ಆನಿಸುವ ಹೆಗಲು

ಒಂದೊಂದು ಸಲ ನಾವೆಷ್ಟು ಖಿನ್ನರಾಗಿಬಿಡುತ್ತೇವೆ ನೋಡಿ. ಜಗತ್ತೇ ತಲೆ ಮೇಲೆ ಬಿದ್ದಂತೆ, ಇನ್ನು ಬದುಕೇ ಇಲ್ಲದಂತೆ ಒದ್ದಾಡುತ್ತೇವೆ. ಆದರೆ ಅದು ನಮ್ಮ...
Updated on: 

ಒಂದೊಂದು ಸಲ ನಾವೆಷ್ಟು ಖಿನ್ನರಾಗಿಬಿಡುತ್ತೇವೆ ನೋಡಿ. ಜಗತ್ತೇ ತಲೆ ಮೇಲೆ ಬಿದ್ದಂತೆ, ಇನ್ನು ಬದುಕೇ ಇಲ್ಲದಂತೆ ಒದ್ದಾಡುತ್ತೇವೆ. ಆದರೆ ಅದು ನಮ್ಮ ತಪ್ಪು ಕಲ್ಪನೆ. ನಾವೊಮ್ಮೆ ಅದರಾಚೆಗೆ ಬಂದು ನೋಡೋಣ. ಕೋಣೆಯೊಳಗೆ ಮುಖ ಕಿವುಚಿ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಬದಲು ನೀವೊಮ್ಮೆ ಕಿಟಕಿಯ ಪರದೆ ತೆಗೆದು ಹೊರಗೆ ನೋಡಿ. ಅಲ್ಲಿ  ಬೆಳಕು ಕಾಣಿಸುತ್ತಿದೆಯಲ್ಲವೇ? ಹಾಗೇ ಕಿಟಕಿಯ ಬಾಗಿಲು ತೆಗೆದು ನೋಡಿ. ತಂಪಾದ ಗಾಳಿ ಬೀಸುತ್ತಿದೆ ತಾನೆ? ಇನ್ನೂ ಸಮಾಧಾನವಾಗಿಲ್ಲವೇ? ಆ ಕತ್ತಲೆ ಕೋಣೆಯಿಂದೊಮ್ಮೆ ಹೊರ ಬಂದು ನೋಡಿ. ಆ ಹಚ್ಚನೆ ಹಸಿರು, ಬಣ್ಣದ ಹೂವುಗಳು, ಗಿಡ, ಮರ, ಬಳ್ಳಿ, ಹೂವಿನ ಪರಿಮಳ ಇವೆಲ್ಲವನ್ನೂ ಆಘ್ರಾಣಿಸಿಕೊಳ್ಳಿ. ಕಣ್ಣು ತುಂಬಿಸಿಕೊಳ್ಳಿ. ಮನಸ್ಸು ತುಂಬಿಸಿಕೊಳ್ಳಿ. ಹೀಗೆ ಹೇಗಾದರೂ ಮಾಡಿ ಮನವ ಸಂತೈಸಿಕೊಳ್ಳಿ. ನೀವಂದುಕೊಂಡಂತೆ ನಿಮ್ಮ ಸಮಸ್ಯೆ ಸಮಸ್ಯೆಯೇ ಆಗಿರುವುದಿಲ್ಲ. ಅದೇನ್ ಮಹಾ ಎಂದು ಒಂದೊಮ್ಮೆ ಧೈರ್ಯ ತಂದುಕೊಂಡಲ್ಲಿ ನಮ್ಮ ಮುಂದಿನ ಗುರಿ ಏನು, ಹೆಜ್ಜೆ ಯಾವ ಕಡೆಗೆ ಎಂಬುದು ಸ್ಪಷ್ಟವಾಗುತ್ತದೆ. ಕಷ್ಟ ಕೋಟಲೆ, ಸಮಸ್ಯೆ ಸಂಕೋಲೆಯಿಂದ ಹೊರಬರಲು ಪ್ರಯತ್ನಿಸುವುದು ನಮ್ಮ ಮೊದಲ ಕರ್ತವ್ಯ. ಫಲಾಫಲ ದೇವರಿಗೆ ಬಿಟ್ಟದ್ದು. ಹಾಗಂತ ಆ ದೇವರು ಹುಲ್ಲು ಮೇಯಿಸಲಾರ. ಮೋಸ ಮಾಡಲಾರ ಅನ್ನುವ ಮನೋಸ್ಥೈರ್ಯವೂ ನಮ್ಮಲ್ಲಿರಲಿ. ಇದಕ್ಕಾಗಿಯೇ ಹೇಳುವುದು ಮನಸ್ಸೇ ಮುಖದ ಕನ್ನಡಿ. ಹೀಗಾಗಿ ಮನಸ್ಸು ಮಲ್ಲಿಗೆಯಂತೆ ತಾಜಾತನದಿಂದ ಕೂಡಲಿ. ಪ್ರಫುಲ್ಲ, ಪ್ರಾಂಜಲವಾಗಿರಲಿ.
ಒಂದು ದಿನ ನೀವ್ಯಾವುದೋ ಸಂಕಟದಲ್ಲಿ ಸಿಕ್ಕಿಬಿದ್ದಿದ್ದೀರಿ. ನಿಮ್ಮನ್ನು ಆವರಿಸಿರುವ ದುಗುಡವನ್ನೆಲ್ಲ ಹೇಳಿಕೊಳ್ಳಬೇಕೆನಿಸಿದೆ. ಕೇಳುವ ಕಿವಿಗಾಗಿ, ನಿಮ್ಮ ದುಃಖವನ್ನು ತಾಳಿಕೊಳ್ಳುವ ಹೆಗಲಿಗಾಗಿ ಹುಡುಕುತ್ತೀರಿ. ನಿಮ್ಮ ಅಷ್ಟೂ ಕಾಂಟ್ಯಾಕ್ಟುಗಳೂ ವ್ಯರ್ಥ ಎಂಬುದು ನಿಮಗೆ ಆಗ ಅರ್ಥವಾಗತೊಡಗುತ್ತದೆ. ಎಲ್ಲ ಸುಖವಾಗಿದ್ದಾಗ ನಿಮ್ಮ ಕಂಪನಿಗಾಗಿ ಹಾತೊರೆಯುತ್ತಿದ್ದವರೆಲ್ಲ ನೀವು ಅಸಹಾಯಕರಾಗಿದ್ದಾಗ ಕೈಬಿಟ್ಟು ಹೊರಟುಹೋಗುತ್ತಾರೆ. ಆಗ ನಿಮ್ಮತ್ತ ಸಹಾಯ ನೀಡಿ ಚಾಚುವ ಕೈಗಳಿವೆಯಲ್ಲ, ಅವು ನಿಜವಾಗಲೂ ನೀವು ಊಹಿಸಿರದ ಯಾವುದೋ ಮೂಲೆಯಿಂದ ಬಂದಿರುತ್ತವೆ. ಜೋಕ್ ಹೇಳಿಕೊಂಡು ನಗಲು ಹತ್ತಾರು ಗೆಳೆಯರು- ಗೆಳತಿಯರನ್ನು ಹೊಂದಿದವರೆಲ್ಲಾ ಭಾಗ್ಯವಂತರು ಎಂದು ಭಾವಿಸಬೇಕಾಗಿಲ್ಲ. ನೀವು ಸಂಕಷ್ಟದಲ್ಲಿದ್ದಾಗ ಊರುಗೋಲು ನೀಡುವ ಒಂದು ಹೆಗಲನ್ನಾದರೂ ಹೊಂದಿರುವವನೇ ನಿಜವಾದ ಭಾಗ್ಯವಂತ. ಅಂಥ ನಾಲ್ಕಾರು ಹೆಗಲುಗಳನ್ನು ಜೀವಮಾನದಲ್ಲಿ ಸಂಪಾದಿಸುವವನೇ ಪರಮ ಅದೃಷ್ಟವಂತ. ಅಂಥ ಗೆಳೆಯರನ್ನು ಸಂಪಾದಿಸುವುದೇ ನಮ್ಮ ಬಾಳಿನ ಗುರಿಯಾಗಬೇಕು. ಅದಷ್ಟೇ ಬಾಳಿನ ಸಾರ್ಥಕ್ಯ. ಉಳಿದ ಕಾಂಟ್ಯಾಕ್ಟು, ಮಣ್ಣು ಮಸಿ ಏನಿದ್ದರೂ ಲೌಕಿಕದ ಜಂಜಡಕ್ಕಷ್ಟೇ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com