ಹಣ ಗಳಿಕೆಯೇ ಗೆಲುವಾ? (ರನ್ ವೇ)

Updated on: 

ಯಾವಾಗಲೂ ಸೋಲು-ಗೆಲುವು ಎನ್ನುತ್ತೇವಲ್ಲ; ಹಾಗಾದರೆ ಸೋಲು-ಗೆಲುವುಗಳ ನಿಜಾರ್ಥವೇನು? ಸೋಲನ್ನು ಯಾವಾಗಲೂ ಹಣ, ಕೀರ್ತಿ ಹಾಗೂ ಹೆಸರುಗಳನ್ನೇ ಹಿನ್ನೆಲೆಯಾಗಿಟ್ಟುಕೊಂಡು ನಿರ್ಧರಿಸುವುದೇಕೆ? ಗೆಲುವೆಂದರೂ ಅಷ್ಟೇ, ಅದು ಯಾವತ್ತೂ ಹಣವನ್ನೇ ಪ್ರಾಧಾನ್ಯವಾಗಿಟ್ಟುಕೊಳ್ಳಬೇಕೇಕೆ? ಸೋಲನ್ನಾದರೂ ಬೇರೆಬೇರೆ ವಿಚಾರಗಳಿಗೆ ಅನ್ವಯಿಸಬಹುದೇನೋ. ಆದರೆ, ಗೆಲುವಂತೂ ಯಾವತ್ತೂ ಹಣವನ್ನೇ ಹಿಂಬಾಲಿಸಿಕೊಂಡು ಹೋಗಬೇಕು ಎಂಬ ಅಲಿಖಿತ ನಿಯಮವನ್ನು ನಾವೇ ರೂಪಿಸಿಬಿಟ್ಟಿದ್ದೇವೆ. ಅದಿರಲಿ, ಹಾಗಾದರೆ ಚೆನ್ನಾಗಿ ದುಡ್ಡು ಮಾಡಿದವರೆಲ್ಲ ಬದುಕಿನಲ್ಲಿ ಯಶಸ್ವಿ ಮನುಷ್ಯರೇ? ಹಣವನ್ನೊಂದುಳಿದು ಇತರೆ ಯಾವುದೇ ವಿಚಾರಗಳಲ್ಲಿ ಅವರು ಹಿಂದುಳಿಯುವುದೇ ಇಲ್ಲವೇ? ತುಂಬ ಹಣವಂತ ಮನುಷ್ಯನ ಖಾಸಗಿ ಬದುಕು ದುಃಖಮಯವಾಗಿದ್ದರೂ ಆತ ಯಶಸ್ವಿಯೇ ಆಗುತ್ತಾನೇಕೆ? ಆತ ಭ್ರಷ್ಟಾತಿಭ್ರಷ್ಟ ಎಂದು ಗೊತ್ತಿದ್ದರೂ ಸಮ್ಮಾನಿಸುವುದೇಕೆ? ಇವುಗಳನ್ನೆಲ್ಲ ನೋಡಿದರೆ, ನಮ್ಮ ಯೋಚನಾಧಾಟಿಯಲ್ಲಿಯೇ ಎಲ್ಲೋ ಕೊರತೆಯಿದೆ ಎಂದು ಅನಿಸುವುದಿಲ್ಲವೇ? ಹೌದು, ನಾವೇಕೆ ಒಬ್ಬ ಪ್ರಾಮಾಣಿಕ, ಬಡ ಸರಕಾರಿ ನೌಕರರೊಬ್ಬರನ್ನು ಗುರುತಿಸುವುದೇ ಇಲ್ಲ? ವರ್ಷಪೂರ್ತಿ ಕಷ್ಟಪಡುವ ಕೃಷಿಕ, ಎಷ್ಟೇ ಕೋಟಲೆಗಳ ಮಧ್ಯೆಯೂ ನಗುತ್ತಲೇ ಇರುವ ಅಮ್ಮ...ಯಾರೂ ನಮಗೆ ಯಾಕೆ ಕಾಣಿಸುವುದೇ ಇಲ್ಲ? ಅವರಿಗೆ ನೆಮ್ಮದಿಯೇ ಇಲ್ಲ ಎಂದುಕೊಳ್ಳುವುದು ಸಹ ಎಷ್ಟು ತಪ್ಪಲ್ಲವೇ? ಹಾಗಾದರೆ, ಯಶಸ್ಸಿಗೂ ನೆಮ್ಮದಿಗೂ ಸಂಬಂಧವಿಲ್ಲವೇ? ಯಶಸ್ಸಿಗೆ ಮಾನಸಿಕ ನೆಮ್ಮದಿಯೂ ಮುಖ್ಯವಲ್ಲ ಎಂದರೆ, ಅದಕ್ಕೆ ಬೇಕಾಗಿದ್ದೇನು? ಅದನ್ನು ಅಳೆಯುವ ಮಾನದಂಡವೇನು? ತಮ್ಮ ತಮ್ಮ ಮಿತಿ, ಸಾಧ್ಯತೆಗಳ ನಡುವೆಯೂ ಒಂದು ನೆಮ್ಮದಿಯ ಬದುಕು ಕಂಡುಕೊಂಡಿರುವವರನ್ನು ಗುರುತಿಸುವುದನ್ನು ನಾವು ಯಾವಾಗ ರೂಢಿಸಿಕೊಳ್ಳುತ್ತೇವೆ? ಒಮ್ಮೆ ಯೋಚಿಸಿ. ಆಗ ಯಶಸ್ಸಿನ ಮಾನದಂಡಗಳೇ ಬದಲಾಗುತ್ತವೆ.

- ಸಹನೆ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com