ಹವ್ಯಕರ ಕಷಾಯದಲ್ಲಿ ಜಾಪತ್ರೆ...

ಹವ್ಯಕರ ಮನೆಗಳಲ್ಲಿ ಅತಿಥಿಗಳು ಬಂದರೆ ವಿಶೇಷ ಸಿಹಿ ಅಡುಗೆ ಮಾಡುವ ರೂಢಿಯಿದೆ. ತಕ್ಷಣಕ್ಕೆ ಮಾಡುವಂತಹದು ಪರಮಾನ್ನ. ಪರಮಾನ್ನಕ್ಕೆ ವಿಶೇಷ ಸುವಾಸನೆಗೆ ಬಳಸುವುದು...
ಹವ್ಯಕರ ಕಷಾಯದಲ್ಲಿ ಜಾಪತ್ರೆ...
Updated on: 

ನೀವು ಉತ್ತರಕನ್ನಡ ಜಿಲ್ಲೆಯ ಸಿರ್ಸಿ, ಸಿದ್ದಾಪುರ ತಾಲೂಕಿನ ಭಾಗದ ಯಾವುದಾದರೂ ಹವ್ಯಕರ ಮನೆಗಳಿಗೆ ಭೇಟಿಕೊಟ್ಟಿದ್ದರೆ ನಿಮಗೆ ಪತ್ರೆ(ಜಾಪತ್ರೆ)ಯ ರುಚಿ ಗೊತ್ತಿರಲೇಬೇಕು. ಹವ್ಯಕರ ಮನೆಗಳಲ್ಲಿ ಅತಿಥಿಗಳು ಬಂದರೆ ವಿಶೇಷ ಸಿಹಿ ಅಡುಗೆ ಮಾಡುವ ರೂಢಿಯಿದೆ. ತಕ್ಷಣಕ್ಕೆ ಮಾಡುವಂತಹದು ಪರಮಾನ್ನ. ಪರಮಾನ್ನಕ್ಕೆ ವಿಶೇಷ ಸುವಾಸನೆಗೆ ಬಳಸುವುದು ಪತ್ರೆಯನ್ನು.
ಇನ್ನು ಆ ಭಾಗದಲ್ಲಿ ಸಾಮಾನ್ಯವಾಗಿ ಕಾಫಿ, ಟೀ ಬಳಕೆ ಕಡಿಮೆ. ಕಷಾಯದ ಬಳಕೆಯೇ ಹೆಚ್ಚು. ಕಷಾಯದ ಪುಡಿಗೆ ಜೀರಿಗೆ, ಧನಿಯಾ, ಏಲಕ್ಕಿ, ಲವಂಗ ಜೊತೆ ಒಳ್ಳೆಯ ಸುವಾಸನೆಕೊಡಲು ಪತ್ರೆಯನ್ನು ಬಳಸುತ್ತಾರೆ. ಇದು ಕಷಾಯಕ್ಕೆ ವಿಶೇಷ ರುಚಿ ಹಾಗೂ ಸುವಾಸನೆ ಕೊಡುವುದು. ಇಷ್ಟೇ ಅಲ್ಲ ಈ ಕಷಾಯವನ್ನು ರಾತ್ರಿ ಮಲಗುವ ಮೊದಲು ಕುಡಿಯುವುದರಿಂದ ನಿದ್ರಾಹೀನತೆ ದೂರವಾಗುವುದು. ಪತ್ರೆಯಲ್ಲಿರುವ ವಿಶೇಷ ಅಮಲಿನ ಗುಣ ಇದಕ್ಕೆ ಕಾರಣ. ಚಿಕ್ಕ ಮಕ್ಕಳು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಪತ್ರೆಯನ್ನು ಬಳಸಿ ಮಾಡಿದ ಕಷಾಯವನ್ನು ಕುಡಿಸುವುದರಿಂದ ಬೇಗ ನಿದ್ರೆ ಮಾಡುತ್ತವೆ.
ಸಾಮಾನ್ಯವಾಗಿ ಅಡಕೆ ತೋಟಗಳಲ್ಲಿ ಜಾಯಿಕಾಯಿಯನ್ನು ಉಪಬೆಳೆಯಾಗಿ ಬೆಳೆಯುತ್ತಾರೆ. ತೆಂಗಿನ ತೋಟದಲ್ಲೂ ಇದನ್ನು ಬೆಳೆಸಬಹುದು. ಈ ಮರ ನೆಟ್ಟು ಮೂರರಿಂದ ನಾಲ್ಕು ವರ್ಷಗಳಲ್ಲಿ ಕಾಯಿ ಬಿಡಲು ಪ್ರಾರಂಭವಾಗುತ್ತದೆ. ಗಿಡ ಸಾಮಾನ್ಯವಾಗಿ 10-12 ಅಡಿ ಎತ್ತರಕ್ಕೆ ಬೆಳೆಯುತ್ತದೆ. ಕೆಲವು 25 ಅಡಿ ಎತ್ತರಕ್ಕೆ ಬೆಳೆಯುವ ಸಾಧ್ಯತೆಯೂ ಇದೆ. ಜಾಯಿಕಾಯಿ ಗಿಡ ನೆಡುವಾಗ ಎರಡು ಗಿಡಗಳನ್ನು ಒಂದರ ಪಕ್ಕ ಒಂದರಂತೆ ನೆಡುವ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಕಾರಣ ಹೂ ಬಿಟ್ಟ ಸಮಯದಲ್ಲಿ ಪರಾಗಸ್ಪರ್ಶಕ್ಕೆ ಅನುಕೂಲವಾಗಲಿ ಎಂದು. ಜಾಪತ್ರೆ ಮತ್ತು ಜಾಯಿಕಾಯಿ ಎರಡೂ ಬೇರೆ ಬೇರೆ ಸಾಂಬಾರ ಪದಾರ್ಥಗಳಾದರೂ, ಅವೆರಡೂ ಒಂದೇ ಮರದಲ್ಲಿ, ಒಂದೇ ಕಾಯಿಯ ಉತ್ಪನ್ನಗಳು. ಜಾಯಿಕಾಯಿ ಮೇಲಿನ ದಪ್ಪ ಸಿಪ್ಪೆ ತೆಗೆದರೆ ಒಳಗಿನ ಕಪ್ಪು ಬಣ್ಣದ ಜಾಯಿಕಾಯಿಗೆ ಬಲೆಯಂತೆ ಅಂಟಿಕೊಂಡಿರುವ ಕೆಂಪುಬಣ್ಣದ ಭಾಗವೇ ಜಾಪತ್ರೆ ಅಥವಾ ಪತ್ರೆ. ಇದನ್ನು ಬೇರ್ಪಡಿಸಿ ಪ್ರತ್ಯೆಕವಾಗಿ ಒಣಗಿಸಬೇಕು. ಜಾಯಿಕಾಯಿ ಹಣ್ಣು ಹಳದಿಬಣ್ಣಕ್ಕೆ ತಿರುಗಿದ ಮೇಲೆ ಅದು ಹಣ್ಣಾಗಿದೆ ಎಂದರ್ಥ. ಹಣ್ಣಾದ ಮೇಲೂ ಕೀಳದೆ ಬಿಟ್ಟರೆ ಒಂದೆರಡು ದಿನಗಳಲ್ಲಿ ಹಣ್ಣು ಬಿರಿದು ಒಳಗಿನ ಕೆಂಪು ಬಣ್ಣದ ಪತ್ರೆ ಕಾಣಲಾರಂಭಿಸುತ್ತದೆ. ಇದು ಹಕ್ಕಿ ಪಕ್ಷಿಗಳನ್ನು ಆಕರ್ಷಿಸಿ ಅವು ಹೊತ್ತೊಯ್ಯುವುದರಿಂದ ಹಣ್ಣಾದ ತಕ್ಷಣ ಕೀಳುವುದು ಉತ್ತಮ.

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com