಿ ಸಹಕರಿಸುತ್ತದೆ.
ಹಾಟ್- ಸ್ವೀಟ್
ನಿಗಿನಿಗಿ ಕಿಚ್ಚಲ್ಲಿ ಹಾಲ್ದೆನೆ ಇಡುವಾಗ ಎಲ್ಲರೂ ಸುತ್ತ ಕುಳಿತುಕೊಂಡು ನೋಡುತ್ತಿರುತ್ತಾರೆ. ತೆನೆ ಪೂರ್ಣ ಬೆಂದಾಗ ರೈತರು ಅದನ್ನು ತಮ್ಮ ಅಂಗೈ ಮೇಲಿಟ್ಟುಕೊಂಡು ಮೃದುವಾಗಿ ತಿಕ್ಕಿ ಕಾಳು ಬಿಡಿಸಬೇಕು. ಇದು ತುಂಬ ಜಾಣತನದ ಕೆಲಸ. ಜೋಳದ ಹೊಲವಿದ್ದವರು ಶೀತನಿಗೆಂದೇ ಕೆಲವರನ್ನು ಕಾಯ್ದಿಡುವುದು ಉಂಟು.
ಮಾನದಂಡಿ ಜೋಳ, ಅರಳು ಜೋಳದ ಶೀತನಿಯಂತೂ ತುಂಬ ಮೃದುವಾಗಿರುತ್ತದೆ. ಸ್ವಾದದಲ್ಲಿಯೂ ಈ ಶೀತನಿಗೆ ಸರಿಸಾಟಿ ಇಲ್ಲ. ಹೀಗೆ ಕಾಲಾಂತರದಿಂದ ಜೋಳದ ನಾಡಲ್ಲಿ ಶೀತನಿ ತನ್ನ ಸ್ವಾದ- ಸತ್ವ- ಸುವಾಸನೆಗಳಿಂದ ಹೆಸರಾಗಿ ಇಂದಿಗೂ ಅಬಾಲವೃದ್ಧರಾದಿಯಾಗಿ ಎಲ್ಲ ವಯೋವಾನವದವರ ಚಿತ್ತಾಪಹಾರಿ ಪದಾರ್ಥ ಎಂದೇ ಹೆಸರಾಗಿದೆ.
ರುಚಿ ಎಂದು ಶೀತನಿ ಹೆಚ್ಚಿಗೆ ತಿಂದರೆ ತೀರಿತು, ಅಜೀರ್ಣವಾಗಿ ತೊಂದರೆಗಳು ಹಿಂದೆಯೇ ಶುರುವಾಗುತ್ತವೆ. ಅದಕ್ಕೇ ಹಿತವಾಗಿ- ಮಿತವಾಗಿ, ಲಕ್ಷಕೊಟ್ಟು ಈ ಸಿಹಿತೆನೆ ತಿಂದರೆ ಅದು ದೇಹಕ್ಕೂ ಹಿತ, ಮನಸ್ಸಿಗೂ ಮರೆಯದ ಅನುಭವ ನೀಡುತ್ತದೆ.
ಇದೀಗ ವರ್ಷದಿಂದ ವರ್ಷಕ್ಕೆ ಜೋಳದ ಬೇಸಾಯ ಸೊರಗುತ್ತಿರುವಂತೆ ಶೀತನಿ ತಿನ್ನುವುದೂ ಮಾಯವಾಗುತ್ತಿದೆ. ಅನ್ನದಾತನೊಡನೆ ಕಾಲಕಳೆಯುವ ಅವಕಾಶ ಕಲ್ಪಿಸುವ, ಶೀತನಿ ತಿನ್ನುವ ಯೋಗಾಯೋಗ ಪ್ರತಿವರ್ಷದ ಕಾರ್ಯಕ್ರಮವಾಗಬೇಕಾಗಿದೆ. ರೈತರೊಂದಿಗೆ ಬೆರೆತು ಹಾಲ್ದೆನೆ ಸವಿಯುವ ಕಾಲ ನಿರಂತರವಾಗಬೇಕು.
ಚಿತ್ರ- ಲೇಖನ: ಶೇಷಮೂರ್ತಿ ಅವಧಾನಿ