

ಪ್ರಕೃತಿ ವಿಸ್ಮಯಗಳ ಕಣಜ. ಚಂದ್ರ ಪತಂಗವೂ ಅದರಲ್ಲಿನ ಒಂದು ವಿಸ್ಮಯ. ಇದು ರೇಷ್ಮೆ ಪತಂಗದ ಜಾತಿಗೆ ಅಂದರೆ ಸ್ಯಾಟರ್ನಿಡೆ ಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ಹೆಸರು 'ಆಕ್ಟಿಯಾಸ್ ಸೆಲೆನಿ'.
ಈ ಚಿಟ್ಟೆಗೆ ಚಡ್ಡಿ ಹಾಕಲಾಗದಿದ್ದರೂ ಮುಟ್ಟೋಣ ಅಂತನ್ನಿಸುತ್ತದೆ. ಚಂದ್ರ ಪತಂಗವು ಮೊದಲನೆಯ ನೋಟಕ್ಕೇ ನೋಡುಗರ ಮನಸ್ಸನ್ನು ಸೂರೆಗೊಳಿಸುತ್ತದೆ. ಹಗಲಿನಲ್ಲಿ ಇವು ಸ್ವಲ್ಪ ಮಂಕು. ರಾತ್ರಿಯಲ್ಲಿ ಬಹಳ ಚುರುಕು. ರೆಕ್ಕೆಯನ್ನು ಅಗಲಿಸಿದಾಗ 114 ಮಿಲಿ ಮೀಟರ್ ವರೆಗೂ ವಿಸ್ತಾರವಾಗಿ ಕಾಣುತ್ತದೆ.
ಕೋಶಾವಸ್ಥೆಯಿಂದ ಹೊರಬರುವ ಪ್ರೌಢ ಪತಂಗವು ಏನನ್ನೂ ತಿನ್ನದೆ ಒಂದು ವಾರದವರೆಗೆ ಜೀವಂತವಾಗಿರುತ್ತದೆ. ಎಲೆಗಳ ಕೆಳಗೆ ಒಂದೇ ಬಾರಿ 4- 7 ಮೊಟ್ಟೆಗಳನ್ನಿಡುತ್ತದೆ. ನೋಡಲು ಆಕರ್ಷಕವಾಗಿರುವ ಮರಿಹುಳುಗಳು 25- 35 ದಿನಗಳಲ್ಲಿ ರೂಪಾಂತರ ಹೊಂದಿ ಕೋಶಾವಸ್ಥೆ ತಲುಪುತ್ತವೆ. ಎರಡು ವಾರ ಕೋಶಾವಸ್ಥೆಯಲ್ಲಿದ್ದು, ನಂತರ ಪ್ರೌಢ ಪತಂಗವಾಗಿ ಹೊರಬರುತ್ತದೆ. ಆಹಾರಕ್ಕಾಗಿ ವಾಲ್ನಟ್, ಸೇಬು, ಹಾಥಾರ್ನ, ಚೆರ್ರಿ, ವಿಲ್ಲೊ, ದಾಸವಾಳ ಮತ್ತು ಓಕ್ ಗಿಡಗಳನ್ನು ಅವಲಂಬಿಸಿದೆ. ಇವು ಭಾರತ ಸೇರಿದಂತೆ ಮೆಕ್ಸಿಕೊ, ಕೆನಡಾ, ಶ್ರೀಲಂಕಾಗಳಲ್ಲಿ ಕಂಡುಬರುತ್ತವೆ. ಕರ್ನಾಟಕದ ಪಶ್ಚಿಮಘಟ್ಟಗಳಲ್ಲಿ ಚಂದ್ರ ಪತಂಗದ ಸಂತತಿ ಹೇರಳ.
- ಚಿತ್ರ, ಲೇಖನ: ರಾಘವೇಂದ್ರ ಎಲಿಗಾರ
raghumite@gmail.com