ಆಸ್ತಿಪಂಜರ

ಮದುವೆ ಆಗದೆ, ಸಂಪಾದಿಸಿದ ಹಣದಲ್ಲಿ ನೆಟ್ಟಗೆ ಊಟವೂ ಮಾಡದೆ ಕೂಡಿಟ್ಟಿದ್ದ ಅಷ್ಟೂ ಸಂಪತ್ತನ್ನು ವೃತ್ತಿಪರ ಕಳ್ಳ ಹೊತ್ತೊಯ್ದ. ಆದರೆ ಅದು ಅವನಿಗೂ ಲಭಿಸಲಿಲ್ಲ ಕೂಡಿಟ್ಟವರಿಗೂ ದೊರೆಯಲಿಲ್ಲ. ಹಾಗಾದರೆ ಆಸಂಪತ್ತು ಏನಾಯಿತು?
ಆಸ್ತಿಪಂಜರ
Updated on: 

ಬೆಂಗಳೂರು ಇಂದು ಬೃಹತ್ ನಗರ. ಇಲ್ಲಿ ಮಾಧ್ಯಮಗಳ ಪ್ರಭಾವ ಅಪಾರ. ಅಪಾರಾಧಗಳೂ ಇಲ್ಲಿ ಸಾಗರ.  ಎಲ್ಲವೂ ಸರಿ... ಒಂದು ಭಾರಿ ನೀವು 25 ವರ್ಷಗಳ ಹಿಂದೆ ಕಣ್ಣಾಡಿಸಿ. ಅಂದು ಇದ್ದ ಮಾಧ್ಯಮ ದೂರದರ್ಶನ ಮಾತ್ರ. ಬೆರಳೆಣಿಕೆ ಪತ್ರಿಕೆಗಳಿದ್ದರೂ ಅಪರಾಧ ವೈಭವೀಕರಣ ಇರಲಿಲ್ಲ. ಇದ್ದ ಏಕೈಕ ವಾರಪತ್ರಿಕೆ ಅಪರಾಧ ಜಗತ್ತನ್ನು ಅನಾವರಣಗೊಳಿಸುತ್ತಿತ್ತು. ಆದರೆ, ಪೊಲೀಸ್ ವ್ಯವಸ್ಥೆ ಮಾತ್ರ ಇಂದಿನಂತೆ ಅಂದೂ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿತ್ತು.
ಅದು ಜಯನಗರದ 4ನೇ ಬ್ಲಾಕ್. ಜಯನಗರದಿಂದ ತಿಲಕ್‌ನಗರ ಪೊಲೀಸ್ ಠಾಣೆಗೆ ಹೋಗುವ ಮಾರ್ಗದಲ್ಲಿ ಈಗ ಐನಾಕ್ಸ್ ಎದ್ದುನಿಂತಿದೆ. ಅದರ ಪಕ್ಕದಲ್ಲೇ ಆಗೊಂದು ಬೃಹತ್ ಮನೆಯಿತ್ತು. ಅದು 100 x100 ಅಳತೆಯಲ್ಲಿದ್ದ ಒಂದು ಬೃಹತ್ ತೊಟ್ಟಿ ಮನೆ. ಮನೆಗೆ ಹೊಂದಿ

ಕೊಂಡಂತೆ 6 ಮಳಿಗೆಗಳನ್ನು ನಿರ್ಮಿಸಲಾಗಿತ್ತು. ಅವುಗಳ ಬಾಡಿಗೆ ಆ ಟೈಮಲ್ಲಿ ಭರ್ತಿ 30 ಸಾವಿರ ರು.!
ಈ ಬರೋಬ್ಬರಿ ಮನೆಯಲ್ಲಿ ವಾಸವಿದ್ದವರು 4 ಜನ. ಮೂವರು ಹೆಂಗಸರು, ಒಬ್ಬ ಗಂಡಸು... ಯಾರಿಗೂ ಮದುವೆ ಆಗಿರಲಿಲ್ಲ! ಅವರ ಸಂಬಂಧ ಎಂದರೆ ಮೂರು ಜನ ಅಕ್ಕಂದಿರ ಏಕೈಕ ತಮ್ಮ ಆತ. ಇವರು ಎಷ್ಟು ಜಿಪುಣರೆಂದರೆ. ಬೆಳಗ್ಗೆ ಎರಡು ಪ್ಲೇಟ್ ಇಡ್ಲಿಯನ್ನು ನಾಲ್ಕೂ ಜನ ಹಂಚಿ ತಿನ್ನುತ್ತಿದ್ದರು. ಮಧ್ಯಾಹ್ನದ ಸ್ಥಿತಿಯೂ ಅಷ್ಟೇ. ಬ್ರಹ್ಮಚಾರಿಗಳಾಗಿದ್ದ ಇವರಿಗೆ ಮುಂದಿನ ವಾರಸುದಾರರು ಎಂಬವರು ಯಾರೂ ಇಲ್ಲದಿದ್ದರೂ ಬರುತ್ತಿದ್ದ ಬಾಡಿಗೆ, ಮನೆಯಲ್ಲಿದ್ದ ಅಪಾರ ಹಣ, ಆಭರಣಗಳನ್ನು ಖರ್ಚು ಮಾಡದೆ ಏಕೆ ಜಿಪುಣತನ ತೋರಿಸುತ್ತಿದ್ದರೆಂಬುದೇ ಕಗ್ಗಂಟಿನ ವಿಚಾರ.
ಗೋಡೆಗಳೆಲ್ಲ ಗಬ್ಬೆದ್ದು ಹೋಗಿದ್ದರಿಂದ, ಮನೆಗೆ ಸುಣ್ಣ ಬಳಿಯುವ ಮನಸ್ಸಾಯಿತು ಇವರಿಗೆ. ಕಡಿಮೆ ದರದಲ್ಲಿ ಬಳಿಯುವ ಪೇಂಟರ್ ಯಾರಾದರೂ ಸಿಗುತ್ತಾರಾ ಎಂದು ಹುಡುಕತೊಡಗಿದರು. ಯಾರನ್ನೇ ಕೇಳಿದರೂ,ಅಂದಿನ ಮಾರುಕಟ್ಟೆ ಬೆಲೆಗನುಗುಣವಾಗಿ ರೇಟು ಹೇಳುತ್ತಿದ್ದರು. ಇದು ಅವರ ಪಾಲಿಗೆ ಅತಿ ಹೆಚ್ಚು. ಹೀಗೆ ಮೂರು ತಿಂಗಳು ಕಳೆದಿತ್ತು. ಈ ವೇಳೆ ಅವರ ನಡವಳಿಕೆ ಗಮನಿಸಿದ್ದ ವ್ಯಕ್ತಿಯೊಬ್ಬ ಬಂದು ಅತೀ ಕಡಿಮೆ ದರದಲ್ಲಿ ತಾನು ಮನೆಗೆ ಸುಣ್ಣ ಬಳಿದು ಕೊಡುವುದಾಗಿ ಕೇಳಿದ. ಈತನ ಮಾತಿನಿಂದ ಸಂತೋಷಗೊಂಡ ಮನೆಯವರು ಒಪ್ಪಿಗೆ ಸೂಚಿಸಿದರು. ಗುತ್ತಿಗೆ ಪಡೆದ ಆಸಾಮಿ ಒಂದೆರಡು ದಿನದಲ್ಲಿ ಸುಣ್ಣ ಬಳಿಯಲು ಬೇಕಾದ ಪರಿಕರಗಳೊಂದಿಗೆ ಮನೆಗೆ ಆಗಮಿಸಿದ. ತನ್ನೊಂದಿಗೆ ಇನ್ನೂ ಮೂವರು ಆಳುಗಳನ್ನು ಕರೆತಂದಿದ್ದ. ಸ್ವಲ್ಪ ಹಣ ಅಡ್ವಾನ್ಸ್ ಪಡೆದು, ಸುಣ್ಣ ಹಚ್ಚುವ ಕಾರ್ಯ ಆರಂಭಿಸಿದರು.
ಮನೆಯಲ್ಲಿದ್ದ ಜಿಪುಣ ಸದಸ್ಯರ ವಯಸ್ಸು 50-60ರ ಆಸುಪಾಸು. ಇವರ ನಡಿಗೆ, ಹಾವ ಭಾವ ಹಳೇ ಕಾಲದವರ ಸ್ಥಿತಿಯಲ್ಲಿತ್ತು. ಜೊತೆಗೆ ಇವರ ಜಿಪುಣತನ ಕಂಡು ಕಡಿಮೆ ಬೆಲೆಗೆ ಗುತ್ತಿಗೆ ಪಡೆಯಲು ಗುತ್ತಿಗೆದಾರನಿಗೆ ಇವರ ಮೇಲೆ ಸಿಂಪತಿಯಂತೂ ಖಂಡಿತಾ ಕಾರಣವಲ್ಲ. ಆತನ ವ್ಯೂಹವೇ ಬೇರೆ ಇತ್ತು.
           
ಆಗಿನ ಕಾಲದಲ್ಲಿಯೂ ಜಯನಗರ ಪ್ರತಿಷ್ಠಿತರು ವಾಸಿಸುವ ಸ್ಥಳ. ಅಲ್ಲಿನ ಬಹುತೇಕರು ಸ್ವಂತ ಮನೆ ಮತ್ತು ಸ್ವಂತ ಕಾರು ಹೊಂದಿದ್ದವರೇ ಆಗಿದ್ದರು. ಅಲ್ಲಿನ ನಿವೇಶನಗಳ ಬೆಲೆ ಅಂದೂ ಗಗನದಲ್ಲೇ ಇತ್ತು. ಇಂಥ ಪ್ರತಿಷ್ಠಿತ ಸ್ಥಳದಲ್ಲಿ ಕಿತ್ತು ಹೋದಂತಿದ್ದ ತೊಟ್ಟಿ ಮನೆ ಬಗ್ಗೆ ಮತ್ತು ಅದರಲ್ಲಿದ್ದ ಜಿಪುಣಾಸಿ ಮುದಕ, ಮುದಕಿಯರ ಬಗ್ಗೆ ಆ ಏರಿಯಾದ ಎಲ್ಲರಿಗೂ ಒಂದು ರೀತಿಯ ತಿರಸ್ಕಾರ ಭಾವವಿತ್ತು. ಹೀಗಾಗಿ ಯಾರೂ ಅವರನ್ನು ಮಾತನಾಡಿಸುತ್ತಿರಲಿಲ್ಲ. ಬದಲಿಗೆ ಇವರೇ ಯಾರನ್ನೂ ಮಾತನಾಡಿಸುತ್ತಿರಲಿಲ್ಲ ಎಂದರೂ ತಪ್ಪಾಗದು.
ಇಂಥ ಪ್ರಸಿದ್ಧಿ ಪಡೆದಿದ್ದ ತೊಟ್ಟಿ ಮನೆ ಒಂದು ದಿನ ಏಕಾಏಕಿ ಬಾಗಿಲು ಮುಚ್ಚಿತ್ತು. ಮೂರು ದಿನಗಳಾದರೂ ಬಾಗಿಲು ತೆಗೆದಿಲ್ಲ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ ನಾಲ್ಕನೇ ದಿನ ಆ ಮನೆಯಿಂದ ತಡೆಯಲು ಅಸಾಧ್ಯವಾದ ವಾಸನೆ ಹೊರಬರುತ್ತಿತ್ತು. ಇದನ್ನು ಕಂಡ ಸುತ್ತಮುತ್ತ ಜನ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು.
                 
ಆ ಮನೆಗಿದ್ದಿದ್ದು ಹಳೇಕಾಲದ ಬಾಗಿಲು. ದೊಡ್ಡ ಗಾತ್ರದ ಬೀಗ ಹೊರಗಿನಿಂದ ಹಾಕಲಾಗಿದೆ. ಗಾಢ ಪರೀಕ್ಷೆಗಿಳಿದ ಪೊಲೀಸರಿಗೆ ಮನೆಯ ಮೇಲ್ಭಾಗದಲ್ಲಿದ್ದ ಹೊಗೆ ಕೊಳವೆಯಲ್ಲಿ ನೊಣಗಳು ಓಡಾಡುತ್ತಿರುವುದು ಕಾಣಿಸಿತು. ಅವು ಜೇನ್ನೊಣಗಳಂತೆ ವೇಗವಾಗಿ ಓಡಾಡುತ್ತಿದ್ದವು. ಗ್ಯಾಸ್‌ನಿಂದ ಖರ್ಚು ಹೆಚ್ಚು, ಕಟ್ಟಿಗೆ ಒಲೆಯೇ ಸಾಕು ಎಂದು ನಿರ್ಧರಿಸಿದ್ದ ಆ ಮನೆಗೆ ಈ ಹೊಗೆ ಕೊಳವೆಯೇ ಸಾಕ್ಷಿ.
ಸುತ್ತಮುತ್ತಲ ಮನೆಗಳ ನಾಲ್ವರನ್ನು ಪಂಚನಾಮೆಗಾಗಿ ಕರೆಸಿದ ಪೊಲೀಸರು ಮನೆಯ ಬೀಗ ಒಡೆದು ಒಳಗೆ ಪ್ರವೇಶಿಸಿದರು. ಅವರಿಗೆ ಅಲ್ಲೊಂದು ಶಾಕ್ ಕಾದಿತ್ತು. ಮನೆಯ ಒಲೆಯ ಮೇಲೆ ಮುದಿ ವಯಸ್ಸಿನ ಆ ನಾಲ್ಕು ಸದಸ್ಯರ ಹೆಣಗಳು ಕೊಳೆತ ರೀತಿಯಲ್ಲಿ ಕಂಡವು. ಹೆಣಗಳು ಕೊಳೆತು ಹುಳ ಆಗಿ, ನೊಣಗಳು ಹೊಗೆ ಕೊಳವೆ ಮೂಲಕ ಓಡಾಡುತ್ತಿದ್ದವು. ಹರಿತ ಆಯುಧದಿಂದ ತಿವಿದು ಸಾಯಿಸಿರುವುದು ಮೇಲ್ನೋಟಕ್ಕೆ ಕಾಣುತ್ತಿತ್ತು.

ಬೀರುವಿನಲ್ಲಿ ಬೀಗದ ಕೈ ನೇತಾಡುತ್ತಿತ್ತು. ಒಳಗೆ ಮಾತ್ರ ಯಾವುದೇ ಹಣ, ಆಭರಣಗಳಿರಲಿಲ್ಲ.

ಕೊಲೆ ಮಾಡಿದವರ ಪತ್ತೆ ಇರಲಿ, ಕೊಲೆಯಾದವರ ಬಗ್ಗೆ ವಿಚಾರಿಸಲೂ ಪೊಲೀಸರಿಗೆ ಸಾಧ್ಯವಾಗಲಿಲ್ಲ. ಏಕೆಂದರೆ ಆ ವಯಸ್ಸಾದ ನಾಲ್ಕು ಮಂದಿಗೆ ನೆಂಟರಿಷ್ಟರು ಯಾರೂ ಇರಲಿಲ್ಲ. ಇನ್ನು ಮನೆಯಲ್ಲಿ ಏನೇನು ಕಳುವಾಗಿದೆ ಎಂದು ಹೇಳುವವರೂ ಇಲ್ಲ. ಇದೊಂದು ಅನಾಮಿಕ ಪ್ರಕರಣ ಆದರೂ ಪೊಲೀಸರು ತಮ್ಮ ಕರ್ತವ್ಯವನ್ನು ನಿರ್ವಹಿಸಲೇಬೇಕಿತ್ತು. ಹೀಗಾಗಿ ಪತ್ರಿಕೆಗಳಲ್ಲಿ ಒಂದು ಪ್ರಕಟಣೆ ನೀಡಿದರು. ಅದರ ಸಾರಾಂಶವೆಂದರೆ, 'ಇಂಥ ವಿಳಾಸದಲ್ಲಿ ವಾಸವಿದ್ದ ನಾಲ್ವರು ಕೊಲೆಯಾಗಿದ್ದು ಇವರ ವಾರಸುದಾರರು ಇದ್ದಲ್ಲಿ ಜಯನಗರ ಠಾಣೆಗೆ ಸಂಪರ್ಕಿಸಿ' ಎಂದಿತ್ತು.

ಒಂದು ವಾರದ ನಂತರ ಮಧ್ಯವಸ್ಸಿನ ವ್ಯಕ್ತಿ ಠಾಣೆಗೆ ಬಂದರು. ತಾವು ಮೃತರ ದೂರದ ಸಂಬಂಧಿಯೆಂದು ಅವರನ್ನು ಕೊಲೆ ಮಾಡಿದ ಪಾಪಿಗಳನ್ನು ಎಷ್ಟೇ ಕಷ್ಟವಾದರೂ ಹಿಡಿದು ಶಿಕ್ಷೆಯಾಗುವಂತೆ ಮಾಡಿ ಎಂದು ವಿನಂತಿಸಿದರು. ಇವರ ಮಾತು ಕೇಳಿದ ಇನ್ಸ್‌ಪೆಕ್ಟರ್ 'ನೀವು ಎಲ್ಲಿದ್ದೀರಿ?' ಎಂದು ಪ್ರಶ್ನಿಸಿದರು. 'ನಾನ ಇರೋದು ದುಬೈನಲ್ಲಿ. ಪತ್ರಿಕೆಯಲ್ಲಿ ಬಂದ ಜಾಹೀರಾತು ನೋಡಿ ನನ್ನ ಗೆಳೆಯರು ತಿಳಿಸಿದರು' ಎಂದು ಹೇಳಿದರು.
ಇವರು ನೀಡಿದ ವಿಳಾಸಕ್ಕೆ ಫೋನಾಯಿಸಿದ ಪೊಲೀಸರು ಈತ ಹೇಳಿದ್ದು ಸತ್ಯ ಎಂಬುದನ್ನು ಮತ್ತು ಕೊಲೆಯಾದ ದಿನ ಈತ ದುಬೈನಲ್ಲೇ ಇದ್ದರು ಎಂಬ ಅಂಶಗಳನ್ನು ಖಚಿತಪಡಿಸಿಕೊಂಡ ನಂತರ ಆತ ಕೊಲೆಗಾರನಲ್ಲ ಎಂಬ ನಿರ್ಧಾರಕ್ಕೆ ಬಂದರು. ಬಂದಿದ್ದ ವ್ಯಕ್ತಿ ತಾವು ಹೆಚ್ಚು ದಿನ ಭಾರತದಲ್ಲಿರಲು ಸಾಧ್ಯವಿಲ್ಲವೆಂದು ಆರೋಪಿಗಳು ಸಿಕ್ಕಿದ ಕೂಡಲೇ ತಮಗೆ ತಿಳಿಸುವಂತೆ ಹೇಳಿ ಅಲ್ಲಿಂದ ಹೊರಟು ಹೋದರು. ಪೊಲೀಸರಿಗೆ ಮತ್ತೆ ತಲೆನೋವು. ವಾರಸುದಾರರಿಲ್ಲದ ಪ್ರಕರಣ ಎಂದು ಮುಚ್ಚುವ ಹಂತದಲ್ಲಿದ್ದ ಕೇಸಿಗೆ ಇವರು ಅಡ್ಡಗಾಲು ಹಾಕಿದರಲ್ಲ! ಇನ್ನು ತನಿಖೆ ನಡೆಯಲೇ ಬೇಕು...

ಅಪರಾಧ ನಡೆದ ರೀತಿಯಿಂದ ಅಪಾರಾಧಿ ಯಾರಿರಬಹುದು ಎಂಬುದನ್ನು ಅನುಭವಿ ಅಧಿಕಾರಿಗಳು ಕಂಡುಹಿಡಿಯುತ್ತಾರೆ. ಇದಕ್ಕೆ ಪೊಲೀಸ್ ಭಾಷೆಯಲ್ಲಿ 'ಎಂಒ' ಎನ್ನಲಾಗುತ್ತದೆ. ಈ ಪ್ರಕರಣವೂ ಒಬ್ಬರ ಮೇಲೆ ಅನುಮಾನ ಮೂಡಿಸಿತ್ತು. ಆದರೆ ಅನುಮಾನದ ವ್ಯಕ್ತಿ ಕಳೆದ ಒಂದು ವರ್ಷದಿಂದ ಬೆಂಗಳೂರಿನಲ್ಲಿಲ್ಲ ಎಂದು ಮಾಹಿತಿಗಳು ಸಿಕ್ಕವು. ಅದೊಂದು ದಿನ ಹೊಟ್ಟೆ ತುಂಬಾ ಕುಡಿದಿದ್ದ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಕಂಡು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಅವನನ್ನು ಠಾಣೆಗೆ ಹಿಡಿದು ತಂದರು. ಅವನ ಅಮಲು ಇಳಿದ ನಂತರ ಸ್ವಲ್ಪ ರಿಪೇರಿ ಮಾಡಿದರು. ನೋಡಿ, ಆಗ ಹೊರ ಬಂದಿತ್ತು ಸತ್ಯ!

ಪೊಲೀಸರು ಅನುಮಾನಿಸಿದ ವೃತ್ತಿಪರ ಕಳ್ಳನೇ ಈ ಪ್ರಕರಣದ ಪ್ರಮುಖ ರೂವಾರಿ. ಆದರೆ ಆತ ಕೊಯಮತ್ತೂರಿನಲ್ಲಿದ್ದಾನೆ ಎಂಬ ಅಂಶ ಹಿಡಿದು ತಂದ ಆಸಾಮಿಯಿಂದ ತಿಳಿದುಬಂದಿತ್ತು. ಉಳಿದ ಅಂಶಗಳನ್ನು ಪೊಲೀಸರು ಶೇಖರಿಸಿ ಕೂಡಲೇ ಆರೋಪಿಯ ಬಂಧನಕ್ಕೆ ವ್ಯೂಹ ರಚಿಸಿದರು. ಅದೊಂದು ದಿನ ತಮಿಳುನಾಡಿಗೆ ಪೊಲೀಸರ ತಂಡ ಪ್ರಯಾಣ ಬೆಳೆಸಿತು.
ಆರೋಪಿಯ ವಿಳಾಸ ಹಿಂಬಾಲಿಸಿದ ಪೊಲೀಸರಿಗೆ ಶಾಕ್ ಬಡಿದಂತಾಗಿತ್ತು. ಕಾರಣ, ಅಲ್ಲಿ ಅರಮನೆಯಂಥ ಮನೆಯ ನಿರ್ಮಾಣವಾಗುತ್ತಿತ್ತು. ಆ ಕಾಲದಲ್ಲಿಯೇ ಕೋಟ್ಯಂತರ ರುಪಾಯಿ ವೆಚ್ಚದ ಮನೆ ನಿರ್ಮಿಸುತ್ತಿದ್ದ ಪಳನಿ. ಈ ಪಳನಿಯೇ ಪ್ರಕರಣದ ಪ್ರಮುಖ ಆರೋಪಿ. ಈತನಿಗೆ ತಮಿಳುನಾಡು ಸರ್ಕಾರದ ಸಚಿವರು, ಶಾಸಕರ ಬೆಂಬಲವಿದೆ ಎಂಬ ಅಂಶ ಪೊಲೀಸರಿಗೆ ತಿಳಿಯಿತು. ಆದರೂ, ಎದೆಗುಂದದೆ ಕಾರ್ಯಾಚರಣೆ ನಡೆಸಲು ಮುಂದಾದರು.
ಆದರೆ ರಾತ್ರಿ ಹನ್ನೊಂದು ಗಂಟೆಯಾದರೂ ಮಿಕ ಗೂಡಿಗೆ ಬರಲಿಲ್ಲ. ಇದರಿಂದ ಪಟ್ಟ ಶ್ರಮವೆಲ್ಲಾ ವೃಥಾ ಆಗುವುದೇ ಎಂಬ ಸಂಶಯ ಪೊಲೀಸರಿಗೆ. 12 ಗಂಟೆ ಸುಮಾರಿಗೆ ಪಾನಮತ್ತನಾದ ಆಸಾಮಿ ತನ್ನ ಕಾರಿನಲ್ಲಿ ಮನೆಗೆ ಆಗಮಿಸಿದ. ಕೂಡಲೇ ಪೊಲೀಸರು ಕಾರ್ಯಾಚರಣೆ ನಡೆಸಿ ಪಳನಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಕಳುವಾಗಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲು ಮನೆಯಲ್ಲಿ ಶೋಧ ನಡೆಸಿದ್ದ ಪೊಲೀಸರೇ ಆಶ್ಚರ್ಯ ಪಡುವಷ್ಟು ಸಂಪತ್ತು ಅಲ್ಲಿ ಸಿಕ್ಕಿತ್ತು. ಸುಮಾರು 35 ಲಕ್ಷ ರು., ಒಂದೂವರೆ ಕೆ.ಜಿ. ಚಿನ್ನ ಅಲ್ಲಿ ದೊರೆತವು. ಜೊತೆಗೆ ಮನೆ ನಿರ್ಮಾಣಕ್ಕೆಂದು ತೇಗ ಮತ್ತಿತರೆ ಬೆಲೆ ಬಾಳುವ ಸಾಮಾನುಗಳನ್ನು ತರಲಾಗಿತ್ತು. ಪೊಲೀಸರು ಅವನ್ನೆಲ್ಲ ವಶಪಡಿಸಿಕೊಂಡು, ಬೆಂಗಳೂರಿಗೆ ತಂದರು. ಮಾಲು ಸಮೇತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಸಾಕ್ಷಾಧಾರಗಳು ಬಲವಾಗಿದ್ದ ಕಾರಣ ಆರೋಪಿಗೆ ಶಿಕ್ಷೆಯೂ ಆಯಿತು.
ಆದರೆ ಪೊಲೀಸರು ವಶಪಡಿಸಿಕೊಂಡಿದ್ದ ಚಿನ್ನ, ನಗದು ಹಣ, ಮತ್ತು ಇತರೆ ವಸ್ತುಗಳನ್ನು ಪಡೆಯಲು ವಾರಸುದಾರರೇ ಇಲ್ಲವಾದರು. ಅಂದು ದುಬೈನಿಂದ ಬಂದು ಪೊಲೀಸರನ್ನು ಮಾತಾಡಿಸಿ ಹೋಗಿದ್ದ ಆಸಾಮಿ ಕೂಡಾ ನಂತರ ನಾಪತ್ತೆ. ಹಾಗಾಗಿ ಇಂದಿಗೂ ಅಪಾರ ಸಂಪತ್ತು ಪೊಲೀಸರ ವಶದಲ್ಲೇ ವಾರಸುದಾರರಿಲ್ಲದೆ ಕೊಳೆಯುತ್ತಿದೆ. ಮೂರು ಹೊತ್ತಿನ ಊಟವೂ ನೆಟ್ಟಗೆ ಮಾಡದೆ ಕೂಡಿಟ್ಟಿದ್ದ ಸಂಪತ್ತು ಕೊನೆಗೂ ಪರರ ಪಾಲಾಯಿತು.

- ಅಶ್ವತ್ಥನಾರಾಯಣ್ ಎಲ್.
sathyajns@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com