ಭಾವನೆಗಳ ಮೇಲೊಂದು ಕಣ್ಣಿಡಿ

Updated on: 

ಅದ್ಯಾಕೋ ಅಷ್ಟು ತೀವ್ರವಾದ ಭಾವನೆ ಒಮ್ಮೆ ಹುಟ್ಟಿಬಿಡುತ್ತದೆ. ನಿಯಂತ್ರಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಅದು ಯಾವುದೇ ವಿಚಾರಕ್ಕೆ ಸಂಬಂಧಿಸಿರಬಹುದು. ಪ್ರೀತಿಯೇ ಇರಬಹುದು, ದ್ವೇಷವೇ ಆಗಬಹುದು. ಯಾವುದೇ ಭಾವವಾದರೂ ಒಂದು ಮಿತಿಗಿಂತ ತೀವ್ರವಾಗಿದ್ದರೆ ಒಳ್ಳೆಯದೇನೂ ಅಲ್ಲ ಎನ್ನುವುದು ಸುಲಭ. ಆದರೆ, ಅವುಗಳನ್ನು ನಿಯಂತ್ರಿಸಿಕೊಳ್ಳುವುದು ಕಷ್ಟ. ಹಾಗಂತ ಅದರ ಹಿಂದೆಯೇ ಹೊರಟುಹೋಗುವುದು ಬುದ್ಧಿವಂತರ ಲಕ್ಷಣವೂ ಅಲ್ಲ. ಭಾವನಾತ್ಮಕ ಮನುಷ್ಯ ಎಂದು ಹೇಳಿಸಿಕೊಳ್ಳಲೇನೋ ಚೆಂದವೇ. ಆದರೆ, ಅಂಥವರು ಜೀವನದಲ್ಲಿ ಸಾಕಷ್ಟು ನೋವುಣ್ಣಬೇಕಾಗುತ್ತದೆ ಎಂಬುದು ಸತ್ಯ. ಹೀಗಾಗಿ ಕೆಲವು ಭಾವಗಳು ತೀವ್ರವಾದಾಗ ಅವುಗಳಿಗೆ ಮನಸ್ಸನ್ನು ಒಪ್ಪಿಸುವುದರ ಬದಲು ಸ್ವಲ್ಪ ನಿಲ್ಲಿ. ತಾಳ್ಮೆಯಿಂದ ಅವುಗಳನ್ನು ವೀಕ್ಷಿಸಿ. ಅದ್ಯಾವ ವೇಗದಲ್ಲಿ ನಮ್ಮ ವಿವೇಕಕ್ಕೆ ಕೈ ಹಾಕುತ್ತಿದೆ, ಎಷ್ಟರ ಮಟ್ಟಿಗೆ ದಿನದ ಸಮಯವನ್ನು ಆಪೋಶನ ತೆಗೆದುಕೊಳ್ಳುತ್ತಿದೆ ಎಂಬುದನ್ನು ಸುಮ್ಮನೆ ಒಂದೆರಡು ದಿನಗಳ ಕಾಲ ಪರಿಶೀಲಿಸಿಕೊಳ್ಳಿ. ಈ ಸಮಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಹೋಗಬೇಡಿ. ಅದು ಮತ್ತೆ ಭಾವನೆಗಳ ಕೈಗೆ ಬುದ್ಧಿಯನ್ನು ಒಪ್ಪಿಸಿದಂತೆಯೇ ಆಗುತ್ತದೆ. ಅಂತಹ ಭಾವನೆಗಳನ್ನು, ವಿಚಾರಗಳನ್ನು ದೂರವಿಡಬೇಕು ಅಂತಲ್ಲ. ಹಾಗೆ ದೂರವಿಡಬೇಕು ಎಂದು ಯತ್ನಿಸಿದರೆ ಅದು ಮತ್ತಷ್ಟು ಬಂದು ಅಂಟಿಕೊಳ್ಳುತ್ತದೆ. ಹೀಗಾಗಿ ಅವುಗಳಿಂದ ದೂರ ಓಡುವ ವಿಚಾರವೂ ಬೇಡ. ಹತ್ತಿಕ್ಕುವ ಹುನ್ನಾರವೂ ಬೇಡ. ನಿಯಂತ್ರಿಸುವ ಯತ್ನವೂ ಬೇಡ. ಬರೀ ವೀಕ್ಷಣೆ ಮಾಡಿ. ಇದಕ್ಕಾಗಿಯೇ ಒಂದೆರಡು ದಿನಗಳು ವ್ಯಯವಾದರೂ ಸರಿ. ಆದರೆ, ಅವುಗಳನ್ನು ಸಮಗ್ರವಾಗಿ ಅರಿಯುವ ಯತ್ನ ನಮ್ಮಿಂದಾಗಬೇಕು. ಆಗ ಆ ವಿಚಾರದ ಅಥವಾ ಭಾವನೆಯ ಮೌಲ್ಯ ನಮಗೆ ಗೊತ್ತಾಗುತ್ತದೆ. ಇದು ಬರೀ ಕಾಡಿಸಲು ಇರುವಂಥದ್ದು ಎಂದು ತಿಳಿದುಬಂದರೆ, ನಿರ್ಲಕ್ಷ್ಯಿಸುವ ಮನೋಸ್ಥೈರ್ಯ ಮೂಡಬೇಕು. ಮನಕ್ಕೆ ಮುದ ನೀಡುವಂತದ್ದು ಅಥವಾ ನಿಜಕ್ಕೂ ಮೌಲ್ಯಯುತವಾಗಿದ್ದಾದರೆ ಇನ್ನಷ್ಟು ಆಪ್ತಗೊಳಿಸಿಕೊಳ್ಳುವ ವೈಶಾಲ್ಯವನ್ನೂ ತೋರಬೇಕು. ಒಟ್ಟಾರೆ ಭಾವನೆಗಳ ಮೇಲೊಂದು ಕಣ್ಣಿಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com