ಮುಂಬೈನ ಮುಸ್ಸಂಜೆ

ಮುಂಬೈನ ಮುಸ್ಸಂಜೆ
Updated on: 

ಪುರುಸೊತ್ತಿಲ್ಲದ ಜನರೇ ಸೇರಿಕೊಂಡ ನಗರ ಮುಂಬೈ! ಗಂಡನ ಮುಖ ಹೆಂಡ್ತಿ ನೋಡೋದಿಲ್ಲ, ಅಪ್ಪನ ಮುಖ ಮಕ್ಳು ನೋಡೋದಿಲ್ಲ. ಆದರೂ, ಅಲ್ಲಿ ಬದುಕಿನ ಗಾಲಿ ರೊಂಯ್ಯಂಥ ತಿರುಗುತ್ತಲೇ ಇರುತ್ತೆ. ಕುಟುಂಬಸ್ಥರ ಮುಖಗಳನ್ನು ಪರಸ್ಪರ ನೋಡಿಕೊಳ್ಳಲೆಂದೇ ಅಲ್ಲಿನ ಕಂಪನಿಗಳು 'ವೀಕೆಂಡ್‌' ಅಂತ ಎರಡು ದಿನ ರಜೆ ಘೋಷಿಸುತ್ತವೆ. ಯವ್ವನ, ಕಸುವಿದ್ದವರ ಪರಿಸ್ಥಿತಿಯೇ ಹೀಗೆ. ಇನ್ನು ಮುಂಬೈನ ಹಿರಿಯರ ಕಥೆ ಹೇಗೆ?
ಅವರೆಲ್ಲರ ಪಾಲಿಗೆ ಬಾಕಿ ಉಳಿದದ್ದು ನಾಲ್ಕೋ ಐದೋ ದಿನಗಳು. ಮನೆಯೆಂಬ ಕಾಂಕ್ರೀಟ್ ಕೋಟೆಯೊಳಗೇ ಕೂತಿದ್ದರೆ ಮೈಮೇಲೆ ಲೀಟರ್‌ಗಟ್ಟಲೆ ಬೆವರು ಹರಿದು ಇನ್ನಷ್ಟು ಸುಸ್ತು. ಆ ಮರಾಠಿ, ಹಿಂದಿ ಚಿತ್ರಗಳನ್ನೂ ಎಷ್ಟೂಂತ ನೋಡೋದು? ರಿಟೈರ್ಡ್ ಬದುಕಿಗೆ ಸ್ವಲ್ಪನಾದರೂ ರಿಲ್ಯಾಕ್ಸ್ ಬೇಕಲ್ಲವೇ?
ಅಂಥ ರಿಲ್ಯಾಕ್ಸನ್ನು ರೀಚಾರ್ಜ್ ಮಾಡುವ ಕೇಂದ್ರ 'ದಾದಾ- ದಾದಿ ಪಾರ್ಕ್‌'. ಹಿರಿ ಜೀವಿಗಳನ್ನು ಮುದಗೊಳಿಸಿ, ಅವರ ಮುಖದಲ್ಲಿ ನಗು ಮೂಡಿಸಲೆಂದೇ ಬೋರಿವಲಿ ಸೇರಿದಂತೆ ಮುಂಬೈನ ಮೂರು ಕಡೆ ಪುಷ್ಪ ಮಾ ಪ್ರತಿಷ್ಠಾನದ ವಿನುಭಾಯ್ ವಾಲಿಯಾ ಪ್ರೋತ್ಸಾಹದೊಂದಿಗೆ 'ದಾದಿ-ದಾದಿ ಪಾರ್ಕ್‌' ಎಂಬ ಸಂಸ್ಥೆ ಸ್ಥಾಪನೆಯಾಗಿದೆ. ಬರೋಬ್ಬರಿ 19,500 ಸದಸ್ಯರು ಇದ್ದಾರೆ!

ಫುಲ್ ಫ್ರೀ
ಮ್ಯಾಗ್ನೆಟಿಕ್ ಐಡೆಂಟಿಟಿ ಕಾರ್ಡ್‌ಗೆ ರು. 100, ಅಡ್ಮಿಷನ್‌ಗೆ ರು. 2. ಮಿಕ್ಕಂತೆ ಈ ಸಂಸ್ಥೆಯ ಸೇವೆ ಫುಲ್ ಫ್ರೀ. ರಜಾ ದಿನ ಹೊರತುಪಡಿಸಿ, ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ ಒಂದೂವರೆ ಹಾಗೂ ಸಂಜೆ ಅರ್ಧ ಗಂಟೆ ಈ ಪಾರ್ಕ್ ಓಪನ್ನಿರುತ್ತದೆ. ಶೇ.60 ಹಾಜರಾತಿ ಕಡ್ಡಾಯ. ಟೈಮ್‌ಗೆ ಸರಿಯಾಗಿ ಕಾಫಿ, ಟೀ, ಹಾಲು, ಸೂಪ್ ಎಲ್ಲವೂ ಪುಕ್ಕಟೆ.

ಕಡಿಮೆ ಹಣದಲ್ಲಿ ಕಂಪ್ಯೂಟರ್ ತರಬೇತಿ. ಅಗತ್ಯ ಔಷಧಿಯೂ ಎಮ್ಮಾರ್ಪಿಗಿಂತ ಕಡಿಮೆ ದರದಲ್ಲಿ ಲಭ್ಯ. ಕಣ್ಣಿನ ಪೊರೆ ಮುಂತಾದ ಶಸ್ತ್ರ ಚಿಕಿತ್ಸೆಗೂ ಆಗಾಗ್ಗೆ ಶಿಬಿರ. ಬರ್ತ್‌ಡೇ ಬಂತಂದ್ರೆ ಪಾರ್ಕ್ ಕಡೆಯಿಂದಲೇ ಕೇಕ್ ಕಟ್ ಮಾಡಿ ಸಂಭ್ರಮ ಆಚರಣೆ. ಜಾಗತಿಕ ವಿದ್ಯಮಾನ ಸಂಬಂಧ ಆಗಾಗ್ಗೆ ಸಂವಾದ. ಒಟ್ಟಿನಲ್ಲಿ ಈ ಪಾರ್ಕು ವೃದ್ಧರ ಪಾಲಿಗೆ ಮಿನಿ ಜಗತ್ತು.
ಹಿರಿಯರ ಬಗ್ಗೆ ಅಧ್ಯಯನ ನಡೆಸಲು ಆಸಕ್ತರಾದವರಿಗೆ ಈ ಪಾರ್ಕ್ ಸದಾ ಮುಕ್ತ. ಅಮೀರ್‌ಖಾನ್ ಕೂಡ 'ಸತ್ಯಮೇವ ಜಯತೇ' ಶೋನಲ್ಲಿ ಈ ಪಾರ್ಕ್ ಬಗ್ಗೆ ಸವಿಸ್ತಾರ ಪರಿಚಯಿಸಿಕೊಟ್ಟಿದ್ದರು.
ನಮ್ಮಲ್ಲೂ ಯೋಚಿಸಬೇಕು. ದುಡ್ಡಿದ್ದವರು ಲಕ್ಷ- ಕೋಟಿ ಚೆಲ್ಲಿ ವೃದ್ಧಾಶ್ರಮ ಆರಂಭಿಸುವುದಕ್ಕಿಂತ ಇಂಥ ಪಾರ್ಕ್ ಸಂಸ್ಥೆ ತೆರೆದರೆ ಚೆನ್ನ. ವೃದ್ಧ  ಹೃದಯಗಳು ಮನೆಯಲ್ಲಿದ್ದರೇನೇ ಉಲ್ಲಾಸಿತವಾಗಿರುತ್ತವೆ. ಯುವ ಮನಸ್ಸುಗಳೂ ಅರಿಯಬೇಕು. ಮನೆಯಿಂದ ಅವರನ್ನು ಹೊರಗೆ ಹಾಕುವುದಕ್ಕಿಂತ, ಇಂಥ ಸಂಸ್ಥೆಗಳ ಸ್ಥಾಪನೆಗಾದರೂ ಮುಂದಾಗಬೇಕು. ಆಗ ಮಕ್ಕಳಿಗೆ ಅಷ್ಟು ಹೊರೆಯೂ ಆಗುವುದಿಲ್ಲ. ಹಿರಿಯರು ತಮ್ಮ ಪಾಡಿಗೆ ತಾವು ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುತ್ತಾರೆ.

ಇದು ದಾದಾ-ದಾದಿ ಪಾರ್ಕು...
ಮುಂಬೈನಲ್ಲಿ ಮನೆಯೆಂಬ ಕಾಂಕ್ರೀಟ್ ಕೋಟೆಯೊಳಗೇ ಕೂತಿದ್ದರೆ ಮೈಮೇಲೆ ಲೀಟರ್‌ಗಟ್ಟಲೆ ಬೆವರು ಹರಿದು ಇನ್ನಷ್ಟು ಸುಸ್ತು. ರಿಟೈರ್ಡ್ ಬದುಕಿಗೆ ಸ್ವಲ್ಪನಾದರೂ ರಿಲ್ಯಾಕ್ಸ್ ಬೇಕಲ್ಲವೇ? ಅಂಥ ರಿಲ್ಯಾಕ್ಸನ್ನು ರೀಚಾರ್ಜ್ ಮಾಡುವ ಕೇಂದ್ರ 'ದಾದಾ- ದಾದಿ ಪಾರ್ಕ್‌'...

     ಸುಖ- ದುಃಖ, ಸವಿ ಸವಿ ನೆನಪುಗಳನ್ನು ತೋಡಿಕೊಳ್ಳಲು ವಿಭಿನ್ನ ಮನರಂಜನಾ ಕಾರ್ಯಕ್ರಮ.
     ಸಾಮಾಜಿಕ ಸಮಸ್ಯೆಗಳ ಕುರಿತು ಚರ್ಚೆ.
    ಸಮ ವಯಸ್ಕ, ಸಮ ಚಿಂತನೆಯುಳ್ಳವರನ್ನು ಫ್ರೆಂಡ್ಸ್ ಮಾಡಿಕೊಳ್ಳಲು ವೇದಿಕೆ ಸೃಷ್ಟಿಸಿ, ಒಬ್ಬರು ಮತ್ತೊಬ್ಬರ ಕೇರ್ ತೆಗೆದುಕೊಳ್ಳುವಂತೆ ಮಾಡುತ್ತದೆ.
    ವೃದ್ಧರ ಅದ್ಭುತ ಟ್ಯಾಲೆಂಟ್‌ಗಳನ್ನು ಗುರುತಿಸಿ, ಪ್ರೋತ್ಸಾಹಿಸಲಾಗುತ್ತದೆ.
    ಅಗತ್ಯವಾದ ನ್ಯೂಸ್ ಪೇಪರ್, ಟಿವಿ ಕಾರ್ಯಕ್ರಮಗಳು, ಕಂಪ್ಯೂಟರ್ ಶಿಕ್ಷಣ, ಅಗತ್ಯವಿರುವವರಿಗೆ ವೈದ್ಯಕೀಯ ಶುಶ್ರೂಷೆಯನ್ನೂ ಒದಗಿಸುತ್ತದೆ. ರಾಷ್ಟ್ರೀಯ, ಧಾರ್ಮಿಕ ಹಬ್ಬಗಳೆಲ್ಲವನ್ನೂ ಆಚರಿಸುತ್ತದೆ.
 ಒಳ್ಳೆ ಸಿನಿಮಾ, ನಾಟಕ, ಸಂಗೀತ ಕಛೇರಿಗಳಿಗೆ ಪಾರ್ಕ್‌ನ ಸದಸ್ಯರನ್ನು ಕರೆದೊಯ್ಯಲಾಗುತ್ತದೆ. ಋತುಮಾನಕ್ಕೆ ತಕ್ಕಂತೆ ಅವರಿಗೆ ಅಗತ್ಯ ವಸ್ತುಗಳನ್ನು ಕಡಿಮೆ ದರದಲ್ಲಿ ಒದಗಿಸಿ, ಅವರಲ್ಲಿಯೇ ಒಬ್ಬರಿಗೊಬ್ಬರು ಸಹಕರಿಸುವಂಥ ಮನೋಭಾವ ಬೆಳೆಸುತ್ತದೆ. ಆಗಾಗ ಪಿಕ್ನಿಕ್, ತೀರ್ಥಯಾತ್ರೆಗಳಿಗೂ ಕರೆದುಕೊಂಡು ಮನ ಮುದಗೊಳಿಸುತ್ತದೆ.
     ವಯಸ್ಸಾದವರಿಗೆ ತಾವು ಮತ್ತೊಬ್ಬರ ಮೇಲೆ ಅವಲಂಬಿತರಾಗಿದ್ದೇವೆ ಎಂಬ ನೋವು ಸದಾ ಕಾಡುತ್ತದೆ. ಈ ನೋವನ್ನು ಹೋಗಲಾಡಿಸಲೆಂದೇ ವಿಶೇಷ ಕಾರ್ಯಕ್ರಮ.
     ಅವರಿಗೇ ಸಂಗೀತ, ನೃತ್ಯ ಸ್ಪರ್ಧೆಗಳನ್ನು ಆಯೋಜಿಸಿ, ಯವ್ವನದ ಸವಿ ನೆನಪುಗಳು ಮರುಕಳಿಸುವಂತೆ ಮಾಡುತ್ತದೆ. ಅವರ ಫಿಟ್‌ನೆಸ್, ಆರೋಗ್ಯ ಕಡೆಯೂ ಗಮನಿಸಲಾಗುತ್ತದೆ.
     ಕಥೆ ಹೇಳುವುದು-ಕೇಳುವುದು.
     ಬರವಣಿಗೆ ಮೂಲಕ
    ಭಾವನೆಗಳನ್ನುಪ್ರಕಟಿಸಲು ತರಬೇತಿ.

- ನಿರುಪಮಾ ಕೆ.ಎಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com