

ತಂದೆ ತಾಯಿ ತಮ್ಮ ಮಕ್ಕಳಿಗೆ ಕಲಿಸಬೇಕಾದ ಪಾಠವೆಂದರೆ ಸ್ವಾವಲಂಬಿ ಜೀವನ ವಿಧಾನ. ಇದು ಸಮಾಜದಲ್ಲಿ ನಮ್ಮನ್ನು ಉನ್ನತಮಟ್ಟಕ್ಕೇರಿಸುತ್ತದೆ. ಎಷ್ಟು ಗಳಿಸುತ್ತೀರಿ ಎನ್ನುವುದಕ್ಕಿಂತ ಎಷ್ಟು ಉಳಿಸುತ್ತೀರಿ ಎನ್ನುವುದು ಸ್ವಾವಲಂಬಿ ಜೀವನದಲ್ಲಿ ಅಡಗಿದೆ.
'ಪ್ರತಿಯೊಬ್ಬನೂ ಸ್ವಪ್ರಯತ್ನದಿಂದ ತನ್ನ ಮೇಲ್ಮೆಯನ್ನು ಸಾಧಿಸಿಕೊಳ್ಳಬೇಕು' ಎಂಬ ಮಾತು ಎಲ್ಲ ಕ್ಷೇತ್ರಗಳಿಗೂ ಅನ್ವಯವಾಗುವುದು. ತಮಗೆ ತಾವೇ ಸಹಾಯ ಮಾಡಿಕೊಳ್ಳುವುದಕ್ಕೆ ನಾವು ಅವರಿಗೆ ಸಹಾಯ ನೀಡಬೇಕು. ಮತ್ತೊಬ್ಬರನ್ನು ಆಳುವುದರಿಂದ ಅವರಿಗೆ ಒಳ್ಳೆಯದನ್ನು ಮಾಡುತ್ತೇವೆ ಎಂಬ ಭಾವನೆಯನ್ನು ತೊರೆಯಿರಿ. ಗಿಡಕ್ಕೆ ಬೆಳೆಯಲು ಮಾತ್ರ ಸಹಾಯ ಮಾಡಬಹುದು. ಬೀಜದ ಬೆಳವಣಿಗೆಗೆ ಸಾಮಗ್ರಿ ಒದಗಿಸಬಹುದು. ಮಣ್ಣು, ನೀರು, ಗಾಳಿ, ಗೊಬ್ಬರಗಳನ್ನು ಕೊಡಬಹುದು. ಬೀಜ ಮಾತ್ರ, ತನ್ನ ಸ್ವಭಾವಕ್ಕೆ ಅನುಗುಣವಾಗಿ ತನಗೆ ಬೇಕಾದುದನ್ನು ಹೀರಿ ಜೀರ್ಣಿಸಿಕೊಂಡು ತನ್ನ ನಿಯಮದಂತೆ ಬೆಳೆಯುವುದು.
'ಎದ್ದು ನಿಲ್ಲಿ, ಹೋರಾಡಿ, ಒಂದು ಹೆಜ್ಜೆಯನ್ನು ಹಿಂದಿಡಬೇಡಿ. ಇಡೀ ಪ್ರಪಂಚವೇ ನಿಮಗೆ ಎದುರಾಗಿ ನಿಲ್ಲಲಿ! ಹೋರಾಡಿ. ಹೇಡಿಗಳಾಗುವುದರಿಂದ ನಿಮಗೇನೂ ಲಾಭವಿಲ್ಲ. ನೀವು ಜಗತ್ತಿನ ಎಲ್ಲ ದೇವರಿಗೂ ಮೊರೆಯಿಟ್ಟಾಯಿತು. ಕಷ್ಟಗಳೇನಾದರೂ ದೂರವಾದವೇ? ಮೂಢನಂಬಿಕೆಗಳಿಗೆ ತಲೆಬಾಗುವುದು, ನಿಮ್ಮನ್ನೇ ನೀವು ಆಸೆಗೆ ಮಾರಿಕೊಳ್ಳುವುದು ತಕ್ಕುದಲ್ಲ. ನೀವು ಅನಂತ ಸ್ವರೂಪರು. ಜನನವಿಲ್ಲದವರು, ಮರಣವಿಲ್ಲದವರು, ಗುಲಾಮರಾಗಿರುವುದು ನಿಮಗೆ ಹೇಳಿಸಿದ್ದಲ್ಲ.. ಏಳಿ, ಎಚ್ಚರಗೊಳ್ಳಿ. ನೀವೇ ಸಕಲ ಜಗತ್ತಾಗಿರುವಾಗ ನಿಮಗೆ ನೆರವಾಗಲು ಯಾರಿಂದಾದೀತು?' ಸ್ವಾವಲಂಬಿಗಳಾಗಿ... <
-ಆನಂದ ಎಸ್.ಎನ್.