ಒಂದು ದಿನ ಕುರಿ ತನ್ನ ಮರಿಕುರಿಯ ಜೊತೆಗೆ ಕೊಳವೊಂದರ ಬಳಿ ಬಂದು ನೀರು ಕುಡಿಯುತ್ತಿತ್ತು. ನೀರಿನಲ್ಲಿ ಆಹಾರಕ್ಕಾಗಿ ಹೊಂಚುಹಾಕುತ್ತಿದ್ದ ಮೊಸಳೆಯೊಂದು ಕುರಿಯನ್ನು ಗಬಕ್ಕನೆ ಹಿಡಿದುಕೊಂಡಿತು. ಇದನ್ನು ನೋಡಿದ ಮರಿಕುರಿ ಗಾಬರಿಯಿಂದ ಓಡಿಹೋಯಿತು.
ಮೊಸಳೆ ಕುರಿಯನ್ನು ನಿಧಾನವಾಗಿ ನುಂಗುತ್ತಿತ್ತು. ಇದನ್ನು ಮರಿಕುರಿ ದೂರದಲ್ಲಿ ನಿಂತು ನೋಡುತ್ತಿತ್ತು. ತಾಯಿಗೆ ಸಹಾಯ ಮಾಡಲಾಗದೇ ಅದು ಅಸಹಾಯಕತೆಯಿಂದ 'ಅಮ್ಮೇ' ಎಂದು ಆರ್ತನಾದ ಮಾಡುತ್ತಿತ್ತು. ಇತ್ತ ಕುರಿಯನ್ನು ನುಂಗುತ್ತಿದ್ದ ಮೊಸಳೆಯ ಕಣ್ಣುಗಳಿಂದ ಒಂದೇಸಮನೆ ಧಾರಾಕಾರ ನೀರು ಸುರಿಯುತ್ತಿತ್ತು.
ಇದನ್ನೆಲ್ಲ ಮರದ ಮೇಲೆ ಕುಳಿತ ಅಳಿಲೊಂದು ನೋಡುತ್ತಿತ್ತು. ಮೊಸಳೆಯೇಕೆ ಗಳಗಳನೆ ಅಳುತ್ತಿದೆ? ಬಹುಶಃ ಅದಕ್ಕೆ ಪಶ್ಚಾತ್ತಾಪವಾಗಿರಬೇಕು ಎಂದುಕೊಂಡ ಅಳಿಲು, 'ಪಾಪದ ಕುರಿಯನ್ನು ನುಂಗಿ ಪಾಪ ಕಟ್ಟಿಕೊಂಡೆಯಲ್ಲ, ಈಗ ಅತ್ತರೆ ಏನು ಲಾಭ ಇದೆ?' ಎಂದು ಕೇಳಿತು.
ಅದಕ್ಕೆ ಮೊಸಳೆ, 'ನಾನು ಅಳುವುದು ಅದಕ್ಕಲ್ಲ. ಆ ಮರಿಕುರಿ ತಪ್ಪಿಸಿಕೊಂಡು ಓಡಿಹೋಯ್ತಲ್ಲ ಎಂದು ದುಃಖ ಆಯಿತು. ಅದಕ್ಕೇ ಅಳುತ್ತಿದ್ದೆ' ಎಂದಿತು ಮೊಸಳೆ. <
-ವಿ. ಹೇಮಂತಕುಮಾರ