ಗೊಣಗಾಟ ಬಿಟ್ಟು ಮುಂದೆ ಹೋಗಿ

Updated on: 

ನಮ್ಮ ನಡುವೆ ಅದೊಂಥರಾ ವಿಚಿತ್ರವಾದ ಮನಃಸ್ಥಿತಿಗಳು ಕೆಲಸ ಮಾಡುತ್ತಿರುತ್ತವೆ. ಈ ಜಗತ್ತಿನಲ್ಲಿ ನಾನು ಮಾತ್ರವೇ ಅತಿ ಹೆಚ್ಚು ಕಷ್ಟವನ್ನು ಉಂಡವನು, ನಾನು ಮಾಡಿದ ತ್ಯಾಗಕ್ಕೆ ಸಾಟಿಯೇ ಇಲ್ಲ, ನನಗೆ ಬಂದಂಥ ಸಮಸ್ಯೆಗಳು ಬೇರಾರಿಗಾದರೂ ಬಂದಿದ್ದರೆ ಬಹುಶಃ ಹೀಗೆ ಅವರು ಬದುಕಿರಲಿಕ್ಕೇ ಸಾಧ್ಯವಿರಲಿಲ್ಲ, ನನ್ನ ಬುದ್ಧಿವಂತಿಕೆ, ಸಾಮರ್ಥ್ಯಕ್ಕೆ ಬೇರೆಯವರಾಗಿದ್ದರೆ ಇಷ್ಟು ಹೊತ್ತಿಗೆ ಏನೇನೋ ಆಗಿರುತ್ತಿದ್ದರು, ನನ್ನ ಕರ್ಮ ಎಲ್ಲರೂ ನನ್ನ ಕಾಲೆಳೆಯುವವರೇ. ನನ್ನ ಬೆಳವಣಿಗೆಯನ್ನು ಸಹಿಸದೇ ಪಿತೂರಿ ಮಾಡುತ್ತಾರೆ... ಇಂಥ ಗೊಣಗಾಟ ದಿನ ಬೆಳಗಾದರೆ ಕೇಳುತ್ತಲೇ ಇರುತ್ತದೆ.
ಜೀವನದಲ್ಲಿ ಬಹುತೇಕರು ಒಂದಿಲ್ಲೊಂದು ಸಂಕಷ್ಟದಲ್ಲಿ ನೊಂದವರೇ ಆಗಿರುತ್ತಾರೆ. ಅದನ್ನು ದಾಟಿ ಬಂದಿರುವುದೇ ಜೀವನದಲ್ಲಿ ಬಹು ದೊಡ್ಡ ಸಾಧನೆಯೇನೂ ಅಲ್ಲ. ನಿಜವಾದ ಸಂಕಷ್ಟದಲ್ಲಿ ಹೈರಾಣಾಗಿದ್ದಾನೆಂದರೆ ಅವನು ಅದರಿಂದ ಅತ್ಯಪೂರ್ವವಾದ ಅನುಭವವನ್ನು ಗಳಿಸಿರುತ್ತಾನೆ. ಅಂಥ ಅನುಭವ ಅವನಿಗೆ ಜೀವನದಲ್ಲಿ ಅಮೂಲ್ಯವಾದುದನ್ನು ಕಟ್ಟಿಕೊಟ್ಟಿರುತ್ತದೆ. ಅದರಿಂದ ಅವನ ಬದುಕು ಹೊಸ ತಿರುವನ್ನೇ ಪಡೆದಿರಲಿಕ್ಕೂ ಸಾಕು. ಅಂತಾದ ಮೇಲೆ ಅಂಕಷ್ಟವನ್ನು ಆತ ಹಳಿಯುವಂತೆಯೇ ಇಲ್ಲ. ಅಸಲಿಗೆ ಆತ ಸಂಕಷ್ಟ ಅನುಭವಿಸಿದ್ದುದಕ್ಕಿಂಥ ಹಾಗೆ ಹೇಳಿಕೊಂಡು ಎದುರಿನವರ ಸಿಂಪಥಿ ಗಿಟ್ಟಿಸಿಕೊಳ್ಳಲು ಹವಣಿಸುತ್ತಿರುತ್ತಾನೆ. ಹಾಗೆಯೇ ತ್ಯಾಗದ ವಿಚಾರವೂ. ಯಾರೂ ತಮ್ಮ ಅಗತ್ಯವನ್ನೂ ಮೀರಿ ಬೇರೆಯವರಿಗೆ ಏನನ್ನೂ ಕೊಡುವುದಿಲ್ಲ. ಇಲ್ಲವೇ ಅದು ತನಗೆ ದಕ್ಕುವುದಿಲ್ಲ ಎಂಬುದು ಮನವರಿಕೆ ಆಗಿರಬೇಕು. ಎರಡನ್ನೂ ಮೀರಿದ ನಿಜವಾದ ತ್ಯಾಗಕ್ಕೆ ಬಾಯಿ ಇರುವುದಿಲ್ಲ. ಸಮಸ್ಯೆಗಳ ಹೊರೆಯನ್ನು ಬಿಂಬಿಸುವವನದೂ ಅಹಂಕಾರವೇ ಆಗಿರುತ್ತದೆ. ಮುಗಿದು ಹೋದ ಸಂಕಷ್ಟದ ಬಗ್ಗೆ ಬೇರೆಯವರೊಂದಿಗೆ ಹಂಚಿಕೊಳ್ಳುವುದರಿಂದ ಅಥವಾ ಅದನ್ನು ಬಣ್ಣಕಟ್ಟಿ ಬಣ್ಣಿಸುವುದರಿಂದ ಪೌರಷದ ಹಿರಿಮೆ ವ್ಯಕ್ತವಾಗಲು ಸಾಧ್ಯವೇ ಇಲ್ಲ.
ಅಷ್ಟಕ್ಕೂ ಅಂಥ ಸಮಸ್ಯೆಗಳೆಲ್ಲ ವೈಯಕ್ತಿಕ ಬದುಕಿಗೇ ಹೊರತೂ ಬೇರೆಯವರಿಗಾಗಿ ಹೆಣಗಾಡಿದ್ದೇನೂ ಅಲ್ಲವಲ್ಲ! ಬುದ್ಧಿವಂತಿಕೆ, ಸಾಮರ್ಥ್ಯಗಳು ನಿಜವಾಗಿ ಇದ್ದುದೇ ಆಗಿದ್ದರೆ ಅದು ಅವನ ಬೆಳವಣಿಗೆಯಲ್ಲಿ ಪ್ರತಿಫಲನಗೊಳ್ಳುತ್ತಿತ್ತು. ಪರಿಶ್ರಮ, ಪ್ರಾಮಾಣಿಕತೆ, ಜ್ಞಾನಕ್ಕೆ ಯಾವತ್ತೂ ಮೌಲ್ಯವಿದ್ದೇ ಇರುತ್ತದೆ. ಇಂಥವೆಲ್ಲ ನಮ್ಮೊಳಗಿನ ಅಹಂಕಾರವನ್ನು ಪರಿಪುಷ್ಟಗೊಳಿಸಿಕೊಳ್ಳುವ ರೀತಿಯೇ ಹೊರತೂ ಬೇರಿನ್ನೇನೂ ಅಲ್ಲ. ವ್ಯರ್ಥವಾದುದನ್ನು ಬಿಟ್ಟು ಯಶಸ್ಸಿನತ್ತ ಹೆಜ್ಜೆ ಹಾಕುವವನೇ ನಿಜವಾದ ಸಾಧಕನಾಗಿರುತ್ತಾನೆ. ಆತನ ದೃಷ್ಟಿ ಹಿಂದಕ್ಕೆ ಹೋಗುವುದೇ ಇಲ್ಲ. ಹಿಂದಿನ ಹಾದಿಯ ಅನುಭವದೊಂದಿಗೆ ಆತ ಮುಂದೆ ನೋಡುತ್ತಾ ನಡೆಯುತ್ತಿರುತ್ತಾನೆ. ಗೊಣಗಾಟ ಬಿಟ್ಟು ಹಾಗೆ ಮುಂದಕ್ಕೆ ಹೋಗುತ್ತಲೇ ಇರಿ. <

-ಸಹನೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com