ಈರುಳ್ಳಿ ಹೆಚ್ಚುವಾಗಿ ಕಣ್ಣಲ್ಲಿ ನೀರು ಸುರಿಸುವ ಹೆಣ್ಣುಮಕ್ಕಳನ್ನು 'ಗಂಡ ಹೊಡೆದ್ನಾ?' ಎಂದು ತಮಾಷೆ ಮಾಡುವುದುಂಟು. ಈರುಳ್ಳಿ, ಹೆಚ್ಚುವವರ ಕಣ್ಣಲ್ಲಿ ಮಾತ್ರವಲ್ಲ ಬೆಳೆಗಾರರು, ಬಳಕೆದಾರರು, ರಾಜಕಾರಣಿಗಳ ಕಣ್ಣಲ್ಲೂ ನೀರು ತರಿಸಿದ ಉದಾಹರಣೆಗಳು ಬೇಕಾದಷ್ಟಿವೆ. ಈರುಳ್ಳಿ ಧಾರಣೆ ಕುಸಿತದಿಂದ ಬೆಳೆಗಾರನ ಕಣ್ಣಲ್ಲಿ ನೀರು ಸುರಿದರೆ, ಬೆಲೆ ಏರಿಕೆಯಿಂದ ಗ್ರಾಹಕನ ಕಣ್ಣಲ್ಲಿ ನೀರು ತರಿಸುತ್ತದೆ. ಇದರಿಂದ ಆಳುವ ಸರಕಾರ ಇಕ್ಕಟ್ಟಿಗೆ ಸಿಲುಕಿದ, ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಚುನಾವಣೆಗಳಲ್ಲಿ ಮತದಾರನಿಂದ ತಿರಸ್ಕೃತವಾದ ಉದಾಹರಣೆಗಳೂ ಇವೆ. ಅಷ್ಟು ಶಕ್ತಿಶಾಲಿ, ಅಷ್ಟೊಂದು ಪ್ರಭಾವಶಾಲಿ ಈ ಈರುಳ್ಳಿ.
ಇರಲಿ. ಬಹುಶಃ ಈರುಳ್ಳಿ ಬಳಸದ ಮನೆ ಸಿಗಲಿಕ್ಕಿಲ್ಲ. ಈರುಳ್ಳಿ ಕೇವಲ ಕಣ್ಣಲ್ಲಿ ಮಾತ್ರ ನೀರು ತರಿಸುವುದಿಲ್ಲ, ಬಾಯಲ್ಲೂ ನೀರೂರಿಸುತ್ತದೆ. ಈರುಳ್ಳಿ ಎಂದ ತಕ್ಷಣ ಮೊದಲು ನೆನಪಾಗುವುದೇ ಈರುಳ್ಳಿ ಬಜ್ಜಿ. ಇದರ ಬಜ್ಜಿ, ಪಕೋಡ, ಚಟ್ನಿ, ಗೊಜ್ಜು ಸವಿಯದವರೇ ಇಲ್ಲ. ಹೆಚ್ಚಿನ ಎಲ್ಲ ಅಡುಗೆಗಳಲ್ಲೂ ಈರುಳ್ಳಿ ಬಳಸಿಯೇ ಇರುತ್ತೇವೆ. ಈರುಳ್ಳಿಯಿಲ್ಲದಿದ್ದರೆ ಅಡುಗೆ ಸಪ್ಪೆ ಎನಿಸುವುದು. ಇನ್ನು ಬೆಳಗಿನ ಎಲ್ಲಾ ತಿಂಡಿಗಳಿಗೂ ಈರುಳ್ಳಿ ಬೇಕೇಬೇಕು. ಉಪ್ಪಿಟ್ಟು, ಅವಲಕ್ಕಿ, ಮಸಾಲೆದೋಸೆ, ಇಡ್ಲಿ ಸಾಂಬಾರ್, ಚಪಾತಿ ಜತೆಗಿನ ಪಲ್ಯ ಅಥವಾ ಸಾಗು, ಅಕ್ಕಿರೊಟ್ಟಿ, ಪೂರಿಗೆ ಮಾಡುವ ಸಾಗು, ಕೋಸಂಬರಿ... ಯಾವುದನ್ನೇ ತೆಗೆದುಕೊಳ್ಳಿ ಈರುಳ್ಳಿ ಇಲ್ಲದಿದ್ದರೆ ಅಂದಿನ ತಿಂಡಿ, ಅಡುಗೆ ಆಗುವುದೇ ಇಲ್ಲ. ಹಸಿ ಇರುಳ್ಳಿ-ಮೊಸರನ್ನದ ಸವಿಯೇ ಅದ್ಭುತ. ಅಂತಹ ರುಚಿ ಈರುಳ್ಳಿಗಿದೆ. ಇದನ್ನು ವಿನೆಗರ್ ಉಪ್ಪಿನಕಾಯಿಗೂ ಬಳಸುತ್ತಾರೆ.
ಹೆಮ್ಮೆಯ ವಿಷಯವೆಂದರೆ ಭಾರತ ಪ್ರಪಂಚದ ಬಹುದೊಡ್ಡ ಈರುಳ್ಳಿ ಬೆಳೆಯುವ ದೇಶ. ವರ್ಷಕ್ಕೆ 60 ಕೋಟಿ ರು.ಗಳಿಗೂ ಮಿಕ್ಕಿದ ರಫ್ತು ವಹಿವಾಟು ಈರುಳ್ಳಿಯಿಂದ ನಡೆಯುತ್ತದೆ. ಇದು ಭಾರತದ ಅತಿ ದೊಡ್ಡ ವಾಣಿಜ್ಯ ಶ್ರೇಣಿಯ ತರಕಾರಿ ಬೆಳೆಯಾಗಿದೆ.
ಈರುಳ್ಳಿಯಲ್ಲಿ ನಾವು ನೋಡಿರುವಂತೆ ಅನೇಕ ವಿಧಗಳಿವೆ. ಕೆಂಪು ಈರುಳ್ಳಿ, ಬಿಳಿ ಈರುಳ್ಳಿ, ಚಿಕ್ಕ ಸಾಂಬಾರ್ ಈರುಳ್ಳಿ, ಅತಿ ದೊಡ್ಡ ಗಾತ್ರದ ಈರುಳ್ಳಿ. ಕೆಂಪು ಈರುಳ್ಳಿಯಲ್ಲೂ ಕಡುಗೆಂಪು ಹಾಗೂ ನಸುಗೆಂಪಿನ ಈರುಳ್ಳಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಅತಿ ದೊಡ್ಡ ಗಾತ್ರದ ಕಡುಗೆಂಪಿನ ಈರುಳ್ಳಿಯಲ್ಲಿ ಖಾರ ಹಾಗೂ ಘಾಟು ವಾಸನೆ ಕೂಡ ಹೆಚ್ಚಿರುತ್ತದೆ.
-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com