ಪ್ರಪಂಚದ ಅಲ್ಪತೃಪ್ತರು, ಸಂತೃಪ್ತರು, ಆತ್ಮತೃಪ್ತರು ಎಂಬ ಬಗೆಬಗೆಯ ಸಾಧಕರನ್ನು ಕಾಣುತ್ತೇವೆ. ಆದರೆ ಮಹಾಕಾರ್ಯಗಳನ್ನು ಸಾಧಿಸಲು ಇಡೀ ಜೀವಮಾನವನ್ನು ಮುಡುಪಾಗಿಟ್ಟು ಶ್ರಮಿಸುವವರು ಆತ್ಮತೃಪ್ತರು. ಮಹಾಕಾರ್ಯಗಳು ಮಹಾತ್ಯಾಗವನ್ನು ಬಯಸುತ್ತವೆ. ಆದ್ದರಿಂದ ಸ್ವಾಮೀಜಿಯವರ ಮೂರು ಸೂತ್ರಗಳನ್ನು ಮನದಷ್ಟು ಮಾಡಿಕೊಳ್ಳಿ.
'ಹೃದಯಾಳದಿಂದ ಹೊಮ್ಮುವ ಅನುಕಂಪ, ಪ್ರೀತಿ ಕೇವಲ ಬುದ್ಧಿವಂತಿಕೆಯಲ್ಲಿ. ತರ್ಕದಲ್ಲಿ ಏನಿದೆ? ಅವು ಕೆಲವು ಹೆಜ್ಜೆ ಮಾತ್ರ ಮುಂದುವರಿದು ನಿಂತುಬಿಡುತ್ತವೆ. ಆದರೆ ಸ್ಫೂರ್ತಿ ಚಿಮ್ಮುವುದು ಹೃದಯದಿಂದ. ಜಗತ್ತಿನ ರಹಸ್ಯಗಳಿಗೆಲ್ಲ ಈ ಪ್ರೇಮವೇ ಕೀಲಿಕೈ. ಆದ್ದರಿಂದ ಮೊದಲು ಹೃದಯವಂತರಾಗಿ'.
ಇನ್ನು ಎರಡನೆಯ ಅಂಶ, ನೀವು ಹೃದಯವಂತರಾಗಿರಬಹುದು. ಆದರೆ ಕೆಲಸಕ್ಕೆ ಬಾರದ ಹರಟೆಯಲ್ಲೇ ಶಕ್ತಿಹರಣ ಮಾಡುವುದಕ್ಕಿಂತ, ಏನಾದರೂ ಉಪಯುಕ್ತವಾದ, ಅನುಷ್ಠಾನಯೋಗ್ಯವಾದ ಮಾರ್ಗವನ್ನು ಹುಡುಕಿರುವಿರಾ? ದೇಶಬಾಂಧವರನ್ನು ನಿಂದಿಸುವ ಬದಲಾಗಿ ಏನಾದರೂ ನೆರವು ನೀಡಬಲ್ಲಿರಾ? ಅವರ ದುಃಖವನ್ನು ದೂರ ಮಾಡಲು ಒಂದೆರಡು ಒಳ್ಳೆಯ ಮಾತುಗಳನ್ನಾದರೂ ಆಡಬಲ್ಲಿರಾ?
ಮೂರನೆಯ ಅಂಶ, ಅಡ್ಡಿ ಆತಂಕಗಳನ್ನು ಅತಿಕ್ರಮಿಸಬಲ್ಲ ಇಚ್ಛಾಶಕ್ತಿ ನಿಮ್ಮಲ್ಲಿದೆಯೇ? ಸಮಸ್ತ ಜಗತ್ತೇ ನಿಮಗೆದುರಾಗಿ ನಿಂತರೂ, ನಿಮಗೆ ಸರಿಯೆಂದು ತೋರಿದ್ದನ್ನು ಬಿಡದೆ ಸಾಧಿಸುವ ಛಲ ನಿಮ್ಮಲ್ಲಿದೆಯೇನು? ಹಿಡಿದ ಕೆಲಸವನ್ನು ಬಿಡದೆ ಮಾಡುವ ಛಲ ನಿಮ್ಮಲ್ಲಿದೆಯೇನು?
- ಆನಂದ ಎಸ್.ಎನ್.