ಆಗಷ್ಟೇ ಕಾಫಿ ಕುಡಿದು ಪತ್ರಿಕೆ ಕೈಗೆತ್ತಿಕೊಂಡವನಿಗೆ ಆಘಾತ. ಅಂದಿನ ನಿಧನ ವಾರ್ತೆಯಲ್ಲಿ ಅವರ ಹೆಸರು ಭಾವಚಿತ್ರ ಸಮೇತ ಪ್ರಕಟವಾಗಿತ್ತು. 'ನಾನು ಜೀವಂತವಿದ್ದೇನೊ, ಸತ್ತಿದ್ದೇನೊ' ಎಂದು ಗಲಿಬಿಲಿಯಲ್ಲಿ ಮೈ ಚಿವುಟಿ ನೋಡಿಕೊಂಡರು. ಪತ್ರಿಕೆ ಕಚೇರಿಗೆ ಫೋನಾಯಿಸಿ ತರಾಟೆ ತೆಗೆದುಕೊಳ್ಳಲೆಂದು ಎದ್ದರು. 'ನಾನು ನಿಜವಾಗಿಯೂ ಸತ್ತರೆ ಜನ ನನ್ನನ್ನು ಹೇಗೆ ಸ್ಮರಿಸಿಕೊಳ್ಳುತ್ತಾರೆ ನೋಡೋಣ' ಎನ್ನುವ ಹುಚ್ಚು ಕುತೂಹಲ ಹುಟ್ಟಿತು. ಮುಂದೆ ಓದತೊಡಗಿದರು.
'ಡೈನಮೈಟ್ ಕಿಂಗ್ ಡೈಸ್' ಎನ್ನುವ ಶೀರ್ಷಿಕೆ. 'ಇವರು ಸಾವಿನ ವ್ಯಾಪಾರಿ' (ಮರ್ಚೆಂಟ್ ಆಫ್ ಡೆತ್) ಎನ್ನುವ ವಿಶೇಷಣವನ್ನೂ ಅವರಿಗೆ ಬಳಸಲಾಗಿತ್ತು. ಏಕೆಂದರೆ ಅವರು ಡೈನಮೈಟ್ ಕಂಡುಹಿಡಿದ ವ್ಯಕ್ತಿಯಾಗಿದ್ದರು. ಪೂರ್ತಿ ಓದಿದ ಬಳಿಕ ಮನಸ್ಸಿನಲ್ಲಿ ತಳಮಳ. 'ಜನ ನನ್ನನ್ನು ಹೀಗೆ ನೆನಪಿಸಿಕೊಳ್ಳಬೇಕಾ' ಎಂಬ ವಿಷಾದ. ಜಾಗತಿಕ ಶಾಂತಿಗಾಗಿ ಏನಾದರೂ ಮಾಡಬೇಕು ಎಂದು ಆ ಕ್ಷಣವೇ ನಿರ್ಧರಿಸಿದರು.
ಆ ನಂತರದ ಬದುಕನ್ನು ಅದಕ್ಕಾಗಿಯೇ ಮೀಸಲಿಟ್ಟರು. ಮುಂದೆ ನೊಬೆಲ್ ಪಾರಿತೋಷಕದ ಹೆಸರಿನಲ್ಲಿ ಅವರ ಹೆಸರು ಚಿರಸ್ಥಾಯಿಯಾಯಿತು. ಅವರು ಯಾರು ಗೊತ್ತಾ? ಅಲ್ಫ್ರೆಡ್ ನೊಬೆಲ್!