ಅಗ್ಗದ ಡಾಕ್ಟರ್ ಧನಿಯಾ

Updated on: 

ಕೊತ್ತಂಬರಿಯ ಉಪಯೋಗಗಳು ಅನನ್ಯ. ಅದರಲ್ಲೂ ಅಡುಗೆಯಲ್ಲಿ ಅದರ ಪಾತ್ರ ಅಚ್ಚರಿಯೇ ಸರಿ. ಏಕೆಂದರೆ, ನೀವೆಷ್ಟೇ ರುಚಿಯಾಗಿ ಚಟ್ನಿಯೋ, ಸಾಂಬಾರೋ ಮಾಡಿ... ಹತ್ತಾರು ಎಲೆ ಕೊತ್ತಂಬರಿ ಸೊಪ್ಪು ಉದುರಿಸದೇ ಇದ್ದರೆ ಅದರಲ್ಲೇನೋ ಅಪರಿಪೂರ್ಣತೆ ಕಾಡುತ್ತದೆ.
ಬೇಕರಿ ತಿಂಡಿಗಳಿರಬಹುದು, ಕೃತಕ ಫ್ಲೇವರ್ ಆಗಿರಬಹುದು, ಮಾಂಸ- ಮೀನು- ಕೋಸಂಬರಿಗಳ ಫ್ಲೇವರ್ ಇರಬಹುದು, ಜಿಲಟಿನ್ ಡಿಸೆರ್ಟ್ ಮತ್ತು ಫುಡ್ಡಿಂಗ್ ಫ್ಲೇವರ್- ಮದ್ಯಗಳ ಫ್ಲೇವರ್... ಎಲ್ಲದರದಲ್ಲೂ ಇದು ರುಚಿಯ ಗತ್ತನ್ನೇ ಬದಲಿಸುತ್ತದೆ.
ಇನ್ನೂ ಹೇಳಬೇಕೆಂದರೆ, ಕೊತ್ತಂಬರಿ ಅತಿ ಅಗ್ಗದ ಡಾಕ್ಟರ್. ಇದರ ಬೀಜಗಳಿಗೆ ವಾತಹರ, ಮೂತ್ರವರ್ಧಕ, ಶಕ್ತಿದಾಯಕ, ಜಠರೋತ್ತೇಜಕ, ಪಿತ್ತನಿರೋಧಕ, ಶೈತ್ಯಹರ ಗುಣಗಳಿವೆ. ನಿಮಗೆ ವಿಪರೀತ ಬಾಯಿ ವಾಸನೆ ಇದ್ದರೆ ನಾಲ್ಕಾರು ಕೊತ್ತಂಬರಿ ಬೀಜಗಳನ್ನು ಅಗಿದರೆ ಸಾಕು. ದುರ್ವಾಸನೆ ಮಂಗಮಾಯ. ಧನಿಯಾ ಬೀಜದ ಜತೆಗೆ ಏಲಕ್ಕಿ ಮತ್ತು ಕ್ಯಾರವೇ ಬೀಜಗಳನ್ನು ಬೆರೆಸಿ ಈ ಮಿಶ್ರಣದಿಂದ ಬಿಸಿ ನೀರಿನಲ್ಲಿ ತೆಗೆದ ಕಷಾಯವು ವಾತ, ಅಜೀರ್ಣ, ವಾಂತಿ ಮತ್ತು ಕರುಳಿನ ತೊಂದರೆಗಳನ್ನು ನಿವಾರಿಸುತ್ತದೆ.
ಇದರ ಚಂಚಲ ತೈಲವನ್ನು ಮುಖ್ಯವಾಗಿ ಮದ್ಯಗಳ, ಕೋಕೋ ಮತ್ತು ಚಾಕೊಲೇಟ್‌ಗಳ ತಯಾರಿಕೆಯಲ್ಲಿ ರುಚಿಕಾರಕವಾಗಿ ಬಳಸುತ್ತಾರೆ. ಈ ತೈಲವನ್ನು ನೀವೆಷ್ಟೇ ಹೊರ ವಾತಾವರಣಕ್ಕೆ ತೆರೆದಿಟ್ಟರೂ ಇದು ತನ್ನ ನೈಜತೆ ಕಳೆದುಕೊಳ್ಳುವುದಿಲ್ಲ. ವಾತಾವರಣದ ಇತರೆ ಅನಿಲಗಳೊಂದಿಗೆ ಬೆರೆಯುವ ಗುಣ ಅಥವಾ ಸುಲಭವಾಗಿ ಕೆಟ್ಟು ಹೋಗುವ ಗುಣ ಇದಕ್ಕೆ ಕಡಿಮೆ. ಅಲ್ಲದೆ, ಈ ಬೀಜಗಳಿಂದ ಉತ್ತಮ ತೈಲರಾಳವನ್ನು ತೆಗೆಯಬಹುದು. ತಿಂಡಿಗಳಲ್ಲಿ, ಪಾನೀಯ, ಉಪ್ಪಿನಕಾಯಿಗಳಲ್ಲಿ ಇದನ್ನು ರುಚಿಕಾರಕವಾಗಿ ಬಳಸುತ್ತಾರೆ. ಭಟ್ಟಿಗೆ ಹಾಕಿ ತೆಗೆದ ಬೀಜದ ಪುಡಿಯೂ ಉಪಯೋಗಕ್ಕೆ ಬರುತ್ತದೆ. ಆದರೆ, ಮನುಷ್ಯರಿಗಲ್ಲ! ಜಾನುವಾರಿಗಳಿಗೆ! ಇದರಲ್ಲಿ ಹೆಚ್ಚು ಸಸಾರಜನಕ ಮತ್ತು ಜಿಡ್ಡಿನಾಂಶ ಇರುವುದರಿಂದ ಜಾನುವಾರುಗಳಿಗಿದು ಪೌಷ್ಟಿಕ ಆಹಾರ.
ಇದರ ಬೀಜಗಳು ಎಷ್ಟು ತಂಪು ಎನ್ನುವುದಕ್ಕೆ ನಾನೊಂದು ಉದಾಹರಣೆ ಕೊಡುತ್ತೇನೆ. ನಮ್ಮ ಹೋಟೆಲ್‌ನಲ್ಲೊಬ್ಬ ಮಂಜುನಾಥ ಅಂತ ಇದ್ದ. ಅವನಿಗೆ ಅಡುಗೆಮನೆಯೊಳಗಿನ ಕೆಲಸ. ಎಷ್ಟೊತ್ತಿಗೂ ಬೆಂಕಿ ಮುಂದೆ ಇರುತ್ತಿದ್ದರಿಂದ, ಅತಿ ಉಷ್ಣದ ಕಾರಣಕ್ಕಾಗಿ ಅವನ ಕಣ್ಣುಗಳು ಕೆಂಪೇರುತ್ತಿದ್ದವು. ಹಾಗೆ ಕೆಂಪೇರಿ, ನೀರು ಸುರಿಯುತ್ತಿರುವುದನ್ನು ನೋಡಲಿಕ್ಕೂ ಆಗದು. ಇನ್ನು ಆತ ಕೆಲಸ ಮಾಡುವುದಾದರೂ ಹೇಗೆ? ನಾನು ಶುಚಿತ್ವಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದರಿಂದ ಬಹುಶಃ ಅವನು ಮತ್ತಷ್ಟು ಸಂಕಟಕ್ಕೆ ಬೀಳುತ್ತಿದ್ದ. ಇದೇ ಕಾರಣಕ್ಕಾಗಿ ಆಗಾಗ್ಗೆ ರಜೆ ಹಾಕುತ್ತಿದ್ದ ಅವನನ್ನು ಕರೆದು ವಿಚಾರಿಸಿದೆ. ನಾಲ್ಕೈದು ಚಮಚ ಕೊತ್ತಂಬರಿ ಬೀಜಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು, ಶುದ್ಧ ನೀರಿನ ಲೋಟದಲ್ಲಿ ರಾತ್ರಿ ನೆನೆಯಿಟ್ಟು, ಬೆಳಗ್ಗೆ ಮುಂಚೆ ಕಣ್ಣಿಗೆ ಬಿಟ್ಟುಕೊಳ್ಳಲು ಸೂಚಿಸಿದೆ.
ಅವನೀಗ ವಾರಕ್ಕೆರಡು ಬಾರಿಯಾದರೂ ಹಾಗೆ ಮಾಡುತ್ತಾನೆ. ಉಷ್ಣವೆಲ್ಲ ನಿವಾರಣೆಯಾಗಿ, ಅವನೀಗ ಆರಾಮಾಗಿದ್ದಾನೆ!

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com
ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com