ಯಾರು ಬೇಕಾದ್ರೂ ಡ್ಯಾನ್ಸ್ ಮಾಡ್ಬಹುದು!
ಹಾಗೆನ್ನುತ್ತ ಮೀಸೆ ಅಡಿಯಲ್ಲೇ ನಗುತ್ತಾರೆ ಪ್ರಭುದೇವ್. ಹೆಚ್ಚು ಯೋಚಿಸ್ಬೇಡಿ. ಅದು ಅವರ ಹಿಂದಿ ಸಿನಿಮಾ ಹೆಸರು. ಫೆ.8ರಂದು ಬೆಳ್ಳಿ ಪರದೆಗೆ ಅಪ್ಪಳಿಸಲಿರುವ 'ಎನಿ ಬಡಿ ಕ್ಯಾನ್ ಡ್ಯಾನ್ಸ್' (ಎಬಿಸಿಡಿ) ಪೋಸ್ಟರ್ಗಳೇ ಸದ್ದು ಮಾಡುತ್ತಿವೆ. ಅದರಲ್ಲಿ ಭಾರತದ ಮೈಕೆಲ್ ಜಾಕ್ಸನ್ ಕಾಣಿಸಿಕೊಂಡಿರುವ ರೀತಿ ಹಾಗಿದೆ. ಮಜಾ ಗೊತ್ತಾ? ಪೋಸ್ಟರ್ಗೆ ಬಳಸಲಾಗಿರುವ ಫೋಟೋಗಳನ್ನು ಸ್ಪೆಶಲ್ ಸೆಷನ್ನಲ್ಲಿ ತೆಗೆದದ್ದಲ್ಲ. ಅದೇ ಪ್ರಭುದೇವ್ಗೂ ಆಶ್ಚರ್ಯವಾಗಿದೆ. ಎಷ್ಟೇ ತಲೆ ಕೆರೆದುಕೊಂಡ್ರೂ ಉತ್ತರ ಸಿಗ್ತಾ ಇಲ್ಲ. 'ಈ ಫೋಟೊಗಳನ್ನ ಯಾರು ಯಾವಾಗ ಕ್ಲಿಕ್ ಮಾಡಿದ್ರು ಅನ್ನೋದೇ ನನ್ಗೆ ಗೊತ್ತಿಲ್ಲ. ಅದರಲ್ಲಿ ಬಳಸಿರೋದು ನ್ಯಾಚುರಲ್ ಫೋಸ್. ಚೆನ್ನಾಗಿ ತೆಗೆದಿದ್ದಾರೆ. ಅದ್ಕೇ ಎಲ್ಲರಿಗೂ ಸಖತ್ ಇಷ್ಟವಾಗ್ತಿದೆ' ಎಂದು ಖುಷ್ಖುಷಿಯಾಗೇ ಹೇಳ್ತಾರವರು.
ಪ್ರಭುಗಿನ್ನೂ ಎಬಿಸಿಡಿ ಗುಂಗು. 'ಶೂಟಿಂಗ್ ಮುಗಿಯೋವರೆಗೆ ಡ್ಯಾನ್ಸೇ ನಮ್ಮ ಪ್ರಪಂಚವಾಗಿತ್ತು. ಎಷ್ಟು ಡ್ಯಾನ್ಸ್ ಮಾಡಿದ್ದೀನಿ ಅನ್ನೋದನ್ನ ಹೇಳಕ್ಕಾಗಲ್ಲ. ನಮ್ಮ ಮಾತುಕತೆ ಕೂಡ ಡ್ಯಾನ್ಸ್ ಸುತ್ತಲೇ ಸುತ್ತಿತ್ತು. ಈ ಸಿನಿಮಾಕ್ಕೆ ನನ್ನ ದೇಹತೂಕದಲ್ಲಿ ಏಳು ಕೆ.ಜಿ. ಕಡಿಮೆ ಮಾಡಿಕೊಂಡಿದ್ದೀನಿ' ಎನ್ನುತ್ತಾರವರು.
ಕೊರಿಯೋಗ್ರಾಫರ್ ಕಮ್ ಡೈರೆಕ್ಟರ್ ರೆಮೊ ಡಿಸೋಜಾ ನಿರ್ದೇಶನದ ಚಿತ್ರ ಡ್ಯಾನ್ಸ್ ಸುತ್ತವೇ ಗಿರಕಿ ಹೊಡೆಯುತ್ತದಂತೆ. ಇದು ಭಾರತದ ಮೊದಲ 3ಡಿ ಡಾನ್ಸ್ ಸಿನಿಮಾ ಕೂಡ. ಭಾರತೀಯ ಯುವಕರಲ್ಲಿ ಡ್ಯಾನ್ಸ್ ಬಗ್ಗೆ ಹುಚ್ಚು ಹತ್ತಿಸಲಿದೆ ಅನ್ನೋದು ರೆಮೊ ಮತ್ತು ಪ್ರಭು ವಿಶ್ವಾಸ. ಇದರಲ್ಲಿ ಒಂಬತ್ತು ಹಾಡುಗಳು ಮತ್ತು ಪುಟ್ಟದೊಂದು ಫೈಟ್ ಇದೆಯಂತೆ.
ಇನ್ನೊಂದು ವಿಶೇಷ ಎಂದರೆ ಎಬಿಸಿಡಿಗಾಗಿ ಮೊದಲ ಸಲ ಹಿಂದಿಯಲ್ಲಿ ಡಬ್ ಮಾಡಿದ್ದಾರೆ ಪ್ರಭುದೇವ್. 'ನನ್ನ ಹಿಂದಿ ಉಚ್ಚಾರಣೆ ಸ್ವಲ್ಪ ಕಷ್ಟ. ಚಿತ್ರತಂಡಕ್ಕೆ ನನ್ನ ಧ್ವನಿಯೇ ಬೇಕೆಂಬ ಹಠ. ಪಾಪ, ರೆಕಾರ್ಡಿಂಗ್ ಮುಗಿಸೋವಷ್ಟರಲ್ಲಿ ಎಂಜಿನಿಯರ್ ಸುಸ್ತೋಸುಸ್ತು' ಎಂದು ನಗುತ್ತಾರೆ ಪ್ರಭುದೇವ್.
ಚಿತ್ರದ ಕಥೆ ಹೊಳೆದ ತಕ್ಷಣ ರೆಮೊ ಮಾಡಿದ ಕೆಲಸ ಪ್ರಭುದೇವ್ರನ್ನು ಸಂಪರ್ಕಿಸಿದ್ದು. ಅವರು ಓಕೆ ಅಂದನಂತರವೇ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಕೊಂಡಿದ್ದು. 'ಪ್ರಭು ಹೊರತಾಗಿ ಬೇರಾರೂ ನನ್ನ ಮನಸ್ಸಿನಲ್ಲಿರಲಿಲ್ಲ. ಈಗಲೂ ಅಷ್ಟೆ. ಪ್ರಭುದೇವ್ ಇಲ್ಲದ ಎಬಿಸಿಡಿಯನ್ನು ಊಹಿಸಿಕೊಳ್ಳುವುದೂ ನನ್ನಿಂದ ಸಾಧ್ಯವಿಲ್ಲ' ಎಂದು ಬೆನ್ನು ತಟ್ಟಿದ್ದಾರೆ ರೆಮೊ.
- ರಾಜೇಶ ಮುಂಡಿಗೇಸರ