ರಾಗಿಮಂಟಪ!

ಕಡಲ ತೀರಕ್ಕೆ ಪದೇ ಪದೇ ಅಪ್ಪಳಿಸುವ ಅಲೆಯಿಂದಾಗಿ ಮರಳಿನಿಂದ ಮಾಡಿದ ಕಲೆ ಅಳಿಸಿ ಹೋಗುತ್ತದೆ ಎಂದು ಗೊತ್ತಿದ್ದರೂ ಮರಳಿ...
ರಾಗಿಮಂಟಪ!
Updated on: 

ಕಡಲ ತೀರಕ್ಕೆ ಪದೇ ಪದೇ ಅಪ್ಪಳಿಸುವ ಅಲೆಯಿಂದಾಗಿ ಮರಳಿನಿಂದ ಮಾಡಿದ ಕಲೆ ಅಳಿಸಿ ಹೋಗುತ್ತದೆ ಎಂದು ಗೊತ್ತಿದ್ದರೂ ಮರಳಿ, ಮರಳಿನಲ್ಲಿ ಕಲೆ ಅರಳಿಸಿ ಕಲಾವಿದ ತಾನೂ ಸಂತಸ ಪಡುತ್ತ ನೋಡುಗರನ್ನೂ ಆಕರ್ಷಿಸುತ್ತಾನೆ. ಕಲಾವಿದನಿಗೆ ಕೈಗೆ ಕಸ ಸಿಕ್ಕರೂ ಕೆಲಸಕ್ಕೆ ಬರುತ್ತದೆ. ಕಲೆ ಕಲಿತವರು ಕೆಲಸಕ್ಕೆ ಬಾರದ ಇಲ್ಲ ಕಡಿಮೆ ವೆಚ್ಚದ ಹಲವು ವಸ್ತುಗಳನ್ನು ಬಳಸಿ ಅದ್ಭುತ ಕಲಾಕೃತಿ ಮಾಡುವುದೂ ಇದೆ. ಅಂಥವುಗಳಲ್ಲಿ ಈ 'ರಾಗಿ ಮಂಟಪ'ವೂ ಒಂದು.
ಸಿಟಿಗಳಲ್ಲಿ ಕಲ್ಯಾಣ ಮಂಟಪ ಸಿಗುವುದನ್ನು ಆಧರಿಸಿ ಮದ್ವೆ ಮುಹೂರ್ತ ಫಿಕ್ಸ್ ಮಾಡುವ ಸ್ಥಿತಿ ಇದೆ. ಆಡಂಬರದ ಪೈಪೋಟಿಯಲ್ಲಿ ತಾಮುಂದು ನಾಮುಂದು ಎಂದು ತೋರಿಸಿಕೊಳ್ಳುವವರಿಂದಾಗಿ ಮದ್ವೆ ಮಂಟಪ, ಕಲ್ಯಾಣ ಮಂಟಪಗಳು ಅಲಂಕಾರಿಕ ವಸ್ತುಗಳಿಂದ, ವಿವಿಧ ವಿನ್ಯಾಸದಿಂದ, ವಿದ್ಯುತ್ ಇಲ್ಲ ಜನರೇಟರ್ ಬಳಸಿಕೊಂಡು ಝಗಮಗಿಸುತ್ತಿರುತ್ತವೆ. ಆದರೆ ಹಳ್ಳಿಗಳಲ್ಲಿ ಮದ್ವೆ ವೈಭವ ಇನ್ನೂ ಆ ಹಂತಕ್ಕೆ ತಲುಪಿಲ್ಲ. ಅಲ್ಲಿನ ಡೆಕೋರೇಶನ್‌ನಲ್ಲಿ ಇರುವ ಸೌಂದರ್ಯ ನಗರಗಳ ಸಂಭ್ರಮದಲ್ಲಿರುವುದಿಲ್ಲ.
ಹಳ್ಳಿಗಳ ಮದ್ವೆ ಮಂಟಪ ಅಲಂಕಾರಕ್ಕೆ ಹೊಸ ಸೇರ್ಪಡೆ ರಾಗಿ ಹುಲ್ಲಿನ ವಿನ್ಯಾಸ. ಯಲ್ಲಾಪುರ, ಶಿರಸಿ, ಸಿದ್ದಾಪುರ ಸುತ್ತ ಮುತ್ತ 'ರಾಗಿ ಮಂಟಪ' ಚಾಲ್ತಿಯಲ್ಲಿದೆ. ಮದ್ವೆಗೆ ಕೆಲವು ದಿನ ಮುಂಚಿತವಾಗಿಯೇ ಗೋಣಿ ತಾಟಿನ ಮೇಲೆ ದಟ್ಟವಾಗಿ ರಾಗಿ ಬಿತ್ತಿ, ಎಳೆ ಹಸಿರು ಹುಲ್ಲು ಬರುತ್ತಿದ್ದಂತೆಯೇ ಮದ್ವೆ ಮಂಟಪ ಸಿಂಗರಿಸಲು ಅವಶ್ಯವಿರುವಷ್ಟು ತಾಟನ್ನು ಬಳಸಲಾಗುತ್ತದೆ. ರಾಗಿ ಹುಲ್ಲಿನ ಹಸಿರು ಗೋಣಿ ತಾಟನ್ನು ಮಂಟಪದ ಮಾಡಿಗೆ ಹಾಸಿ, ಕಂಬಕ್ಕೆ ಸುತ್ತಿ ಹಸಿರು ಹೊದಿಕೆಯ ಮೇಲೆ ಎಲ್ಲೆಲ್ಲಿ ಬಣ್ಣ ಬಣ್ಣದ ಹೂವಿನ ಅಲಂಕಾರ ಬೇಕೋ ಅದನ್ನೆಲ್ಲ ಮಾಡಲಾಗುತ್ತದೆ. 'ಯೋಗ್ಯರಾಗಿ, ಭೋಗ್ಯರಾಗಿ, ಭಾಗ್ಯವಂತರಾಗಿ ನೀವು' ಎನ್ನುತ್ತ ವಧು- ವರರನ್ನು ಹರಸುವಂತವರಾಗಿ ಎಂದು ನೆಂಟರಿಷ್ಟರನ್ನು ಆಹ್ವಾನಿಸಲು ಈ 'ರಾಗಿ ಮಂಟಪ' ಬಳಕೆಯಾಗುತ್ತಿದೆ. ಹೀಗೆ ಕಲ್ಯಾಣಕ್ಕೆಂದು ಮಂಟಪ ಕಟ್ಟುತ್ತಿದ್ದವರು ತಮ್ಮ ಕಲೆಯ ಮೆರಗನ್ನು ಲೋಕ ಕಲ್ಯಾಣ ಮಾಡುವ ಸ್ವಾಮೀಜಿಯವರ ಮಹೋತ್ಸವಗಳಿಗೂ ಅಳವಡಿಸುತ್ತಿದ್ದಾರೆ. ಬರೀ ಬತ್ತದ ಹಸಿರಷ್ಟೇ ಪರಿಚಯವಿದ್ದವರು ಹೆಚ್ಚು. ಈ ರಾಗಿಯ ಹಸಿರೂ ಲೋಕದ ಸಿರಿಯನ್ನುಕ್ಕಿಸಿದೆ ಎಂಬುದನ್ನು ಮರೆಯಲಾಗದು.

-ಬಿ.ಎಸ್. ವೆಂಕಟಾಚಲ ಭಟ್ಟ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com