ಸಂಕುಚಿತತೆ ಬೇಡ
ಸಂಕುಚಿತ ಮನೋಭಾವ, ಸಣ್ಣಬುದ್ಧಿ, ಕೀಳರಿಮೆ, ನಕಾರಾತ್ಮಕತೆ ನಮ್ಮ ಬದುಕನ್ನು ಕುಗ್ಗಿಸುತ್ತವೆ, ಸಾಮಾಜಿಕ ಜೀವನದಿಂದ ವಿಮುಖರನ್ನಾಗಿಸುತ್ತವೆ. ತೆರೆದ ಪ್ರಪಂಚದಲ್ಲಿ ಕಣ್ಣು ಮುಚ್ಚಿಕೊಂಡು ಬದುಕುವುದಕ್ಕಿಂತ ಎಲ್ಲರೊಡನೆ ಸದ್ಭಾವದಿಂದ ಬಯಲೊಳಗೆ ಬದುಕುವುದು ಶ್ರೇಯಸ್ಕರ.
ಇತರ ರಾಷ್ಟ್ರಗಳಿಗೆ ನಾವು ಕಲಿಸಬೇಕಾದದ್ದು ಬಹಳಷ್ಟಿದೆಯಾದರೂ ಇತರರಿಂದ ನಾವು ಕಲಿಯಬೇಕಾದದ್ದೂ ಸಾಕಷ್ಟಿದೆ. ಭಾರತವು ಇತರ ರಾಷ್ಟ್ರಗಳಿಗೆ ಕೊಡಬೇಕಾದದ್ದು ಮತ್ತು ಯುಗಯುಗಾಂತರಗಳಿಂದಲೂ ಶಾಂತವಾಗಿ ಅಗೋಚರವಾಗಿ ಕೊಡುತ್ತಿದ್ದುದು ಜ್ಞಾನದ ಉಡುಗೊರೆಯನ್ನು, ಆಧ್ಯಾತ್ಮದ ಉಡುಗೊರೆಯನ್ನು. ಇಂತಹ ಆಧ್ಯಾತ್ಮಿಕತೆಯ ಘನಸತ್ಯಗಳನ್ನು ವೇದಾಂತದ ಮಹಾತತ್ವಗಳನ್ನು ಜಗತ್ತಿನಾದ್ಯಂತ ಹರಡುವುದಕ್ಕೆ ಪೌರುಷವಂತರು ಬೇಕು.
'ಅರ್ಥವಿಲ್ಲದ ಕಂದಾಚಾರಗಳಿಗೆ ಕಟ್ಟುಬಿದ್ದಿರುವುದಾಗಲಿ, ಬಾಹ್ಯಾಚರಣೆಗಳನ್ನೇ ಧರ್ಮವೆಂದು ಭಾವಿಸುವುದಾಗಲಿ ಕೇವಲ ಮೂರ್ಖತನ. ಶತಶತಮಾನಗಳಿಂದ ದಾಸ್ಯಕ್ಕೆ ಗುರಿಯಾಗಿರುವುದು ಈ ಕಾರಣದಿಂದಲೇ. ಧರ್ಮವನ್ನು ಯಥಾರ್ಥವಾಗಿ ಗ್ರಹಿಸದೆ ವಿಕೃತವಾಗಿ ಅರ್ಥೈಸಿದ್ದರಿಂದಲೇ ಇಂದಿನ ದಿನಗಳಲ್ಲಿ ವ್ಯಭಿಚಾರವೇ ಮೊದಲಾದ ಮಹಾಪರಾಧಗಳವ್ನು ಮಾಡಿದರೂ ಅವನು ಜಾತಿಭ್ರಷ್ಟನಾಗುವುದಿಲ್ಲ.'
'ನಾನು ನನ್ನ ರಾಷ್ಟ್ರದ ಶ್ರೇಯೋಭಿವೃದ್ಧಿಗಾಗಿ ದುಡಿಯುವ ಪ್ರಯತ್ನದಲ್ಲಿ ನರಕಕ್ಕೆ ಹೋಗಬೇಕಾಗಿ ಬಂದರೂ ಅದನ್ನು ನನ್ನ ಪಾಲಿನ ಪರಮ ಭಾಗ್ಯವೆಂದು ಭಾವಿಸುತ್ತೇನೆ.'
-ಆನಂದ ಎಸ್.ಎನ್.