

ಸಾಧನೆಗೆ ಯಾವುದೇ ಚೌಕಟ್ಟಿಲ್ಲ. ಕಲಿತದ್ದು ವಾಣಿಜ್ಯಶಾಸ್ತ್ರ. ಕೈಹಿಡಿದಿದ್ದು ಆಯುರ್ವೇದ. ಜೀವನ ನಿರ್ವಹಣೆಯಲ್ಲಿ ಹಲವು ಏಳುಬೀಳುಗಳ ನಡುವೆ ಅಂತಿಮವಾಗಿ ನೆಲೆ ಸಿಕ್ಕಿದ್ದು ಆಯುರ್ವೇದ ಔಷಧ ತಯಾರಿಕೆಯಲ್ಲಿ.
ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಡಬಾಳ ಊರಿನ ವಿಶ್ವನಾಥ ಹೆಗಡೆ ತಮ್ಮ ವಾಣಿಜ್ಯ ಪದವಿ ಮುಗಿದ ನಂತರದಲ್ಲಿ ಲೆಕ್ಕ ಬರೆಯುವ ಉದ್ಯೋಗ ಶುರುವಿಟ್ಟುಕೊಂಡರು. ಸಿಕ್ಕಾ ಬಿಡುವಿನಲ್ಲೇ ಆಯುರ್ವೇದ ವೈದ್ಯರ ಮತ್ತು ತಜ್ಞರ ಸಂಪರ್ಕ ಪಡೆದರು. ಆಯುರ್ವೇದ ಶಾಸ್ತ್ರದ ಕುರಿತು ಆಸಕ್ತಿ ತಳೆದರು. ಅಧ್ಯಯನ ಆರಂಭಿಸಿದರು. ನಾಟಿ ವೈದ್ಯರನ್ನು ಸಂಪರ್ಕಿಸಿದರು. ಹೀಗೆ ಆಯುರ್ವೇದ ಶಾಸ್ತ್ರಕ್ಕೆ ಸಂಬಂಧಪಟ್ಟ ಎಲ್ಲ ತಜ್ಞರ ಅನುಭವ ಸಂಗ್ರಹಿಸಿ, ಸಣ್ಣ ಪ್ರಮಾಣದಲ್ಲಿ ಆಯುರ್ವೇದ ಔಷಧ ತಯಾರಿಕೆಗೆ ಮುಂದಾದರು.
ವಿಶ್ವನಾಥ ಈಗ ಶಿರಸಿಯಿಂದ 10 ಕಿ.ಮೀ. ದೂರದ ಕೆಂಗ್ರೆಹೊಳೆ ಸನಿಹದಲ್ಲಿ ಆಯುರ್ವೇದಿಕ್ ಫಾರ್ಮಾಸ್ಯುಟಿಕಲ್ಸ್ ಎಂಬ ಔಷಧ ತಯಾರಿಕಾ ಘಟಕವನ್ನೇ ಸ್ಥಾಪಿಸಿದ್ದಾರೆ. ಇವರಿಗೆ ಆಯುರ್ವೇದ ಔಷಧಿ ಕುರಿತು ಶಾಸ್ತ್ರೀಯ ಸಲಹೆಗಾರರಾಗಿ ಡಾ. ಲಕ್ಷ್ಮೀಶ ಭಟ್ ಮತ್ತು ಲ್ಯಾಬ್ ಟೆಕ್ನೀಷಿಯನ್ನಾಗಿ ಪತ್ನಿ ಸುಮಂಗಲಾ ಕೈಜೋಡಿಸಿದ್ದಾರೆ. ಆಧುನಿಕ ಯಂತ್ರೋಪಕರಣವನ್ನೊಳಗೊಂಡ ಸುಸಜ್ಜಿತ ಔಷಧಿ ತಯಾರಿಕಾ ಘಟಕದಲ್ಲಿ ಸ್ಥಳೀಯರಿಗೆ ಉದ್ಯೋಗವನ್ನೂ ನೀಡಿದ್ದಾರೆ.
ಆಧುನಿಕ ಒತ್ತಡದ ಜಂಜಡದಲ್ಲಿ ವಾಯು, ನರದೌರ್ಬಲ್ಯ, ಮೂಲವ್ಯಾಧಿ, ಕೆಮ್ಮು, ಅಸ್ತಮಾ, ಆಮಶಂಕೆ ಸಾಮಾನ್ಯವೇ ಆಗಿಬಿಟ್ಟಿದೆ. ಇವಕ್ಕೆಲ್ಲ ಸಾಕಷ್ಟು ಔಷಧಗಳೂ ಇವೆ. ಈಗಾಗಲೇ ಈ ಎಲ್ಲ ಔಷಧಿಗಳಿಗೆ ಸರ್ಕಾರದ ಆಯುಷ್ ಇಲಾಖೆಯ ಮಾನ್ಯತೆಯೂ ದೊರೆತಿದೆ. ಈ ರೀತಿಯ ರೋಗಪೀಡಿತರಿಗೆ ಪ್ರಯೋಗಾರ್ಥವಾಗಿ ಔಷಧ ನೀಡಿದಾಗ ಉತ್ತಮ ಫಲಿತಾಂಶ ಲಭಿಸಿದೆ.
ಸ್ಥಳೀಯವಾಗಿ ಲಭ್ಯವಿರುವ ಗಿಡಮೂಲಿಕೆಗಳಾದ ಗುಡ್ಡೇಗೇರು, ತಾರೆಕಾಯಿ, ಅಣಲೆಕಾಯಿ, ತುರಸಣಿಗೆ, ತಾರೆಸೊಪ್ಪು, ದೂರ್ವೆ, ಮುಳ್ಳುಬದನೆ, ಅರಶಿಣ, ನಾಚಿಕೆ ಮುಳ್ಳು, ಶುಂಠಿ, ರಾಮಪತ್ರೆ, ಜಾಯಿಕಾಯಿ, ಕಂಚಿಕಾಯಿ, ಮಾದಲಕಂಚಿ, ದಾಲ್ಚಿನ್ನಿ, ಆರಾರೂಟ್ (ಕಾಡರಿಷಿಣ), ನೇರಳೆ, ಅಮೃತಬಳ್ಳಿ, ಶತಾವರಿ, ನೆಲ್ಲಿ, ಒಂದೆಲಗ, ಜೇನು ಈ ಮುಂತಾದವುಗಳನ್ನು ಸುತ್ತಮುತ್ತಲ ಪ್ರದೇಶಗಳಿಂದ ಖರೀದಿಸುತ್ತಾರೆ. ಇಲ್ಲಿ ಲಭ್ಯವಿರದ ಮತ್ತು ಶೀತ ವಾತಾವರಣದಲ್ಲಿ ಬೆಳೆಯುವಂಥ ಗಿಡಮೂಲಿಕೆಗಳನ್ನು ಉತ್ತರ ಭಾರತದಿಂದ ತರಿಸಿಕೊಳ್ಳುತ್ತಾರೆ.
ಗಿಡಮೂಲಿಕೆಗಳ ಮಿಶ್ರಣ, ಸೋಸುವಿಕೆ, ಕುದಿಸುವಿಕೆ ಹೀಗೆ ಪ್ರತಿ ಹಂತದಲ್ಲೂ ಆಧುನಿಕ ಯಂತ್ರೋಪಕರಣ ಬಳಸುತ್ತಾರಿವರು. ಪ್ಯಾಕಿಂಗ್ ಘಟಕವನ್ನೂ ಔಷಧಿ ತಯಾರಿಕಾ ಕೇಂದ್ರದಲ್ಲಿ ಹಾಕಿಕೊಂಡಿದ್ದಾರೆ. ಈಗಾಗಲೇ ಇವರು ತಯಾರಿಸಿದ ಔಷಧಿಗಳು ಕರ್ನಾಟಕ ಹಾಗೂ ಗೋವಾದ ಔಷಧಿ ಅಂಗಡಿಗಳಲ್ಲಿ ಶ್ರೀ ಆಯುವೇದಿಕ್ ಹೆಸರಿನಲ್ಲಿ ಲಭ್ಯವಾಗುತ್ತಿವೆ. ಇನ್ನಷ್ಟು ವಾಸಿಯಾಗದಂಥ ಕಾಯಿಲೆಗಳಿಗೆ ಔಷಧಿ ಕಂಡುಹಿಡಿಯಬೇಕೆನ್ನುವ ಉತ್ಸುಕತೆ ವಿಶ್ವನಾಥರದ್ದು.
ಸಂಪರ್ಕ ವಿಳಾಸ: ವಿಶ್ವನಾಥ ಹೆಗಡೆ ಕಡಬಾಳ, ಶ್ರೀಶಕ್ತಿ ಆಯುರ್ವೇದಿಕ್ ಕೇಂದ್ರ, ಸಿಂಡಿಕೇಟ್ ಬ್ಯಾಂಕ್ ಬಳಿ, ನಟರಾಜ ರಸ್ತೆ, ಶಿರಸಿ. ಮೊ. 9845342452.
24 ರೋಗಕ್ಕೆ ಮದ್ದು!
ವಾಯುಗೆ ಸ್ಟಮಾ ಟೋನ್ ಕ್ಯಾಪ್ಸುಲ್, ಎಸಿಟೋನ್ ಸಿರಪ್, ಮೂಲವ್ಯಾಧಿಗೆ ಫೈಲೋನಾರ್ಮಾ ಕ್ಯಾಪ್ಸುಲ್, ಶಕ್ತಿವರ್ಧನೆಗೆ ಮಲ್ಟಿ ಟೋನ್ ಮತ್ತು ಶಕ್ತಿ ರಸಾಯನ, ಅಸ್ತಮಾಕ್ಕೆ ಶ್ವಾಸಾಟೋನ್ ಲೇಹ್ಯ ಹಾಗೂ ಶ್ವಾಸಾಕಾಮ್ ಕ್ಯಾಪ್ಸುಲ್, ಕೆಮ್ಮಿಗೆ ಕಾಫ್ಟೋನ್ ಸಿರಪ್, ನೋವಿಗೆ ಶಿವಶಕ್ತಿ ಪೇನ್ ಆಯಿಲ್, ಆರ್ಥೋಟೋನ್ ಕ್ಯಾಪ್ಸುಲ್, ಆರ್ಥೋಟೋನ್ ಡಿ-3, ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಳಕ್ಕೆ ಹೆಚ್ಬಿ ಟೋನ್, ಆಮಶಂಕೆ ಹಾಗೂ ಡಿಸೆಂಟ್ರಿಗೆ ಇಂಟೇಸ್ ಟೋನ್ ಕ್ಯಾಪ್ಸುಲ್, ತೂಕ ಇಳಿಕೆಗೆ ಟ್ರಿಮ್ಟೋನ್, ಜೀರ್ಣಶಕ್ತಿ ವೃದ್ಧಿಸಲು ಜೀರ್ಣಾಧಾರ... ಹೀಗೆ 24 ಥರದ ರೋಗಗಳಿಗೆ ಪರಿಣಾಮಕಾರಿ ಔಷಧಿಗಳನ್ನು ಸ್ವಪ್ರಯತ್ನದಲ್ಲಿ ಕಂಡುಹಿಡಿದಿದ್ದಾರೆ.
- ವಿಶ್ವಾಮಿತ್ರ ಹೆಗಡೆ
vishwottama@gmail.com