

ಬಹುಶಃ ಅವತ್ತು ಅವರ ಮನೆಯ ಮುಂದೆ ಆ ಹಾವು ಕಾಣಿಸಿಕೊಳ್ಳದಿದ್ದರೆ ಅಥವಾ ಸುತ್ತಲಿನವರು ಅದನ್ನು ಹೊಡೆಯಲು ಮುಂದಾಗದಿದ್ದರೆ ಅಪರೂಪದ ಸರ್ಪ ಸ್ನೇಹಿಯೊಬ್ಬರು ಸಿಗುತ್ತಲೇ ಇರಲಿಲ್ಲವೇನೊ. ಇಡೀ ಕುಟುಂಬ ಸರ್ಪಗಳ ರಕ್ಷಣೆಗೆ ಪ್ರೇರಣೆ ಪಡೆಯುತ್ತಲೇ ಇರಲಿಲ್ಲವೇನೋ. ಮೊದಲಿನಿಂದಲೂ ಪ್ರಾಣಿ- ಪಕ್ಷಿಗಳ ಬಗ್ಗೆ ಅನುಕಂಪ ಇದ್ದ ಅವರಿಗೆ ಆ ಹಾವನ್ನು ಸಾಯಿಸಲು ಇಷ್ಟವಿರಲಿಲ್ಲ. ಕೊನೆಗೆ ಅವರೇ ಖುದ್ದು ನಿಂತು ಹಾವನ್ನು ಹಿಡಿದು ಕಾಡಿಗೆ ಬಿಟ್ಟು ಬಂದರು. ಅಲ್ಲಿಂದ ಸ್ಫೂರ್ತಿ ಗೊಂಡು ಹಾವು ಹಿಡಿಯುವುದನ್ನೇ ಹವ್ಯಾಸ ಮಾಡಿಕೊಂಡರು.
ಕಾಶೀನಾಥ ನೆಗಳೂರಮಠ್ ಮೂಲತಃ ಹಾವೇರಿ ಜಿಲ್ಲೆಯ ಗುತ್ತಲದವರು. ಬಳ್ಳಾರಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಂಗರಚನಾ ಶಾಸ್ತ್ರ ವಿಭಾಗದ ಕಲಾ ಮತ್ತು ಛಾಯಾಗ್ರಹಣ ಘಟಕದ ಮಾಡೆಲರ್ ಹುದ್ದೆಗೆ ನೇಮಕಗೊಂಡವರು. ಐದು ವರ್ಷಗಳಿಂದ ಅವರ ಇಡೀ ಕುಟುಂಬ ಉರಗ ರಕ್ಷಣೆಯಲ್ಲಿ ತೊಡಗಿರುವುದು ವಿಶೇಷ.
ಹಾಗೆಂದು ಅವರಿಗೇನೂ ಉರಗ ಸಂರಕ್ಷಣೆಯ ಶಾಸ್ತ್ರೀಯ ಜ್ಞಾನವಿರಲಿಲ್ಲ. ಯಾವತ್ತು ಮನೆಯ ಮುಂದೆ ಅನಿರೀಕ್ಷಿತ ಅತಿಥಿಯಾಗಿ ಬಂದಿದ್ದ ಹಾವನ್ನು ಸಂರಕ್ಷಿಸಿದರೋ ಅಲ್ಲಿಂದ ಆ ಬಗ್ಗೆ ಆಸಕ್ತಿ ಮೊಳೆಯಿತು.ನ್ಯಾಷನಲ್ ಜಿಯಾಗ್ರಾಫಿಕ್ ಚಾನೆಲ್ ನೋಡುತ್ತ ಹಾವುಗಳನ್ನು ಹಿಡಿಯುವ ತಂತ್ರ ರೂಢಿಸಿಕೊಂಡರು. ಈ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿ ನೀಡಿದವರು ಪುತ್ತೂರಿನ ರವೀಂದ್ರ ಐತಾಳ್.
ಹಾವುಗಳನ್ನು ಹಿಡಿಯುವುದು ಸುಲಭವಲ್ಲ. ಆ ಕಾರ್ಯದಲ್ಲಿ ಸಾಕಷ್ಟು ಎಚ್ಚರದಿಂದ ತೊಡಗಬೇಕು. ಒಂದು ರೀತಿಯಲ್ಲಿ ಸಾವಿನೊಂದಿಗೆ ಸೆಣಸಾಟ. ಆದರೆ ಧೈರ್ಯ ಮತ್ತು ಕಾಳಜಿ ನೆಗಳೂರಮಠ್ರಿಂದ ಅಪರೂಪದ ಕೆಲಸ ಮಾಡಿಸಿದೆ.
ನೆಗಳೂರಮಠ್ ಹೇಳುವ ಪ್ರಕಾರ ಹಾವು ಕಂಡ ತಕ್ಷಣ ಶಬ್ದ ಮಾಡಬಾರದು. ಸ್ವಲ್ಪ ಶಬ್ದವಾದರೂ ಸಾಕು ಅದು ಕಣ್ಮರೆಯಾಗುತ್ತದೆ. ಹಾವಿನ ಮುಖ ಹಿಡಿಯುವತ್ತ ಗಮನಹರಿಸಬೇಕು. ಇದಕ್ಕೆ ಸ್ಟಿಕ್ (ಹಾವು ಹಿಡಿಯುವ ವಿಶೇಷ ಕೋಲು) ಅಗತ್ಯ. ವಿಶೇಷವಾಗಿ ನಾಗರಹಾವು ಇದ್ದರೆ ಸ್ಟಿಕ್ ಬಳಸಲೇಬೇಕು. ಇಲ್ಲದಿದ್ದರೆ ಕಡಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಕಾಡು ನಾಶವಾಗಿ ಅನೇಕ ಪ್ರಾಣಿಗಳು ನಾಡನ್ನು ಪ್ರವೇಶಿಸುತ್ತಿವೆ. ಹಾಗಾಗಿ ಹಾವಿನ ಸಂತತಿಯು ಕಡಿಮೆಯಾಗುತ್ತಿದೆ. ಪರಿಸರ ಸಮತೋಲನೆಗೆ ಹಾವುಗಳ ರಕ್ಷಣೆ ಅಗತ್ಯ. ಹಾಗಂತ ಎಲ್ಲರೂ ಹಾವನ್ನು ಹಿಡಿಯಲು ಸಾಧ್ಯವಿಲ್ಲ. ಅದನ್ನು ಕರಗತ ಮಾಡಿಕೊಂಡವರಿಗಷ್ಟೆ ಸಾಧ್ಯ.
ಇವರು ಹಾವು ಹಿಡಿಯುವುದನ್ನು ನೋಡಿ ಪತ್ನಿ ಶಶಿಕಲಾ, ಮಕ್ಕಳಾದ 11 ವರ್ಷದ ನಿರಂಜನ, 7 ವರ್ಷದ ಮಹೇಶ್ವರಿ ಸಹ ಹಾವು ಹಿಡಿಯುವುದನ್ನು ಕರಗತ ಮಾಡಿಕೊಂಡಿದ್ದಾರೆ. ಬಳ್ಳಾರಿ ಸುತ್ತಮುತ್ತ ಎಲ್ಲಿಯೇ ಹಾವು ಬಂದಿದೆ ಎಂದರೆ ಸಾಕು ನೆಗಳೂರುಮಠ್ರು ಹಾಜರ್. ಹೀಗಾಗಿ ಜನರು ಮಾತ್ರವಲ್ಲ ಹಾವುಗಳು ಸೇಫಾಗುತ್ತವೆ. ನೆಗಳೂರಮಠ್ ಅವರು ಊರಿನಲ್ಲಿ ಇಲ್ಲದಿದ್ದರೆ ಹೆಂಡತಿ, ಮಕ್ಕಳೇ ಸ್ಕೂಟರ್ ಏರಿ ಹಾವು ಇದ್ದ ಪ್ರದೇಶಕ್ಕೆ ಹಾಜರಾಗುತ್ತಾರೆ.
ಇದುವರೆಗೂ ನೂರಾರು ಹಾವುಗಳನ್ನು ಹಿಡಿದಿದ್ದಾರೆ. ಅದರಲ್ಲಿ ನಾಗರಹಾವು, ವೈಪರ್, ಕೇರೆಹಾವು, ಕಟ್ಟಹಾವು, ಸ್ಯಾಂಡ್ಬೋವಾ, ನೀರುಹಾವು, ಹಸಿರುಹಾವು, ಕ್ಯಾಟ್ಟ್ರಿಂಕೆಟ್... ಇನ್ನು ಅನೇಕ ರೀತಿಯ ಹಾವುಗಳು ಇವರಿಂದ ಸೇಫ್ ಆಗಿ ಕಾಡು ಸೇರಿವೆ. ಹಾವುಗಳನ್ನು ಹಿಡಿದ ತಕ್ಷಣ ನೇರವಾಗಿ ಕಾಡಿಗೆ ಬಿಡುವುದಿಲ್ಲ. ಅಲ್ಲಿನ ಜನರನ್ನು ಸೇರಿಸಿ ಹಾವುಗಳ ಬಗ್ಗೆ ವಿವರಿಸಿಜಾಗೃತಿ ಮೂಡಿಸುತ್ತಾರೆ. ನೆರೆದ ಜನರಿಗೆ ಹಾವನ್ನು ಮುಟ್ಟಿಸಿ ಯಾವ ಹಾವು ವಿಷಪೂರಿತ, ಯಾವುದು ವಿಷಪೂರಿತವಲ್ಲ ಎಂಬುದನ್ನು ತಿಳಿಸಿಕೊಡುತ್ತಾರೆ. ಜನರು ಹಾವು ಕಚ್ಚಿ, ಅದರ ವಿಷದಿಂದ ಸಾಯುವುದಕ್ಕಿಂತ ಹೆದರಿ ಸಾಯುವುದೇ ಹೆಚ್ಚು ಎನ್ನುತ್ತಾರವರು.
ಹಾವು ರೈತರ ಒಡನಾಡಿ. ಹಾವುಗಳ ನಾಶ ನಮ್ಮ ಆಹಾರ ಸರಪಳಿಗೆ ಸಂಚಕಾರ ತರಲಿದೆ. ಸಲ್ಲದ ಮೂಢನಂಬಿಕೆ ಮತ್ತು ದೈವಕಲ್ಪನೆಗಿಂತ ಹಾವುಗಳ ರಕ್ಷಣೆಯಲ್ಲಿ ತೊಡಗುವುದು ಇಂದು ತುರ್ತು ಅಗತ್ಯವಿದೆ. ಕಾನೂನು ದೃಷ್ಟಿಯಲ್ಲಿ ಹಾವು ಕೊಲ್ಲುವುದು ಅಪರಾಧ ಎನ್ನುತ್ತಾರೆ ನೆಗಳೂರುಮಠ್. ಅವರ ಸಂಪರ್ಕ ಸಂಖ್ಯೆ: 9844227806.
ಕಲೆಗಾರ
ಛಾಯಾಗ್ರಹಣ ವೃತ್ತಿಯ ಜೊತೆಗೆ ಹವ್ಯಾಸವೂ ಹೌದು. ಬಿಡುವನ್ನು ಕಾಡು ಮೇಡುಗಳಲ್ಲೇ ಕಳೆಯುವ ಅವರು ಪ್ರಕೃತಿಯ ಸುಂದರ ತುಣಕುಗಳನ್ನು, ಪ್ರಾಣಿ ಪಕ್ಷಿಗಳ ವಿಭಿನ್ನ ಹಾವ ಭಾವಗಳನ್ನು ತಮ್ಮ ಕ್ಯಾಮೆರ ಕಣ್ಣಿನಿಂದ ಸೆರೆಹಿಡಿದಿದ್ದಾರೆ. ಚಿತ್ರ ಕಲೆಯಲ್ಲಿಯೂ ಛಾಪು ಮೂಡಿಸಿರುವ ಇವರ ಕಲಾತ್ಮಕತೆ ಮೆಚ್ಚುವಂತಹದು. ಏಕವ್ಯಕ್ತಿ ಕಲಾ ಪ್ರದರ್ಶನ, ಸಮೂಹ ಪ್ರದರ್ಶನ, ಪ್ರಾತ್ಯಕ್ಷಿಕೆ ಹಾಗೂ ನೂರಾರು ಕಲಾ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ.
-ಚಿತ್ರ, ಲೇಖನ: ಟಿ. ಶಿವಕುಮಾರ್