ಭಾರತ ಭಾರತೀಯರಿಗೇ ಅಪರಿಚಿತ. ಮಾತೃಭೂಮಿಯ ಚರಿತ್ರೆಯನ್ನು ಅರಿಯದವನು ದೇಶಭಕ್ತನಾಗಲಾರ. ಸನಾತನ ಸಂಸ್ಕೃತಿಯೊಂದಿಗೆ ಭವ್ಯ ಭಾರತದ ಚರಿತ್ರೆಯನ್ನು ರಕ್ತಗತ ಮಾಡಿಕೊಳ್ಳುವುದು ಪ್ರತಿ ಭಾರತೀಯನ ಆದ್ಯ ಕರ್ತವ್ಯವಾಗಬೇಕಾಗಿದೆ. ಪರಕೀಯ ವಿರಚಿತ ಭಾರತದ ಇತಿಹಾಸಗಳನ್ನು ತಳ್ಳಿಹಾಕಿ ಪಾಶ್ಚಾತ್ಯ ಇತಿಹಾಸ ಸಂಶೋಧನಾ ವಿಧಾನಗಳನ್ನು ಅಳವಡಿಸಿಕೊಂಡು ಭಾರತದ ಚರಿತ್ರೆಯನ್ನು ಭಾರತೀಯರೇ ಪುನರೂಪಿಸುವ ಅಗತ್ಯವನ್ನು ಸ್ವಾಮಿ ವಿವೇಕಾನಂದರು ಶತಮಾನಗಳ ಹಿಂದೆಯೇ ಮನಗಂಡಿದ್ದರು. ಅವರ ಧ್ಯೇಯ ಗಳನ್ನು ಅರಿತು ಕ್ರಿಯಾಶೀಲರಾಗಿರಿ.
'ಸಂಸ್ಕೃತ ಭಾಷೆಯನ್ನು ಪಾಶ್ಚಾತ್ಯರ ವೈಜ್ಞಾನಿಕ ವಿಧಾನಗಳನ್ನು ಶ್ರಮವಹಿಸಿ ಅಧ್ಯಯನ ಮಾಡಿ. ಆಗ ಭಾರತದ ಇತಿಹಾಸವನ್ನು ವೈಜ್ಞಾನಿಕ ತಳಹದಿಯ ಮೇಲೆ ನಿಲ್ಲಿಸಲು ಸಾಧ್ಯವಾಗುವಂತಹ ಕಾಲವೊಂದು ಬರುತ್ತದೆ. ಈಗಿರುವ ಭಾರತದ ಇತಿಹಾಸವೆಲ್ಲ ಅವ್ಯವಸ್ಥಿತ. ನಮ್ಮ ಧರ್ಮ, ಸಂಸ್ಕೃತಿ-ತತ್ವಗಳನ್ನು, ಆಚಾರ, ವಿಚಾರ, ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳಲಾರದ ವಿದೇಶೀಯರು ಪೂರ್ವಾಗ್ರಹಪೀಡಿತವಲ್ಲದ ಪ್ರಾಮಾಣಿಕ, ನಿಷ್ಟಕ್ಷಪಾತ ಚರಿತ್ರೆಯನ್ನು ಬರೆಯಲು ಹೇಗೆ ಸಾಧ್ಯ?'
ಭಾರತದ ಇತಿಹಾಸವನ್ನು ಬರೆಯಬೇಕಾದವರು ಭಾರತೀಯರು. ಆದ್ದರಿಂದ ಕಾಲಗರ್ಭದಲ್ಲಿ ಕಣ್ಮರೆಯಾಗಿಹೋಗಿರುವ ನಮ್ಮ ಅಮೂಲ್ಯ ಸಂಪತ್ತನ್ನು ಮರಳಿ ಪಡೆಯುವ ಕಾರ್ಯಕ್ಕೆ ಕೈಹಾಕಿ. ಭಾರತದ ವೈಭವವನ್ನು ಜನಮನದಲ್ಲಿ ಪುನರ್ಸ್ಥಾಪಿಸುವವರೆಗೂ ನಿಮ್ಮ ಕಾರ್ಯವನ್ನು ನಿಲ್ಲಿಸಬೇಡಿ.
= ಆನಂದ ಎಸ್.ಎನ್.