ವಿಶ್ವ ಶುಂಠಿಯಲ್ಲಿ ನಮ್ಮದೇ ಸಿಂಹಪಾಲು

Updated on: 

ವಿಶ್ವದ ಬೆಳ್ಳುಳ್ಳಿ ಬೆಳೆಯಲ್ಲಿ ನಮ್ಮ ಸ್ಥಾನ ಎರಡನೆಯದ್ದಿತ್ತು. ಚೀನಾ ಮುಂದಿತ್ತು. ಆದರೆ, ಅದೇ ಶುಂಠಿ ಬೆಳೆಯಲ್ಲಿ ನಾವೇ ಮುಂದೆ. ಅವರಿಗೆ ಎರಡನೆಯ ಸ್ಥಾನ. ಪ್ರತಿವರ್ಷ ಭಾರತ 3,80,100 ಟನ್‌ಗಳಷ್ಟು ಶುಂಠಿ ಬೆಳೆದರೆ, ಚೀನಾ 3,31,393 ಟನ್‌ನಷ್ಟು ಬೆಳೆಯುತ್ತದೆ. ನಂತರದ ಸ್ಥಾನಗಳಲ್ಲಿ ಇಂಡೋನೇಷ್ಯಾ, ನೇಪಾಳ ಬರುತ್ತವೆ. ಒಟ್ಟಾರೆ ಇಡೀ ಭೂಮಿಯಲ್ಲಿ ಪ್ರತಿವರ್ಷ 16,15,974 ಟನ್ ಶುಂಠಿ ಬೆಳೆಯಲಾಗುತ್ತದೆ.
ಶುಂಠಿಯ ಶಾಸ್ತ್ರೀಯ ಹೆಸರು ಜಿಂಜಿಬರ್ ಅಫಿಸಿನೇಲ್ ಲಿನ್. ಇದು ಜಿಂಜಿಬರೇಸಿ ವಂಶಕ್ಕೆ ಸೇರಿದೆ. ಹಿಂದಿಯಲ್ಲಿ ಇದನ್ನು 'ಅದ್ರಕ್‌', ಬಂಗಾಳಿಯಲ್ಲಿ 'ಅಡ', ಮಲಯಾಳಂ- ತಮಿಳಿನಲ್ಲಿ 'ಇಂಜಿ', ಮರಾಠಿಯಲ್ಲಿ 'ಅಲೆ', ಸಂಸ್ಕೃತದಲ್ಲಿ 'ಅರ್ದ್ರಕ, ತೆಲುಗಿನಲ್ಲಿ 'ಅಲ್ಲಮ್‌' ಎಂದೂ ಕರೆಯುತ್ತಾರೆ.
ಈ ಸಸ್ಯದ ಒಣಗಿದ ಬೇರುಕಾಂಡ ಸಂಬಾರದ ಪದಾರ್ಥವಾಗಿ ಬಳಕೆಯಾಗುತ್ತದೆ. ಭಾರತದ ಐದು ಮುಖ್ಯ ಸಂಬಾರ ದಿನಸಿಗಳಲ್ಲಿ ಇದೂ ಒಂದು. ಭಾರತದ 'ಕೊಚ್ಚಿನ್ ಶುಂಠಿ' ವಿಶ್ವದಲ್ಲೇ ಹೆಚ್ಚು ಪ್ರಸಿದ್ಧಿ ಪಡೆದಿದೆ. ವ್ಯಾಪಾರದಲ್ಲಿ ಶುಂಠಿಯನ್ನು 'ಡ್ಯಾಂಡ್ಸ್‌' ಅಥವಾ 'ರೇಸಸ್‌' ಎಂದು ಕರೆಯುವುದುಂಟು.
ಇದು ಅತಿ ಪುರಾತನ ಸಂಬಾರ ಪದಾರ್ಥ. ಗ್ರೀಕರು ಮತ್ತು ರೋಮನ್ನರಿಗೆ ಅತಿಪ್ರಿಯ ಸಂಬಾರ. ಅರಬ್ಬರಿಂದ ಕೆಂಪು ಸಮುದ್ರ ಮಾರ್ಗದ ಮೂಲಕ ತರಿಸಿಕೊಳ್ಳುತ್ತಿದ್ದರು ಎಂಬ ಅಂಶ ಚರಿತ್ರೆಯ ದಾಖಲೆಗಳಿಂದ ತಿಳಿಯುತ್ತದೆ. ಒಂಬತ್ತನೇ ಶತಮಾನದಲ್ಲಿ ಫ್ರಾನ್ಸ್, ಜರ್ಮನಿಯಲ್ಲಿ ಇದು ಹೆಚ್ಚು ಪ್ರಚಲಿತಕ್ಕೆ ಬಂತು. ಹತ್ತನೇ ಶತಮಾನದಲ್ಲಿ ಇಂಗ್ಲಿಷರು ಬಳಸತೊಡಗಿದರು. ಶುಂಠಿ ಗಡ್ಡೆಯನ್ನು ಬದುಕಿರುವ ಸ್ಥಿತಿಯಲ್ಲೇ ಹೆಚ್ಚು ದೂರದ ವರೆಗೆ ಸಾಗಿಸಬಹುದಾದ್ದರಿಂದ ಇದು ಪ್ರಪಂಚದಲ್ಲಿ ಎಲ್ಲೆಡೆ ಬಹುಬೇಗ ಸಾಮ್ರಾಜ್ಯ ಸ್ಥಾಪಿಸಿಕೊಂಡಿತು. ಜಮೈಕಾ, ಸಿರಾಲಿಯೋನ್, ನೈಜೀರಿಯಾ, ಜಪಾನ್, ತೈವಾನ್, ಆಸ್ಟ್ರೇಲಿಯಾಗಳು ಶುಂಠಿ ಬೆಳೆಯುವ ಇತರೆ ರಾಷ್ಟ್ರಗಳು. ಭಾರತದ ಶುಂಠಿಗೆ ಅತ್ಯಮೋಘ ಬೇಡಿಕೆಯಿದ್ದಂತೆ ಜಮೈಕಾ ತಳಿಗೂ ಅಷ್ಟೇ ಡಿಮ್ಯಾಂಡ್ ಇದೆ.
ಸಾಮಾನ್ಯವಾಗಿ ಚೀನಿಯರು ಶುಂಠಿಯನ್ನು ಒಣಗಿಸಿ ರಫ್ತು ಮಾಡುವುದಿಲ್ಲ. ಸಕ್ಕರೆ ಪಾಕದಲ್ಲಿ ಅದನ್ನು ಕೆಡದಂತೆಇರಿಸಿ ಅಥವಾ ಶುಂಠಿ ಮಿಠಾಯಿ ರೂಪದಲ್ಲಿ ರಫ್ತು ಮಾಡುತ್ತಾರೆ. ಇದಕ್ಕೆ ಖಾರದ ರುಚಿ ಕಡಿಮೆ ಇರುತ್ತದೆ. ತೈಲ ತೆಗೆಯಲಂತೂ ಸಾಧ್ಯವೇ ಇಲ್ಲ. ಜಪಾನಿನ ಶುಂಠಿ ಖಾರವಿದ್ದರೂ, ವಿಶಿಷ್ಟ ವಾಸನೆ ಇರುವುದಿಲ್ಲ.
ಭಾರತದಲ್ಲಿ ಶುಂಠಿಯನ್ನು ಹೆಚ್ಚು ಬೆಳೆಯುವುದು ಕೇರಳ. ಇದು ಅತ್ಯುತ್ತಮ ದರ್ಜೆಯ ಶುಂಠಿ. ಆದರೆ, ಭಾರತದ ಶುಂಠಿಯ ರಫ್ತಿಗೆ ಕೆಲವು ಅಡಚಣೆಗಳಿವೆ. ನಮ್ಮ ತಳಿಯಲ್ಲಿ ನಾರಿನ ಅಂಶ ತುಂಬಾ ಹೆಚ್ಚು. ಜಮೈಕಾ ತಳಿಯಲ್ಲಿ ಅಷ್ಟು ನಾರಿರುವುದಿಲ್ಲ. ಇಲ್ಲಿ ಶುಂಠಿ ಬೆಳೆಯಲು ತೀರಾ ಖರ್ಚು ಕೂಡ ಇದೆ. ರೋಗನಿರೋಧಕ ಶಕ್ತಿಕೂಡ ಕಡಿಮೆ.
ಹೀಗಾಗಿ, ವಿಜ್ಞಾನಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ತುಂಬಾ ಇದೆ. <

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com