ಭಾರತದ ಹೃದಯವಿರುವುದು ಹಳ್ಳಿಗಳಲ್ಲಿ. ಬಡತನ, ನಿರುದ್ಯೋಗ, ಜನಸಂಖ್ಯಾ ಹೆಚ್ಚಳ, ಅನಕ್ಷರತೆ ಇಂತಹ ಘೋರ ಸಮಸ್ಯೆಗಳೊಂದಿಗೆ ದಾರಿದ್ರ್ಯ, ದುಶ್ಚಟಗಳು, ಕೀಳರಿಮೆ, ಮೂಢಭಕ್ತಿ, ಶೋಷಣೆಯಂತಹ ಮೌಢ್ಯಕೂಪದಿಂದ ಹಳ್ಳಿಗಳನ್ನು ಎತ್ತರಿಸಿ ಜಾಗೃತಿಯ ಕಹಳೆಯನ್ನು ಮೊಳಗಿಸಬೇಕಾದರೆ ಬಹುಸಂಖ್ಯೆಯ ವ್ಯಕ್ತಿಗಳು ಸಂಘಟಿತರಾಗಿ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಬಹುಮುಖದಿಂದ ಒಮ್ಮೆಲೇ ಕ್ರಿಯಾಶೀಲರಾದಾಗ ಹಳ್ಳಿಗಳ ಉದ್ಧಾರ ಸಾಧ್ಯವಾಗುವುದು.
'ಜನಕ ಮಹಾರಾಜ ಒಂದು ಕೈಯಲ್ಲಿ ನೇಗಿಲು ಹಿಡಿದು ಇನ್ನೊಂದು ಕೈಯಲ್ಲಿ ವೇದಾಭ್ಯಾಸ ಮಾಡಿದ. ನಮ್ಮನ ಸನಾತನ ಋಷಿಗಳೆಲ್ಲ ಕೃಷಿಕರಾಗಿದ್ದರು. ನಾವು ಕೃಷಿ ವಿಜ್ಞಾನವನ್ನು ನಿಖರವಾಗಿ ಕಲಿತು, ಆ ಜ್ಞಾನವನ್ನು ನಮ್ಮ ವ್ಯವಸಾಯಕ್ಕೆ ಅಳವಡಿಸಿಕೊಳ್ಳಬೇಕು. ನಮಗೆ ಅವಶ್ಯಕವಾದ ಜ್ಞಾನವನ್ನು ಗಳಿಸಿ, ಕೆಲಸ ಮಾಡಬೇಕು'.
'ಹಳ್ಳಿಗರಲ್ಲಿ ಪಟ್ಟಣಕ್ಕೆ ವಲಸೆ ಹೋಗುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಅವರಿಗೆ ಯಾವುದಾದರೂ ನೌಕರಿಗೆ ಸೇರಿ ನಗರ ಜೀವನದ ಭೋಗವನ್ನು ಅನುಭವಿಸುವ ಆಸೆ. ಒಬ್ಬ ರೈತನ ಮಗ ಅಲ್ಪಸ್ವಲ್ಪ ಶಿಕ್ಷಣ ಪಡೆದನೆಂದರೆ ತನ್ನ ಕಸುಬನ್ನು ಬಿಟ್ಟು ಪಟ್ಟಣ ಸೇರಿಬಿಡುತ್ತಾನೆ. ವಿದ್ಯಾವಂತರು ಹಳ್ಳಿಗಳಿಗೆ ಹೋಗಿ ನೆಲೆಸಿದರೆ ಚಿಕ್ಕಚಿಕ್ಕ ಹಳ್ಳಿಗಳೂ ಅಭಿವೃದ್ಧಿ ಹೊಂದುತ್ತವೆಯಲ್ಲದೇ ವ್ಯವಸಾಯವನ್ನು ವೈಜ್ಞಾನಿಕ ವಿಧಾನದಲ್ಲಿ ಮಾಡಿದರೆ ಉತ್ಪಾದನೆಯೂ ಹೆಚ್ಚಾಗುತ್ತದೆ. ಇದಕ್ಕೂ ಮೊದಲು ಆಗಬೇಕಾಗಿರುವಂತಹದು ಜನಸಾಮಾನ್ಯರಿಗೆ ಶಿಕ್ಷಣ, ಪರಸ್ಪರ ಪ್ರೀತಿ, ಸಹಾನುಭೂತಿ'.
- ಆನಂದ ಎಸ್.ಎನ್.